ಉಡುಪಿ: ಬಿರುಗಾಳಿ ಸಹಿತ ಮಳೆಯಾಗುತ್ತಿದ್ದಾಗ ಚಲಿಸುತ್ತಿದ್ದ ಆಟೋ ರಿಕ್ಷಾ ಮೇಲೆ ಬೃಹತ್ ಮರ ಬಿದ್ದು, ಇಬ್ಬರು ಪ್ರಯಾಣಿಕರು ಮೃತಪಟ್ಟು, ಚಾಲಕ ಅಪಾಯದಿಂದ ಪಾರಾಗಿರುವ ಘಟನೆ ಜಿಲ್ಲೆಯ (Udupi News) ಕಾಪು ತಾಲೂಕಿನ ಮಜೂರು ಮಸೀದಿ ಬಳಿ ಗುರುವಾರ ಸಂಜೆ ನಡೆದಿದೆ.
ಪಾದೂರಿನ ಕೂರಾಲಿನ ಪುಷ್ಪಾ (49) ಹಾಗೂ ಮತ್ತೊಬ್ಬ ಪುರುಷ ಮೃತಪಟ್ಟ ದುರ್ದೈವಿಗಳು. ಕಾಪುವಿನಿಂದ ಶಾಂತಿಗುಡ್ಡೆಗೆ ರಿಕ್ಷಾದಲ್ಲಿ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ತೆರಳುತ್ತಿದ್ದ ವೇಳೆ ಭಾರಿ ಗಾಳಿ ಮಳೆಗೆ ಮಲ್ಲಾರು ಬಳಿ ರಸ್ತೆ ಬದಿಯಲ್ಲಿದ್ದ ಮರವು ರಿಕ್ಷಾದ ಮೇಲೆ ಬಿದ್ದಿದೆ. ಪರಿಣಾಮ ರಿಕ್ಷಾದಲ್ಲಿದ್ದ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಚಾಲಕ ಸಣ್ಣ ಪುಟ್ಟ ಗಾಯದೊಂದಿಗೆ ಅದೃಷ್ಟವಶಾತ್ ಪಾರಾಗಿದ್ದಾರೆ.
ಇದೇ ವೇಳೆ ಚಂದ್ರನಗರ ಬದಿಯಿಂದ ಕಾಪು ಕಡೆಗೆ ತೆರಳುತ್ತಿದ್ದ ರಿಕ್ಷಾವು ಮರ ಬೀಳುವುದನ್ನು ಗಮನಿಸಿ ಒಮ್ಮೆಲೆ ರಿಕ್ಷಾವನ್ನು ತಿರುಗಿಸಿದ ಪರಿಣಾಮ ರಿಕ್ಷಾವು ಜಖಂ ಗೊಂಡಿದ್ದು, ಅದರ ಚಾಲಕ ಮತ್ತು ಪ್ರಯಾಣಿಕರು ಸಣ್ಣ-ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಬೃಹತ್ ಮರವು ಬಿದ್ದ ಪರಿಣಾಮ ರಸ್ತೆಯೂ ಸಂಪೂರ್ಣ ಬಂದ್ ಆಗಿತ್ತು. ಸ್ಥಳೀಯರು ಮತ್ತು ಕಾಪು ಪೋಲಿಸರು, ಕೆ.ಇ.ಬಿ ಲೈನ್ ಮ್ಯಾನ್, ಅಗ್ನಿಶಾಮಕ ದಳದ ಸುಮಾರು 2 ಗಂಟೆ ಕಾರ್ಯಚರಣೆಯ ಬಳಿಕ ಮೃತದೇಹಗಳನ್ನು ಹೊರತೆಗೆಯಲಾಯಿತು.
ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ನೂರಾರು ಯುವಕರು ಸ್ಥಳಕ್ಕೆ ಆಗಮಿಸಿ ಮರ ತೆರವು ಕಾರ್ಯಾಚರಣೆಗೆ ಸಹಕರಿಸಿದರು.
ಇದನ್ನೂ ಓದಿ | Murder Case: ಬಸ್‌ನೊಳಗೆ ನುಗ್ಗಿ ಚಾಲಕನನ್ನು ಬರ್ಬರವಾಗಿ ಕೊಚ್ಚಿ ಕೊಂದ ಹಂತಕರು
ಶಿವಮೊಗ್ಗ ಬಳಿ ಖಾಸಗಿ ಬಸ್‌ಗಳ ಮುಖಾಮುಖಿ ಡಿಕ್ಕಿ; ಚಾಲಕ ಸೇರಿ ಐವರು ಸ್ಥಳದಲ್ಲೇ ಮೃತ್ಯು
ಶಿವಮೊಗ್ಗ: ಅತಿವೇಗವಾಗಿ ಚಲಿಸುತ್ತಿದ್ದ ಬಸ್‌ಗಳು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಚಾಲಕ ಸೇರಿ ಐವರು ಸ್ಥಳದಲ್ಲೇ ಉಸಿರು ಚೆಲ್ಲಿರುವ ಘಟನೆ ಕುಂಸಿ ಬಳಿಯ ಚೋರಡಿ ಸೇತುವೆ ನಡೆದಿದೆ.
ಶಿಕಾರಿಪುರದಿಂದ ಶಿವಮೊಗ್ಗದೆಡೆಗೆ ಸಾಗುತ್ತಿದ್ದ ಕಾಳಪ್ಪ ಬಸ್ ಹಾಗೂ ಶಿವಮೊಗ್ಗದಿಂದ ಶಿಕಾರಿಪುರದೆಡೆಗೆ ಸಾಗುತ್ತಿದ್ದ ಬಾಲಾಜಿ ಬಸ್‌ಗಳ ನಡುವೆ ಅಪಘಾತ ಸಂಭವಿಸಿದೆ.
ಶಿವಮೊಗ್ಗ- ಸಾಗರ ನಡುವೆ ಸಿಗುವ ಕುಂಸಿ ಹೋಬಳಿ ಬಳಿ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಬಸ್ಸಿನ ಚಾಲಕ ಕಾಳಪ್ಪ ಮೃತಪಟ್ಟಿದ್ದಾರೆ. ಬಾಲಾಜಿ ಬಸ್ ಚಾಲಕನಿಗೆ ಗಂಭೀರ ಗಾಯವಾಗಿದೆ. ಎರಡೂ ಬಸ್‌ಗಳಲ್ಲಿ ಒಟ್ಟು 75-80 ಜನ ಪ್ರಯಾಣಿಕರಿದ್ದರು ಎನ್ನಲಾಗಿದೆ. ಬಸ್ಸಿನ ಮುಂಭಾಗದಲ್ಲಿ ಕುಳಿತವರಿಗೂ ಗಂಭೀರ ಗಾಯಗಳಾಗಿದ್ದು, ಐವರು ಮೃತಪಟ್ಟಿದ್ದು ಸಾವಿನ ಸಂಖ್ಯೆ ಏರಿಕೆ ಆಗುತ್ತಲೆ ಇದೆ.
ಅಪಘಾತ ನಡೆಯುತ್ತಿದ್ದಂತೆ ಸ್ಥಳೀಯ ಸಹಾಯಕ್ಕೆ ಧಾವಿಸಿದ್ದು, ಬಸ್ಸಿನಲ್ಲಿ ಸಿಲುಕಿರುವ ಪ್ರಯಾಣಿಕರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.