Site icon Vistara News

ಬೆಳಗಾವಿ | ಮಳೆಗೆ ಕುಸಿದ ಶಾಲೆ ಕಟ್ಟಡಗಳು, ಒಂದಂತೂ ಕಣ್ಣೆದುರೇ ಉರುಳಿತು, ಮಕ್ಕಳು ಬಚಾವ್‌

school building

ಬೆಳಗಾವಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಮತ್ತು ಪ್ರವಾಹದಿಂದಾಗಿ ಹಲವು ಕಡೆ ಮನೆಗಳು ಉರುಳಿ ಬಿದ್ದಿವೆ. ಜಿಲ್ಲೆಯಲ್ಲಿ ಎರಡು ಶಾಲೆ ಕಟ್ಟಡಗಳು ಕೂಡಾ ಉರುಳಿ ಬಿದ್ದಿವೆ. ಅದರಲ್ಲಿ ಒಂದು ಕಟ್ಟಡವಂತೂ ಕಣ್ಣೆದುರೇ ಕುಸಿದು ಆತಂಕವನ್ನು ಸೃಷ್ಟಿಸಿತು. ಮಕ್ಕಳನ್ನು ತುರ್ತಾಗಿ ಶಿಫ್ಟ್‌ ಮಾಡಿದ್ದರಿಂದ ದೊಡ್ಡ ಅಪಾಯ ತಪ್ಪಿತು.

ಗುಂಡೇನಟ್ಟಿಯಲ್ಲಿ
ಜಿಲ್ಲೆಯ ಖಾನಾಪುರ ತಾಲೂಕಿನ ಗುಂಡೇನಟ್ಟಿ ಗ್ರಾಮದಲ್ಲಿರುವ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಗೋಡೆ ಮಳೆಗೆ ಕುಸಿದು ಬಿದ್ದಿದೆ. ಹಲವು ದಿನಗಳ ಮಳೆಗೆ ಶಿಥಿಲಾವಸ್ಥೆ ತಲುಪಿದ್ದ ಶಾಲಾ ಕಟ್ಟಡದ ಒಂದು ಪಾರ್ಶ್ವದ ಗೋಡೆ ಗುರುವಾರ ಉರುಳಿ ಬಿತ್ತು. ಆದರೆ, ಅದೃಷ್ಟವಶಾತ್‌ ಈ ಸಂದರ್ಭದಲ್ಲಿ ಮಕ್ಕಳು ಇರಲಿಲ್ಲ. ಹೀಗಾಗಿ ಯಾರಿಗೂ ಅಪಾಯವಾಗಿಲ್ಲ.

ಭಾರಿ ಮಳೆಗೆ ಕುಸಿದ ಗುಂಡೇನಟ್ಟಿ ಶಾಲೆಯ ಗೋಡೆ

ಸಿಂಗಿನಕೊಪ್ಪ ಗ್ರಾಮದಲ್ಲಿ
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಸಿಂಗಿನಕೊಪ್ಪ ಗ್ರಾಮದಲ್ಲಿ ಶಾಲಾ ಕಟ್ಟಡವೊಂದು ಕಣ್ಣೆದುರೇ ಉರುಳಿ ಬಿದ್ದಿದೆ. ಕಟ್ಟಡದ ಒಂದು ಭಾಗದ ಮೇಲ್ಚಾವಣಿ ಕುಸಿಯುತ್ತಿರುವುದನ್ನು ಕಂಡು ಎಚ್ಚೆತ್ತ ಶಿಕ್ಷಕರು ಕೂಡಲೇ ಮಕ್ಕಳನ್ನು ಬೇರೆ ಕೊಠಡಿಗೆ ಶಿಫ್ಟ್‌ ಮಾಡಿದರು. ಹಾಗಾಗಿ ಮೇಲ್ಚಾವಣಿ ಕುಸಿದರೂ ಅಪಾಯ ಉಂಟಾಗಲಿಲ್ಲ.

ಈ ಒಂದೇ ಕೊಠಡಿಯಲ್ಲಿ ಮೂವತ್ತು ಮಕ್ಕಳು ಪಾಠ ಕೇಳುತ್ತಿದ್ದರು. ಆಗ ಮೇಲಿನಿಂದ ಚಾವಣಿ ಬೀಳುವ ಸೂಚನೆ ಕಾಣಿಸಿತು. ಆಗ ಕೂಡಲೇ ಮಕ್ಕಳನ್ನು ಹೊರಗೆ ಕಳುಹಿಸಲಾಯಿತು. ಬಳಿಕ ಸ್ವಲ್ಪ ಹೊತ್ತಿನಲ್ಲಿ ಚಾವಣಿ ಉರುಳಿ ಬಿತ್ತು. ಬಳಿಕ ಸಮುದಾಯ ಭವನದಲ್ಲಿ ಕಲಿಕೆ ಆರಂಭಿಸಲಾಗಿದೆ.

ಬೆಳಗಾವಿ ಜಿಲ್ಲೆಯ ಹಲವು ಕಡೆಗಳಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಶಿಥಿಲ ಕಟ್ಟಡಗಳು ಉರುಳುತ್ತಲೇ ಇವೆ. ಹಲವು ಕಡೆ ನದಿ ನೀರಿನಿಂದ ದೊಡ್ಡ ಮಟ್ಟದ ಪ್ರವಾಹ ಸೃಷ್ಟಿಯಾಗಿ ಕಟ್ಟಡಗಳು ಶಿಥಿಲಗೊಂಡಿದ್ದವು.

ಇದನ್ನೂ ಓದಿ| Heavy Rain | ಉಕ್ಕಿ ಹರಿಯುವ ಸೇತುವೆ ದಾಟಲು ಜೆಸಿಬಿ ಮೊರೆ ಹೋದ ಶಾಲಾ ಮಕ್ಕಳು!

Exit mobile version