Site icon Vistara News

Social media post | ಜಾಲತಾಣದಲ್ಲಿ ಸಚಿವ ಸುನಿಲ್‌ ಕುಮಾರ್‌ ಅವಹೇಳನ: ಆರೋಪಿಗಳಿಗೆ ದಂಡ, ಕ್ಷಮೆ ಯಾಚನೆಗೆ ಸೂಚನೆ

ಸುನೀಲ್ ಕುಮಾರ್

ಬೆಂಗಳೂರು: ಇಂಧನ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ವಿ. ಸುನಿಲ್ ಕುಮಾರ್ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಬರಹ (Social media post) ಪ್ರಕಟಿಸಿದ್ದ ಕಾರ್ಕಳದ ಇಬ್ಬರು ಸ್ಥಳೀಯ ಮುಖಂಡರಿಗೆ ಬೆಂಗಳೂರಿನ ೧೨ನೇ ಸಿಟಿ ಸಿವಿಲ್ ನ್ಯಾಯಾಲಯ ದಂಡ ವಿಧಿಸುವ ಜತೆಗೆ ಬಹಳ ಬೇಷರತ್ ಕ್ಷಮೆ ಯಾಚನೆಗೆ ಸೂಚಿಸಿದೆ.

ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಕಾರ್ಕಳದ ಯೋಗೇಶ್ ನಯನಾ ಇನ್ನಾ ಹಾಗೂ ರಾಧಾಕೃಷ್ಣ ನಾಯಕ್ ಎಂಬುವರು ಸುನಿಲ್ ಕುಮಾರ್ ವಿರುದ್ಧ ಫೇಸಬುಕ್ ಹಾಗೂ ಇತರೆ ಜಾಲತಾಣದಲ್ಲಿ ಅವಹೇಳನಕಾರಿ, ಸುಳ್ಳು ಹಾಗೂ ದುರುದ್ದೇಶಪೂರಿತ ಬರಹವನ್ನು ಪ್ರಕಟಿಸಿದ್ದರು.

ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ನ್ಯಾಯಾಲಯದ ಮೊರೆ ಹೋದ ಸಚಿವ ಸುನಿಲ್ ಕುಮಾರ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳು ಬೇಷರತ್ ಕ್ಷಮೆ ಯಾಚಿಸುವ ಜತೆಗೆ ತಲಾ ೨೫ ಸಾವಿರ ರೂ. ದಂಡ ಪಾವತಿಸಬೇಕು. ಜತೆಗೆ ಇನ್ನು ಮುಂದೆ ಆಧಾರ ರಹಿತ, ಅಪ್ರಮಾಣಿಕೃತ, ದುರುದ್ದೇಶಪೂರಿತ ಬರಹಗಳನ್ನು ಜಾಲತಾಣದಲ್ಲಿ ಪ್ರಕಟಿಸಬಾರದು ಎಂದು ಪ್ರತಿಬಂಧ ವಿಧಿಸಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ‌ ನೀಡಿರುವ ಸಚಿವ ಸುನಿಲ್ ಕುಮಾರ್, “ನನ್ನ ವಿರುದ್ಧ ಜಾಲ ತಾಣದಲ್ಲಿ ಕೆಲವರು ವ್ಯವಸ್ಥಿತ ಅಪಪ್ರಚಾರ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದೆ. ಈಗ ನನ್ನ ಪರ ತೀರ್ಪು ಬಂದಿದೆ. ಮಾನಹಾನಿಕಾರಿ ಬರಹಗಳನ್ನು ಜಾಲತಾಣದಲ್ಲಿ ಪ್ರಕಟಿಸುವವರಿಗೆ ಇದೊಂದು ಪಾಠʼʼ ಎಂದು ಹೇಳಿದ್ದಾರೆ.

ಇದನ್ನೂ ಓದಿ | Praveen thogadia | ಪ್ರವೀಣ್‌ ತೊಗಾಡಿಯಾ ಉಡುಪಿ ಪ್ರವೇಶ ನಿರ್ಬಂಧ ಪ್ರಶ್ನಿಸಿದ ಅರ್ಜಿ ಏಳು ವರ್ಷಗಳ ಬಳಿಕ ವಜಾ!

Exit mobile version