ಬೆಂ.ಗ್ರಾಮಾಂತರ: ತಮಿಳುನಾಡಿನ ಹೊಸೂರು ಸಮೀಪದ ಬಾಗಲೂರಿನ ಕೆರೆಯಲ್ಲಿ ಮುಳುಗಿ (Drown in lake) ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಕೆರೆಯಲ್ಲಿ ಈಜಲು ತೆರಳಿದ್ದ ಐವರ ಪೈಕಿ ಇಬ್ಬರು ವಿದ್ಯಾರ್ಥಿಗಳು ಈಜು ಬಾರದೆ ನೀರಿನಲ್ಲಿ ಮುಳುಗಿದ್ದಾರೆ.
ಬಾಗಲೂರು ಗ್ರಾಮದ ವಿನೋದ್ ಸಿಂಗ್, ಶಶಾಂಕ್ ಮೃತ ಬಾಲಕರು. ವಿಷಯ ತಿಳಿದು ಬಾಗಲೂರು ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ, ಮೃತ ದೇಹಗಳನ್ನು ಹೊರತೆಗೆದಿದ್ದಾರೆ. ಬಾಗಲೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಮೀನು ವಿಚಾರಕ್ಕೆ ದೊಣ್ಣೆಗಳಿಂದ ಬಡಿದಾಟ, ನಾಲ್ವರಿಗೆ ಗಾಯ
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಹಳೆಯೂರು ಗ್ರಾಮದಲ್ಲಿ ಮನೆಯ ಮುಂದಿನ ಜಮೀನು ವಿಚಾರವಾಗಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದು, ನಾಲ್ವರಿಗೆ ಗಾಯಗಳಾಗಿವೆ. ಗ್ರಾಮದ ನಾರಾಯಣಸ್ವಾಮಿ ಮತ್ತು ಮುನಿ ಆಂಜಿನಪ್ಪ ಕುಟುಂಬಸ್ಥರ ನಡುವೆ ಈ ಹಿಂದಿನಿಂದಲೂ ಮನೆ ಮುಂದಿನ 6 ಗುಂಟೆ ಜಮೀನು ವಿಚಾರಕ್ಕೆ ಆಗಾಗ ಜಗಳ ನಡೆಯುತ್ತಿತ್ತು. ಆದರೆ ಮುನಿ ಆಂಜಿನಪ್ಪ ಕುಟುಂಬದ ಕಿರಿಕ್ನಿಂದಾಗಿ ನಾರಾಯಣಸ್ವಾಮಿ ಕುಟುಂಬಸ್ಥರು ಭಾನುವಾರ ಮನೆ ಮುಂದೆ ಸಿಸಿ ಕ್ಯಾಮರಾ ಅಳವಡಿಕೆಗೆ ಮುಂದಾಗಿದ್ದರು. ಹೀಗಾಗಿ ಜಗಳ ನಡೆದು, ಎರಡು ಕುಟುಂಬಗಳ ಸದಸ್ಯರು ದೊಣ್ಣೆಗಳನ್ನು ಹಿಡಿದು ಹೊಡೆದಾಡಿಕೊಂಡಿದ್ದಾರೆ. ಇದರಿಂದ ನಾಲ್ವರಿಗೆ ಗಂಭೀರ ಗಾಯಗಳಾಗಿವೆ.
ಇದನ್ನೂ ಓದಿ | Suicide Case: ಪತಿಯಿಂದ ವರದಕ್ಷಿಣೆ ಕಿರುಕುಳ; ಡೆತ್ ನೋಟ್ ಬರೆದಿಟ್ಟು ಗೃಹಿಣಿ ಆತ್ಮಹತ್ಯೆ
ಜಮೀನು ವಿವಾದ ಪ್ರಕರಣದ ವಿಚಾರಣೆ ತಹಸೀಲ್ದಾರ್ ಹಾಗೂ ಎಸಿ ಕೋರ್ಟ್ನಲ್ಲಿ ನಡೆಯುತ್ತಿದೆ. ಆದರೆ ಮುನಿ ಆಂಜಿನಪ್ಪ ಮಕ್ಕಳು ಹಾಗೂ ಕುಟುಂಬಸ್ಥರು ಈ ನಡುವೆ ನಾರಾಯಣಸ್ವಾಮಿ ಮನೆಯ ಮುಂದೆಯೇ ಕಸ ಸೇರಿ ಇನ್ನಿತರ ವಸ್ತುಗಳ ಹಾಕಿ ಕಿರಿಕ್ ಮಾಡುತ್ತಲೇ ಇದ್ದರು ಎನ್ನಲಾಗಿದೆ. ಇದರಿಂದ ಸಿಸಿಟಿವಿ ಅಳವಡಿಕೆಗೆ ನಾರಾಯಣಸ್ವಾಮಿ ಮಕ್ಕಳು ಮುಂದಾಗುತಿದ್ದಂತೆ, ಸಿಸಿಟಿವಿ ಯಾಕೋ ಹಾಕಿದಿರಿ ಎಂದು ಮುನಿ ಆಂಜಿನಪ್ಪ ಕಡೆಯವರು ಮನಬಂದಂತೆ ನಾಲ್ವರ ಮೇಲೆ ಹಲ್ಲೆ ನಡೆಸಿದ್ದಾರೆ. ಗಾಯಾಳುಗಳನ್ನು ಅಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ವಿಜಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜಮೀನು ವಿವಾದ; ಎರಡು ಕುಟುಂಬಗಳ ನಡುವೆ ಮಾರಾಮಾರಿ
ತುಮಕೂರು: ಜಿಲ್ಲೆಯ ತುರುವೇಕೆರೆ ತಾಲೂಕಿನ ಕೋಳಘಟ್ಟ ಕಾವಲ್ನಲ್ಲಿ ಜಮೀನು ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ. ನಾಯಕನಘಟ್ಟ ಗ್ರಾಮದ ದಾಕ್ಷಾಯಣಿ ಮತ್ತು ಅಜ್ಜೇನಹಳ್ಳಿ ಗ್ರಾಮದ ಕೆಂಚಪ್ಪ ಕುಟುಂಬದ ನಡುವೆ ಜಮೀನು ವಿಚಾರಕ್ಕೆ ಗಲಾಟೆ ನಡೆದಿದ್ದು, ಮಾರಾಮಾರಿಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎರಡು ಕುಟುಂಬಗಳ ನಡುವೆ ಕೋಳಘಟ್ಟ ಕಾವಲ್ನ ಸರ್ವೆ ನಂ.5/2ರ 3 ಎಕರೆ 1 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ವಿವಾದವಿದೆ. 1977ರಿಂದ ದಾಕ್ಷಾಯಣಿ ಮತ್ತು ಕುಟುಂಬ ಈ ಜಮೀನನ್ನು ಬಳಸುತ್ತಿದ್ದಾರೆ. ಆದರೆ ಈ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಕೆಂಚಪ್ಪ ಮಕ್ಕಳಾದ ನಾಗೇಶ್ ಮತ್ತು ಯೋಗಾನಂದ್ ತೆಂಗಿನ ಕಾಯಿ ಕೀಳುತ್ತಿದ್ದರು ಎನ್ನಲಾಗಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ದಾಕ್ಷಾಯಣಿ ಕುಟುಂಬದವರ ಮೇಲೆ ಹಲ್ಲೆ ಮಾಡಲಾಗಿದೆ.
ಮೊದಲಿಗೆ ನಾಗೇಶ್ ಮತ್ತು ಯೋಗಾನಂದ್ ಸಹಚರರಿಂದ ದಾಕ್ಷಾಯಣಿ ಪುತ್ರ ವಸಂತ್ ಕುಮಾರ್ ಸೇರಿ ಹಲವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ನಂತರ ಗಲಾಟೆ ತಾರಕಕ್ಕೇರಿ ಎರಡೂ ಕುಟುಂಬದವರು ದೊಣ್ಣೆಗಳಿಂದ ಪೊಲೀಸರ ಎದುರೇ ಹೊಡೆದಾಡಿಕೊಂಡಿದ್ದಾರೆ. ಗಾಯಾಳುಗಳಿಗೆ ತುರುವೇಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.