ಉಡುಪಿ: ಶೈಕ್ಷಣಿಕ ನಗರಿ ಮಣಿಪಾಲದಲ್ಲಿ ಮಾದಕ ವ್ಯಸನ ಪ್ರಕರಣಗಳು (Udupi Drugs case) ಹೆಚ್ಚಾಗಿದ್ದು, ಮಾಹೆ ವಿವಿಯ 42 ವಿದ್ಯಾರ್ಥಿಗಳನ್ನು ಒಂದು ತಿಂಗಳ ಅವಧಿಗೆ ಅಮಾನತು ಮಾಡಿ ಆದೇಶಿಸಿದೆ. ಇತ್ತೀಚೆಗೆ ಕೆಲವು ವಿದ್ಯಾರ್ಥಿಗಳು ಡ್ರಗ್ಸ್ ಹಾವಳಿಗೆ ಬಲಿಯಾಗಿರುವುದನ್ನು ವಿಶ್ವವಿದ್ಯಾನಿಲಯ ಗಮನಿಸಿದ್ದು, ಆ ವಿದ್ಯಾರ್ಥಿಗಳನ್ನು ಆಂತರಿಕವಾಗಿ ತನಿಖೆ ನಡೆಸಿ, ಅಮಾನತುಗೊಳಿಸಿದೆ.
ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ವಿಶ್ವವಿದ್ಯಾಲಯವು ಈ ದಿಟ್ಟ ನಿರ್ಧಾರ ತೆಗೆದುಕೊಂಡಿದೆ. ವಿದ್ಯಾರ್ಥಿಗಳು ಸಹಜ ಜೀವನ ನಡೆಸುವ ಉದ್ದೇಶದಿಂದ ಈ ಆದೇಶ ಹೊರಡಿಸಿದ್ದೇವೆ. ಆರೋಗ್ಯಕರ ವಾತಾವರಣ ಸೃಷ್ಟಿಸಲು ನಾವು ಬದ್ಧವಾಗಿದ್ದೇವೆ ಎಂದು ಪ್ರಕಟಣೆ ಹೊರಡಿಸಿದೆ.
ವ್ಯಸನಿಗಳಿಗೆ ಜಾಲ ಬೀಸಿರುವ ಪೊಲೀಸರು
ಉಡುಪಿ ಮತ್ತು ಮಣಿಪಾಲ ಭಾಗದಲ್ಲಿ ಉಡುಪಿ ಜಿಲ್ಲಾ ಪೊಲೀಸರಿಂದ ಡ್ರಗ್ಸ್ ವಿರುದ್ಧ ಕಾರ್ಯಾಚರಣೆಗಳು ಮುಂದುವರಿದಿದೆ. ಮಾದಕ ದ್ರವ್ಯ ಸೇವನೆ ಮತ್ತು ಮಾರಾಟದ (Drugs case) ವಿಚಾರವಾಗಿ ಪೊಲೀಸ್ ತನಿಖೆ ವೇಳೆ ಸಿಕ್ಕಿ ಬಿದ್ದಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಮಾಹೆ ವಿದ್ಯಾಸಂಸ್ಥೆ ಈ ಹಿಂದೆ ಅಮಾನತು ಮಾಡಿತ್ತು.
ಕಳೆದ ಆರು ತಿಂಗಳಿನಿಂದ ಪೊಲೀಸ್ ಇಲಾಖೆ ನಿರಂತರವಾಗಿ ಡ್ರಗ್ಸ್ ವಿರುದ್ಧ ಸಮರ ಸಾರಿದೆ. ಜಿಲ್ಲೆಯಲ್ಲಿ ಪ್ರತಿದಿನಕ್ಕೊಂದರಂತೆ ಡ್ರಗ್ಸ್ ಪ್ರಕರಣಗಳು ದಾಖಲಾಗುತ್ತಿದೆ. ಮುಖ್ಯವಾಗಿ ವಿದ್ಯಾರ್ಥಿಗಳು ತಮಗೆ ಅರಿವಿದ್ದೇ ಇಂತಹ ಡ್ರಗ್ ಪೆಡ್ಲಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಹಾಗಾಗಿ ಕಾಲೇಜಿನವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದರಿಂದ ಉಳಿದ ವಿದ್ಯಾರ್ಥಿಗಳಿಗೆ ಸಂದೇಶ ನೀಡಿದಂತಾಗುತ್ತದೆ ಎಂಬ ನಿಟ್ಟಿನಲ್ಲಿ ಅಮಾನತು ಅಸ್ತ್ರವನ್ನು ಕೈಗೊಳ್ಳಲಾಗುತ್ತಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ ಮಚ್ಚೀಂದ್ರ ಹಾಕೆ , ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಹಲವಾರು ಡ್ರಗ್ಸ್ ಪ್ರಕರಣಗಳನ್ನು ಪತ್ತೆ ಮಾಡಿದ್ದೇವೆ. ಈ ಕಾರ್ಯಚರಣೆಯಲ್ಲಿ ಅನೇಕ ಮಂದಿ ಪೆಡ್ಲರ್‌ಗಳನ್ನ ವಶಕ್ಕೆ ತೆಗೆದುಕೊಂಡಿದ್ದೇವೆ. ಪೆಡ್ಲರ್‌ಗಳ ಮೂಲಕ ಗ್ರಾಹಕರು ಯಾರು ಎಂಬುದು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಮಾಹೆ ವಿವಿಯ ಕೆಲ ವಿದ್ಯಾರ್ಥಿಗಳು ಕೂಡ ಪೆಡ್ಲರ್‌ಗಳಾಗಿದ್ದು, ಅವರಿಂದ ಹೆಚ್ಚಿನ ಪ್ರಮಾಣದ ಮಾದಕ ದ್ರವ್ಯಗಳು ಪತ್ತೆಯಾಗಿತ್ತು. ಈ ಪ್ರಕರಣ ಬಗ್ಗೆ ನಾವು ವಿವಿಗೆ ಮಾಹಿತಿ ನೀಡಿದ್ದೆವು. ಕಾಲೇಜು ಮತ್ತು ಹಾಸ್ಟೆಲ್ ಆವರಣದಲ್ಲಿ ಡ್ರಗ್ಸ್ ವ್ಯವಹಾರ ನಡೆದ ಬಗ್ಗೆ ವಿದ್ಯಾರ್ಥಿಗಳನ್ನು ಗುರುತಿಸಿ ಪಟ್ಟಿ ನೀಡಿದ್ದೇವೆ. ಟೆಸ್ಟಿಂಗ್ ಮೂಲಕ ಸಾಬೀತಾಗಿರುವ ಪ್ರಕರಣಗಳ ವಿವರ ಕೂಡ ವಿವಿಗೆ ನೀಡಿದ್ದೇವೆ. ಮಣಿಪಾಲ ವಿವಿ ಈ ವಿಚಾರಗಳಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಇದೀಗ 42 ವಿದ್ಯಾರ್ಥಿಗಳನ್ನು ಅಮಾನತು ಮಾಡಿದೆ. ಈ ವಿಚಾರದಲ್ಲಿ ಪೊಲೀಸ್ ಇಲಾಖೆಯಾಗಲಿ, ವಿವಿಯಾಗಲಿ ನಿರ್ಲಕ್ಷ ವಹಿಸುವುದಿಲ್ಲ ಎಂಬ ಸಂದೇಶ ರವಾನೆಯಾಗಿದೆ.
ಮಾದಕ ದ್ರವ್ಯ ಸೇವನೆ ಮಾಡಿದವರನ್ನು ಮಾಹೆ ವಿವಿ ತಾತ್ಕಾಲಿಕ ಅಮಾನತು ಮಾಡಿದ್ದು, ಒಂದು ತಿಂಗಳ ಕಾಲ ತರಗತಿ ಹಾಜರಾಗಲು ಅವಕಾಶವಿಲ್ಲ. ವಿಶ್ವವಿದ್ಯಾಲಯದ ಯಾವುದೇ ಸೌಲಭ್ಯಗಳನ್ನು ಅವರು ಬಳಸುವಂತಿಲ್ಲ. ಪೆಡ್ಲರ್‌ಗಳ ವಿರುದ್ಧ ಪೋಲಿಸ್ ಇಲಾಖೆ ಕ್ರಿಮಿನಲ್ ಕೇಸ್ ದಾಖಲು ಮಾಡುತ್ತೆ, ಮಾಹೆ ವಿವಿ ಮೂಲಕ ಶಿಸ್ತು ಕ್ರಮಕ್ಕೂ ಸೂಚನೆ ನೀಡಿದ್ದೇವೆ ಎಂದರು.
ಇದನ್ನು ಓದಿ: Elephant Attack: ಗ್ರಾಮದ ತುಂಬೆಲ್ಲಾ ಒಂಟಿ ಸಲಗ ಬಿಂದಾಸ್ ರೌಂಡ್ಸ್; ಹೊರಗೆ ಸುಳಿಯದ ಗ್ರಾಮಸ್ಥರು
ಎಡಿ ಜಿಪಿ ಅಲೋಕ್ ಕುಮಾರ್ ಅವರ ಸೂಚನೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಮಂಗಳೂರಿನಲ್ಲಿ ವೈದ್ಯರ ಮಾದಕ ಸೇವನೆ ಪ್ರಕರಣ ಬೆಳಕಿಗೆ ಬಂದ ನಂತರ ಗಂಭೀರ ಕ್ರಮ ಕೈಗೊಳ್ಳಲಾಗಿದೆ. ಮಾದಕ ಸೇವನೆ ಮಾಡಿದವರನ್ನು ಕ್ರಿಮಿನಲ್‌ಗಳು ಎಂದು ಪರಿಗಣಿಸಲಾಗುವುದಿಲ್ಲ. ಪೆಡ್ಲರ್‌ಗಳನ್ನು ಕ್ರಿಮಿನನ್ ಎಂದು ಪರಿಗಣಿಸುತ್ತೇವೆ. ಮೊಟ್ಟ ಮೊದಲ ಬಾರಿಗೆ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿದ ಮಾಹೆ ವಿವಿ ಈ ಕ್ರಮಕ್ಕೆ ಮುಂದಾಗಿದೆ ಎಂದು ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ ಇನ್ನಷ್ಟು ಸುದ್ದಿಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ