ಕುಂದಾಪುರ: ಇಲ್ಲಿಯ ಬಹುಕೋಟಿ ಉದ್ಯಮಿ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮೊಳಹಳ್ಳಿ ಗಣೇಶ್ ಶೆಟ್ಟಿ ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕೃತವಾಗಿದೆ. ಮೇ 26ರಂದು ಉದ್ಯಮಿ ಕಟ್ಟೆ ಭೋಜಣ್ಣ ಅವರು ಆರೋಪಿ ಮೊಳಹಳ್ಳಿ ಗಣೇಶ್ ಶೆಟ್ಟಿ ಮನೆಯ ಸೀಟೌಟ್‌ನಲ್ಲಿ ತಮ್ಮದೇ ಪಿಸ್ತೂಲಿನ ಮೂಲಕ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಸೆಕ್ಷನ್ 306 ಅಡಿಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿ ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಿದ್ದರು. ಆತನನ್ನು ಮೇ 30ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಮತ್ತೊಬ್ಬ ಆರೋಪಿ ಇಸ್ಮಾಯಿಲ್‌ಗೆ ಶೋಧ ಮುಂದುವರಿದಿದೆ. ಈ ಆತ್ಮಹತ್ಯೆಗೆ ಮೊಳಹಳ್ಳಿ ಗಣೇಶ ಶೆಟ್ಟಿ ಪ್ರಚೋದನೆ ನೀಡಿದ್ದ ಎಂದು ಆರೋಪಿಸಲಾಗಿತ್ತು.
ಭೋಜಣ್ಣ ಶೆಟ್ಟಿ ಅವರು ಕುಂದಾಪುರದ ಚಿನ್ಮಯಿ ಆಸ್ಪತ್ರೆಯ ಮಾಲೀಕರಾಗಿದ್ದರು. ಕರಾವಳಿ ಜಿಲ್ಲೆಗಳಲ್ಲಿ ಇವರು ಹೆಸರುವಾಸಿಯಾಗಿದ್ದರು. ಭೂಮಿ ಹಾಗೂ ಹಣಕಾಸಿನ ವ್ಯವಹಾರದಲ್ಲಿ ತಮಗೆ ಮೋಸವಾದ ಹಿನ್ನೆಲೆಯಲ್ಲಿ ಇವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಕಟ್ಟೆ ಭೋಜಣ್ಣ ಅವರು ಬರೆದ ಡೆತ್ ನೋಟ್‌ನಲ್ಲೂ ಮೊಳಹಳ್ಳಿ ಗಣೇಶ್ ಶೆಟ್ಟಿ ಮತ್ತು ಹಂಗಳೂರು ಇಸ್ಮಾಯಿಲ್ ಹೆಸರಿದೆ. ಇವರಿಂದ ಸುಮಾರು 9 ಕೋಟ ರೂ. ಮೋಸವಾಗಿರುವುದನ್ನು ಅವರು ಉಲ್ಲೇಖಿಸಿದ್ದರು. ಸೆಕ್ಷನ್ 306 ಪ್ರಕಾರ ಬಂಧಿತರಾಗಿದ್ದ ಮೊಳಹಳ್ಳಿ ಗಣೇಶ್ ಶೆಟ್ಟಿ ಕುಂದಾಪುರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಮೇ 31ರಂದು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ| ಕುಂದಾಪುರದ ಚಿನ್ಮಯಿ ಆಸ್ಪತ್ರೆ ಮಾಲೀಕ ಕಟ್ಟೆ ಭೋಜಣ್ಣ ಅನುಮಾನಾಸ್ಪದ ಸಾವು
ಮೃತ ಉದ್ಯಮಿ ಕಟ್ಟೆ ಭೋಜಣ್ಣ ಅವರ ಮರಣೋತ್ತರ ಪರೀಕ್ಷೆಯ ವರದಿ ಬಂದಿಲ್ಲ ಎಂಬ ಕಾರಣಕ್ಕೆ, ಜಾಮೀನು ಅರ್ಜಿಯನ್ನು ಎರಡು ಬಾರಿ ಮುಂದೂಡಲಾಗಿತ್ತು. ಮೃತ ವ್ಯಕ್ತಿ ಡೆತ್‌ನೋಟ್‌ನಲ್ಲಿ ಆರೋಪಿಯ ಹೆಸರು ಬರೆದಿರುವುದರಿಂದ ಜಾಮೀನು ನೀಡಬಾರದು ಎಂದು ಸರಕಾರಿ ಅಭಿಯೋಜಕ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ವಾದ ಮಂಡಿಸಿದ್ದರು.
ಪ್ರಾಸಿಕ್ಯೂಶನ್ ಮಂಡಿಸಿದ ವಾದವನ್ನು ಪುರಸ್ಕರಿಸಿದ ಕುಂದಾಪುರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾ. ಅಬ್ದುಲ್ ರಹೀಮ್ ಹುಸೇನ್ ಶೇಖ್ ಅವರು ಆರೋಪಿ ಸಲ್ಲಿಸಿದ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ಇದನ್ನೂ ಓದಿ| ಕುಂದಾಪುರ ಉದ್ಯಮಿ ಕಟ್ಟೆ ಭೋಜಣ್ಣ ಆತ್ಮಹತ್ಯೆ ಪ್ರಕರಣ, ಜ್ಯುವೆಲ್ಲರಿ ಮಾಲೀಕನ ಸೆರೆ