ಉಡುಪಿ: ಉಡುಪಿಯ ನೇತ್ರಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜಿನ (Udupi Nethrajyoti Para medical College) ವಿವಾದಿತ ವಿಡಿಯೋ ಪ್ರಕರಣಕ್ಕೆ (Udupi Toilet Case) ಸಂಬಂಧಿಸಿದ ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ತನಿಖಾಧಿಕಾರಿಯನ್ನು (Investigation officer) ಬದಲಾಯಿಸಿ ಎಸ್‌ಪಿ ಅಕ್ಷಯ ಮಚ್ಚೀಂದ್ರ ಹಾಕೆ ಆದೇಶ ಹೊರಡಿಸಿದ್ದಾರೆ. ಈಗ ತನಿಖೆ ನಡೆಸುತ್ತಿರುವ ಮಲ್ಪೆ ಇನ್ಸ್‌ಪೆಕ್ಟರ್ ಮಂಜುನಾಥ ಗೌಡ (Malpe Inspector Manjunath Gowda) ಅವರ ಸ್ಥಾನಕ್ಕೆ ತನಿಖಾಧಿಕಾರಿಯಾಗಿ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ (Kundapura DYSP Belliyappa) ಅವರನ್ನು ನೇಮಿಸಲಾಗಿದೆ.
ಗಂಭೀರ ಪ್ರಕರಣದ ತನಿಖೆಯಲ್ಲಿ ನಿರ್ಲಕ್ಷ್ಯ ವಹಿಸಿರುವ ಮಲ್ಪೆ ಇನ್ಸ್‌ಪೆಕ್ಟರ್ ಮಂಜುನಾಥ ಗೌಡ ಅವರನ್ನು ಬದಲಾಯಿಸಬೇಕು, ಬೇರೆಯವರಿಗೆ ತನಿಖೆ ಹೊಣೆಯನ್ನು ವಹಿಸಬೇಕು ಎಂಬ ಬೇಡಿಕೆ ಬಿಜೆಪಿಯ ಪ್ರತಿಭಟನೆಯ ಸಂದರ್ಭದಲ್ಲೂ ಒತ್ತಾಯ ಕೇಳಿಬಂದಿತ್ತು. ಅದರ ಜತೆಗೆ ಪ್ರಕರಣ ಇಷ್ಟೊಂದು ಬೆಳೆಯಲು ಮಂಜುನಾಥ ಗೌಡ ಅವರ ನಿರ್ಲಕ್ಷ್ಯ ಕಾರಣ ಎಂಬ ನಿಟ್ಟಿನಲ್ಲೂ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ನೇತ್ರಜ್ಯೋತಿ ಕಾಲೇಜಿನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಹಿಂದು ವಿದ್ಯಾರ್ಥಿನಿಯೊಬ್ಬಳು ಟಾಯ್ಲೆಟ್ ಬಳಸುವ ದೃಶ್ಯವನ್ನು ಸೆರೆ ಹಿಡಿದು ಸೃಷ್ಟಿಯಾದ ರಾದ್ಧಾಂತಕ್ಕೆ ಸಂಬಂಧಿಸಿ ಕಾಲೇಜು ಆಡಳಿತ ಮಂಡಳಿ ಮಲ್ಪೆ ಪೊಲೀಸರಿಗೆ ಮಾಹಿತಿ ನೀಡಿತ್ತು. ವಿದ್ಯಾರ್ಥಿನಿಯರು ಬಳಸಿದ ಮೊಬೈಲ್‌ಗಳನ್ನೂ ವಶಪಡಿಸಿಕೊಂಡು ಒಪ್ಪಿಸಲಾಗಿತ್ತು. ಆದರೆ, ಪೊಲೀಸರು ಈ ಪ್ರಕರಣವನ್ನು ಲಘುವಾಗಿ ಪರಿಗಣಿಸಿದ್ದರು ಎನ್ನಲಾಗಿದೆ. ಕನಿಷ್ಠ ಪ್ರಕರಣವನ್ನೂ ದಾಖಲಿಸದೆ, ವಿಚಾರಣೆಯನ್ನೂ ನಡೆಸದೆ ಕೈಬಿಟ್ಟಿದ್ದರು.
ಆದರೆ, ಒಮ್ಮೆ ಪ್ರಕರಣ ತೀವ್ರತೆಯನ್ನು ಪಡೆದ ಬಳಿಕ ಕೂಡಲೇ ಎಚ್ಚೆತ್ತುಕೊಂಡು ಮೂವರು ವಿದ್ಯಾರ್ಥಿನಿಯರು ಹಾಗೂ ಮಾಹಿತಿ ನೀಡಿಲ್ಲ ಎಂಬ ಕಾರಣ ನೀಡಿ ಕಾಲೇಜಿನ ಆಡಳಿತ ಮಂಡಳಿ ಮೇಲೂ ಎಫ್‌ಐಆರ್ ದಾಖಲಿಸಿದ್ದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ತನ್ನ ನಿಲುವನ್ನು ತಿಳಿಸಿ ತಮ್ಮಿಂದ ತಪ್ಪಾಗಿಲ್ಲ. ಪೊಲೀಸರದೇ ನಿರ್ಲಕ್ಷ್ಯ ಎಂದು ವಾದಿಸಿತ್ತು.
ಮೂವರು ಮುಸ್ಲಿಂ ವಿದ್ಯಾರ್ಥಿನಿಯರ ಮೇಲೆ ಎಫ್‌ಐಆರ್ ದಾಖಲಿಸಿದ್ದರೂ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿರಲಿಲ್ಲ. ಹೀಗಾಗಿ ಅವರು ನಿರೀಕ್ಷಣಾ ಜಾಮೀನು ಪಡೆಯಲು ಸಾಧ್ಯವಾಯಿತು ಎಂಬ ಆರೋಪವೂ ಕೇಳಿಬಂದಿತ್ತು.
ಹೀಗಾಗಿ ಜಿಲ್ಲಾ ಎಸ್‌ಪಿ ಅಕ್ಷಯ್ ಮಚೀಂದ್ರ ಹಾಕೆ ಅವರು ತನಿಖಾಧಿಕಾರಿಯನ್ನು ಬದಲಾಯಿಸಿ ತನಿಖೆಯ ಹೊಣೆಯನ್ನು ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಅವರಿಗೆ ಒಪ್ಪಿಸಲಾಗಿದೆ.
ಬೆಳ್ಳಿಯಪ್ಪ ಅವರಿಗೆ ಹಲವು ತನಿಖೆಗಳ ಅನುಭವ
ಈಗ ತನಿಖಾಧಿಕಾರಿಯಾಗಿ ನೇಮಕಗೊಂಡಿರುವ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಅವರು ಹಲವು ಗಂಭೀರ ಪ್ರಕರಣಗಳ ತನಿಖಾಧಿಕಾರಿಯಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಈ ಹಿಂದೆ ನಡೆದ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದ ಬಾಂಬ್ ಪ್ರಕರಣದ ತನಿಖಾಧಿಕಾರಿಯಾಗಿದ್ದ ಬೆಳ್ಳಿಯಪ್ಪ ಅವರು ಶಿರೂರು ಸ್ವಾಮೀಜಿ ಸಾವು ಪ್ರಕರಣದಲ್ಲೂ ತನಿಖೆ ನಡೆಸಿದ್ದರು. ಈ ಎರಡು ಪ್ರಕರಣಗಳನ್ನು ದಕ್ಷವಾಗಿ ತನಿಖೆ ಮಾಡಿ ಮುಗಿಸಿದ್ದರಿಂದ ಅವರ ಹೆಗಲಿಗೆ ಈ ಮಹತ್ವದ ಪ್ರಕರಣ ಬಂದಿದೆ.
ಇದೀಗ ತನಿಖಾ ತಂಡವನ್ನು ಹೊಸದಾಗಿ ಮರುಕಟ್ಟುವ ಸಾಧ್ಯತೆ ಇದೆ. ಮಹಿಳಾ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರೂಪಿಸಲು ಸಿದ್ಧತೆ ನಡೆಸಲಾಗಿದೆ. ಈ ನಡುವೆ, ಪ್ರಕರಣದ ತನಿಖೆಯನ್ನೂ ಚುರುಕುಗೊಳಿಸಲಾಗಿದ್ದು, ಆರೋಪಿ ವಿದ್ಯಾರ್ಥಿನಿಯರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : Udupi Toilet Case : ಖುಷ್ಬೂ ಉಡುಪಿ ಭೇಟಿಯಿಂದ ಬಿಜೆಪಿಗೆ ಇರಸುಮುರಸು; ಬೈಯೋ ಹಾಗಿಲ್ಲ, ಒಪ್ಪೋ ಹಾಗೂ ಇಲ್ಲ!