Site icon Vistara News

Border Dispute | ಕರ್ನಾಟಕ ಆಕ್ರಮಿತ ಮಹಾರಾಷ್ಟ್ರವನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿ, ಉದ್ಧವ್‌ ಹೊಸ ಉಪಟಳ

Uddhav Thackeray

ಮುಂಬೈ: ಕರ್ನಾಟಕ-ಮಹಾರಾಷ್ಟ್ರ ಗಡಿ ಬಿಕ್ಕಟ್ಟಿನ (Border Dispute) ವಿಷಯದಲ್ಲಿ ಏಕನಾಥ್‌ ಶಿಂಧೆ ಬಣದ ಶಿವಸೇನೆ ಹಾಗೂ ಬಿಜೆಪಿ ಮಧ್ಯೆಯೇ ಒಮ್ಮತದ ಅಭಿಪ್ರಾಯ ಇಲ್ಲ. ಗಡಿ ಬಿಕ್ಕಟ್ಟಿನ ವಿಷಯದಲ್ಲಿ ಸುಪ್ರೀಂ ಕೋರ್ಟ್‌ಗೆ ಮಹಾರಾಷ್ಟ್ರ ಸಲ್ಲಿಸಿದ ಅರ್ಜಿಯೂ ಇತ್ಯರ್ಥವಾಗಿಲ್ಲ. ಈಗಾಗಲೇ ಕಾರ್ನಾಟಕ ವಿಧಾನಸಭೆಯಲ್ಲಿ ಮಹಾರಾಷ್ಟ್ರ ವಿರುದ್ಧ ಸರ್ವಸಮ್ಮತಿಯ ನಿರ್ಣಯ ಕೈಗೊಳ್ಳಲಾಗಿದೆ. ಇದರ ಬೆನ್ನಲ್ಲೇ ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರು ಹೊಸ ವರಸೆ ಆರಂಭಿಸಿದ್ದಾರೆ. “ಕರ್ನಾಟಕ ಆಕ್ರಮಿತ ಮಹಾರಾಷ್ಟ್ರವನ್ನು ಕೇಂದ್ರಾಡಳಿತ ಪ್ರದೇಶ ಎಂಬುದಾಗಿ ಘೋಷಿಸಿ” ಎಂದು ಒತ್ತಾಯಿಸಿದ್ದಾರೆ.

ಕರ್ನಾಟಕದ ಬೆಳಗಾವಿ, ಇದರ ವ್ಯಾಪ್ತಿಗೆ ಬರುವ ಗ್ರಾಮಗಳನ್ನೇ ಉದ್ಧವ್‌ ಠಾಕ್ರೆ ಅವರು ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ ಎಂದು ಕರೆಯುವ ಮೂಲಕ ಉದ್ಧಟತನ ಮೆರೆದಿದ್ದಾರೆ. ವಿಧಾನ ಪರಿಷತ್‌ನಲ್ಲಿ ಮಾತನಾಡಿದ ಠಾಕ್ರೆ, “ಕರ್ನಾಟಕ ಹಾಗೂ ಮಹಾರಾಷ್ಟ್ರ ಬಿಕ್ಕಟ್ಟು ಕೇವಲ ಭಾಷೆ ಅಥವಾ ಗಡಿಗೆ ಸಂಬಂಧಿಸಿಲ್ಲ. ಅದು ಮಾನವೀಯತೆಗೆ ಸಂಬಂಧಿಸಿದೆ. ಮರಾಠಿ ಭಾಷಿಕರು ಪೀಳಿಗೆಗಳವರೆಗೆ ಗಡಿ ಗ್ರಾಮಗಳಲ್ಲಿ ವಾಸಿಸುತ್ತಿದ್ದಾರೆ. ಅವರ ಜೀವನ ಶೈಲಿ, ಭಾಷೆ, ದಿನನಿತ್ಯದ ಆಚರಣೆಗಳು ಮರಾಠಿಯೇ ಆಗಿದೆ” ಎಂದಿದ್ದಾರೆ.

ಕರ್ನಾಟಕದ ವಿರುದ್ಧ ಮಾತನಾಡಿದ ಠಾಕ್ರೆ, “ಗಡಿ ಬಿಕ್ಕಟ್ಟು ಕುರಿತ ಅರ್ಜಿಯು ನ್ಯಾಯಾಲಯದಲ್ಲಿದೆ. ಹೀಗಿದ್ದರೂ ಕರ್ನಾಟಕ ಸರ್ಕಾರವು ಯಥಾಸ್ಥಿತಿ ಮುಂದುವರಿಸುತ್ತಿಲ್ಲ” ಎಂದು ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಇನ್ನು ಕೇಂದ್ರ ಸರ್ಕಾರದ ಬಗ್ಗೆಯೂ ಪ್ರಸ್ತಾಪಿಸಿದ ಅವರು, “ಕೇಂದ್ರ ಸರ್ಕಾರವು ಎರಡೂ ರಾಜ್ಯಗಳ ರಕ್ಷಕನಾಗಿ ಇದುವರೆಗೆ ನಡೆದುಕೊಂಡು ಬಂದಿದೆ. ಇನ್ನು ಮುಂದೆಯೂ ರಕ್ಷಕನಾಗಿರಬೇಕು. ಗಡಿ ಬಿಕ್ಕಟ್ಟು ಬಗೆಹರಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ | Border Dispute | ಲೋಕಸಭೆಯಲ್ಲೂ ಗಡಿ ಬಿಕ್ಕಟ್ಟು ಸದ್ದು, ಕರ್ನಾಟಕದ ವಿರುದ್ಧ ಶಿವಸೇನೆ ಸಂಸದ ಇಲ್ಲಸಲ್ಲದ ದೂರು

Exit mobile version