Site icon Vistara News

Panchamasali Reservation : 2ಡಿ ಮೀಸಲಾತಿಗೆ ಪಂಚಮಸಾಲಿ ಒಪ್ಪಿಗೆ, ಎರಡು ವರ್ಷಗಳ ಹೋರಾಟಕ್ಕೆ ತೆರೆ

Panchamasali reservation

#image_title

ಬೆಂಗಳೂರು: ರಾಜ್ಯ ಸರ್ಕಾರ ಪಂಚಮಸಾಲಿ ಲಿಂಗಾಯತರಿಗೆ 2ಡಿ ಪ್ರವರ್ಗದಡಿ ಏಳು ಶೇಕಡಾ ಮೀಸಲಾತಿ (Panchamasali Reservation) ನೀಡಿದ್ದನ್ನು ಪಂಚಮಸಾಲಿ ಹೋರಾಟ ಸಮಿತಿ ಒಪ್ಪಿದೆ. ಈ ಮೂಲಕ ಕಳೆದ ಎರಡು ವರ್ಷಗಳಿಂದ ನಡೆಸುತ್ತಿರುವ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಪ್ರಕಟಿಸಿದೆ. ಇನ್ನಷ್ಟು ಹೆಚ್ಚಿನ ಮೀಸಲಾತಿಗಾಗಿ ಮತ್ತು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಬೇಕು ಎಂಬ ಆಗ್ರಹಕ್ಕಾಗಿ ಮುಂದೆ ಮತ್ತೊಂದು ಸುತ್ತಿನ ಹೋರಾಟದ ಸೂಚನೆಯನ್ನು ಅದು ನೀಡಿದೆ.

ಶನಿವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಹೋರಾಟದ ಮುಂಚೂಣಿಯಲ್ಲಿದ್ದ ಕೂಡಲಸಂಗಮ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಹೋರಾಟ ಸ್ಥಗಿತವನ್ನು ಪ್ರಕಟಿಸಿದರು. ಇದನ್ನು ಹೋರಾಟದ ಮುಂಚೂಣಿಯಲ್ಲಿದ್ದ ಇನ್ನೊಬ್ಬ ನಾಯಕ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಅನುಮೋದಿಸಿದರು. ಆದರೆ, ಇನ್ನೊಬ್ಬ ಮುಂಚೂಣಿ ನಾಯಕ, ಕಾಂಗ್ರೆಸ್‌ನ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್‌ ಇದಕ್ಕೆ ವಿರೋಧ ವ್ಯಕ್ತಪಡಿಸಿ ಸಮಿತಿಗೆ ರಾಜೀನಾಮೆ ನೀಡಿದರು. ಇದು ಮುಸ್ಲಿಂ ಮತ್ತು ಲಿಂಗಾಯತರ ನಡುವೆ ದ್ವೇಷ ಹಚ್ಚುವ ಕುತಂತ್ರ ಎನ್ನುವುದು ಅವರ ವಾದ. ಅಂತಿಮವಾಗಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಲಿಂಗಾಯತ ಮೀಸಲಾತಿ ಹೋರಾಟಕ್ಕೆ ಸದ್ಯಕ್ಕೆ ತೆರೆ ಬಿದ್ದಂತಾಗಿದೆ.

ಕಣ್ಣೀರು ಹಾಕಿದ ಜಯಮೃತ್ಯುಂಜಯ ಸ್ವಾಮೀಜಿ

ಪಂಚಮಸಾಲಿ ಲಿಂಗಾಯತ ಮೀಸಲಾತಿ ಹೋರಾಟದ ಕಾನೂನು ಘಟಕದ ಅಧ್ಯಕ್ಷ ದಿನೇಶ್ ಪಾಟೀಲ್ ಮತ್ತು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಮಾತನಾಡಿದ ಬಳಿಕ ಮಾತಿಗಿಳಿದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರು ಅಕ್ಷರಶಃ ಕಣ್ಣೀರು ಹಾಕಿದರು. ಶುಕ್ರವಾರ ಸಂಜೆ ಮಾತನಾಡಿದ ಅವರು, ಹೊಸ ಮೀಸಲಾತಿ ಬಗ್ಗೆ ಅಧ್ಯಯನ ಮಾಡಿ ಮಾತನಾಡುವುದಾಗಿ ಹೇಳಿದ್ದರು.

ʻʻಬಸವನಗೌಡ ಪಾಟೀಲ್ ಯತ್ನಾಳ್ ಕೇಂದ್ರ ಸರ್ಕಾರಕ್ಕೆ ನಮ್ಮ ಹೋರಾಟವನ್ನು ಮನವರಿಕೆ‌ ಮಾಡಿಕೊಟ್ಟರು. ತಡವಾಗಿ ಆದರೂ ಪರವಾಗಿಲ್ಲ. ಎಲ್ಲ ಲಿಂಗಾಯತ ಪಂಗಡಗಳನ್ನು ಸೇರಿಸಿ ಮೀಸಲಾತಿ ನೀಡಿದ್ದು ಸಮಾಧಾನವಾಗಿದೆ. ನಮ್ಮ ಹೋರಾಟಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾ ಕೂಡ ಬೆಂಬಲ ನೀಡಲಿಲ್ಲ. ಸಿದ್ದಗಂಗಾ ಮಠ ಒಂದು ಬಿಟ್ರೆ, ಬೇರೆ ಯಾವುದೇ ಮಠಗಳು ಸಹ ಬೆಂಬಲ ನೀಡಲಿಲ್ಲ. ಆದರೂ ಎರಡೂ ವರ್ಷ ಹೋರಾಟಕ್ಕೆ‌ ಮೊದಲನೇ ಹೆಜ್ಜೆಯಾಗಿ ಸಫಲತೆ ಕಂಡಿದ್ದೇವೆʼʼ ಎಂದು ಸ್ವಾಮೀಜಿ ಹೇಳಿದರು.

2ಎಯಲ್ಲಿ ಏನೆಲ್ಲ ಸವಲತ್ತುಗಳು ಇವೆಯೋ ಅವೆಲ್ಲವೂ 2ಡಿ ಯಲ್ಲಿಯೂ ಸಿಗಲಿದೆ ಎಂದು ದೃಢಪಡಿಸಿಕೊಂಡಿದ್ದೇವೆ. ಇನ್ನು ಕೇಂದ್ರದ ಒಬಿಸಿ ಮೀಸಲಾತಿಗಾಗಿ ಹೋರಾಟ ಮಾಡೋಣ. ಚುನಾವಣೆಯ ಬಳಿಕ ಹೋರಾಟ ಮುಂದುವರಿಸೋಣ ಎಂದು ಸ್ವಾಮೀಜಿ ಹೇಳಿದರು.

ʻʻಒಕ್ಕಲಿಗರಿಗೆ ಮೀಸಲಾತಿ ಸಿಗುವುದಕ್ಕೂ ಪಂಚಮಸಾಲಿ ಹೋರಾಟ ಕಾರಣ ಎಂದರೆ ತಪ್ಪಾಗಲಾರದುʼʼ ಎಂದು ಹೇಳಿದ ಸ್ವಾಮೀಜಿ, ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಿಎಂ ಬಸವರಾಜ ಬೊಮ್ಮಾಯಿ, ಎಲ್ಲ ಸಚಿವರು, ಶಾಸಕರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಇನ್ನೂ ಒಂದು ಕಂಡಿಷನ್‌!

ಈ ನಡುವೆ, ಚುನಾವಣೆ ನೀತಿ ಸಂಹಿತೆ ಜಾರಿಗೆ ಮುನ್ನವೇ ಗೆಜೆಟ್‌ ನೋಟಿಫಿಕೇಶನ್‌ ಮಾಡಬೇಕು ಎಂಬ ಷರತ್ತನ್ನು ಜಯಮೃತ್ಯುಂಜಯ ಸ್ವಾಮೀಜಿ ವಿಧಿಸಿದ್ದಾರೆ. ಗೆಜೆಟ್ ನೋಟಿಫಿಕೇಷನ್ ಸಿಗುವವರೆಗೂ ನಾನು ಕೂಡಲಸಂಗಮಕ್ಕೆ ಹೋಗುವುದಿಲ್ಲ ಎಂದು ಹೇಳಿದರು.

ಬಸನಗೌಡ ಪಾಟೀಲ್‌ ಯತ್ನಾಳ್‌ ಏನು ಹೇಳಿದರು?

ಪಂಚಮಸಾಲಿ ಮೀಸಲಾತಿಗಾಗಿ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಕಳೆದ ಎರಡು ವರ್ಷಗಳಲ್ಲಿ ಲಕ್ಷಾಂತರ ಕಿ.ಮೀ. ಪಾದಯಾತ್ರೆ ನಡೆಸಿದ್ದಾರೆ. ಸಮುದಾಯದಲ್ಲಿ ಜಾಗೃತಿ ಮೂಡಿಸಿದ್ದಾರೆ. ಪೂಜ್ಯರ ನಿರಂತರ ಹೋರಾಟದಿಂದ ಕ್ಯಾಬಿನೆಟ್‌ನಲ್ಲಿ ಮಹತ್ವದ ನಿರ್ಧಾರ ಆಗಿದೆ. 2 ಎ ಪ್ರವರ್ಗದಡಿ ಸಿಗುವ ಎಲ್ಲ‌ಸೌಲಭ್ಯಗಳನ್ನು ಎ,ಬಿ,ಸಿ,ಡಿ ಗೆ ಸಿಗುವಂತೆ ನಿರ್ಧಾರ ಮಾಡಲಾಗಿದೆ. ನಮ್ಮನ್ನು 2ಡಿಗೆ ವರ್ಗಾವಣೆ ಮಾಡಿ 2% ಮೀಸಲಾತಿ ಹೆಚ್ಚಳ ಮಾಡಲಾಗಿದೆ ಎಂದು ಬಸನಗೌಡ ಪಾಟೀಲ್‌ ಹೇಳಿದರು.

ʻʻಬೆಳಗಾವಿಯಲ್ಲಿ ಹೋರಾಟ ಮಾಡಿದಾಗ ಏನೂ ಉಪಯೋಗ ಆಗಲಿಲ್ಲ. ತದನಂತರ ಪಕ್ಷಾತೀತವಾಗಿ ಹೋರಾಟ ಮಾಡಿದೆವು. ಹೋರಾಟದ ಫಲವಾಗಿ ಈ ನಿರ್ಧಾರ ಆಗಿದೆ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ನನ್ನನ್ನು ಮೂರು ಸಾರಿ ದೆಹಲಿಗೆ ಕರೆಸಿ ಮಾತುಕತೆ ಮಾಡಿದರು. ಹೀಗಾಗಿ ಕ್ಯಾಬಿನೆಟ್ ನಲ್ಲಿ ನಿರ್ಧಾರ ಆಯಿತು. ನ್ಯಾಯಾಲಯವೂ ಸಹ ಪ್ರವರ್ಗ ಮಾಡಲು ಅನುಮತಿ ಕೊಟ್ಟಿತ್ತು. ಮೀಸಲಾತಿಯಲ್ಲಿಯೇ ಬಹಳ ದೊಡ್ಡ ಕ್ರಾಂತಿ ಆಗಿದೆʼʼ ಎಂದ ಯತ್ನಾಳ್‌, ನಾವು ರಾಜಕೀಯ ಲಾಭಕ್ಕಾಗಿ ಮಾಡಿದ್ದಲ್ಲ. ಸಮುದಾಯಕ್ಕಾಗಿ ಹೋರಾಟ ಮಾಡಿದ್ದೇವೆ ಎಂದರು. ಈಗ ಈ ಸತ್ಯಾಗ್ರಹ ಹೋರಾಟ ಸ್ಥಗಿತಗೊಳಿಸುತ್ತೇವೆ ಎಂದು ಪ್ರಕಟಿಸಿದರು.

Exit mobile version