ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಧರ್ಮ ದಂಗಲ್ ಮತ್ತೆ ಭುಗಿಲೆದ್ದಿದೆ. ಜಾತ್ರಾ ಮಹೋತ್ಸವಗಳು ಆರಂಭವಾಗುತ್ತಿದ್ದಂತೆ ಹಿಂದೂ ಹೊರತುಪಡಿಸಿ ಅನ್ಯಮತೀಯರಿಗೆ ವ್ಯಾಪಾರ ಬಹಿಷ್ಕಾರ ಗರಿಗೆದರಿದೆ.
ದೇವಸ್ಥಾನದ ಆವರಣಗಳಲ್ಲಿ ಅನ್ಯಧರ್ಮೀಯ ವ್ಯಾಪಾರಿಗಳಿಗೆ ಅವಕಾಶ ಬೇಡವೆಂದು ಹಿಂದೂ ಸಂಘಟನೆಗಳು ಆಗ್ರಹಿಸಿವೆ. ಕುಂದಾಪುರ ತಾಲೂಕಿನಲ್ಲಿ ನಡೆಯಲಿರುವ ಎರಡು ಮಹತ್ವದ ಜಾತ್ರೆಗಳಲ್ಲಿ ಈಗ ಬಹಿಷ್ಕಾರದ ಬಿಸಿ ಮುಟ್ಟಿದೆ. ಕರಾವಳಿಯಲ್ಲಿ ಅತಿ ದೊಡ್ಡ ಹಬ್ಬ ಎನಿಸಿರುವ ಕೋಟೇಶ್ವರದ ಕೊಡಿ ಹಬ್ಬ ಡಿಸೆಂಬರ್ 8ರಂದು ನಡೆಯಲಿದೆ. ಡಿಸೆಂಬರ್ 9ರಂದು ಉಪ್ಪುಂದ ಜಾತ್ರೆ ಜರುಗಲಿದೆ. ಇವೆರಡೂ ಹಬ್ಬಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅವಕಾಶ ನೀಡಿದಂತೆ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳ ಆಗ್ರಹಿಸಿವೆ.
ಇದನ್ನೂ ಓದಿ | ಧರ್ಮ ದಂಗಲ್ | ಮುಸ್ಲಿಂ ವ್ಯಕ್ತಿಯಿಂದ ಹಿಂದು ಹೆಸರಲ್ಲಿ ಅಂಗಡಿ ಆರೋಪ; ಹಿಂದು ಸಂಘಟನೆಗಳ ಆಕ್ರೋಶ, ಪೊಲೀಸ್ ದೂರು
ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೆ ಡಿ.9, 10, 11ರಂದು ನೆರವೇರಲಿದ್ದು, ದೇವಸ್ಥಾನದ ಆವರಣದಲ್ಲಿ ಅನ್ಯಧರ್ಮೀಯರ ವ್ಯಾಪಾರಕ್ಕೆ ಅವಕಾಶವಿಲ್ಲ ಎಂಬ ತೀರ್ಮಾನವನ್ನು ದೇವಸ್ಥಾನದ ಆಡಳಿತ ಮಂಡಳಿ ತೆಗೆದುಕೊಂಡಿದೆ. ಆಡಳಿತಾಧಿಕಾರಿಯಿಂದ ಈ ಬಗ್ಗೆ ಸಹಾಯಕ ಕಮಿಷನರರಿಗೆ ನಿರ್ಣಯ ರವಾನೆಯಾಗಿದೆ. ಭಜರಂಗ ದಳ, ವಿಹಿಂಪ, ಹಿಂದೂ ಜಾಗರಣ ವೇದಿಕೆ ಒತ್ತಾಯದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
ಹಿಂದೂಗಳ ಧಾರ್ಮಿಕ ಭಾವನೆಗೆ ಬೆಲೆ ಕೊಡದೆ ಇರುವುದು, ಹಿಂದೂ ದೇವರುಗಳನ್ನು ನಂಬದೆ ಇರುವುದು, ವ್ಯಾಪಾರದ ಹೆಸರಿನಲ್ಲಿ ಜಿಹಾದ್ ನಡೆಸುವುದು, ಲವ್ ಜಿಹಾದ್‌ನಂತಹ ಪ್ರಕರಣಗಳು ಮುಂತಾದವುಗಳನ್ನು ವ್ಯಾಪಾರ ಬಹಿಷ್ಕಾರದ ಕಾರಣಗಳಾಗಿ ವಿಹಿಂಪ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಜನಜಾಗೃತಿ ಮೂಲಕ ಮಾಹಿತಿ ನೀಡಲೂ ನಿರ್ಧರಿಸಲಾಗಿದೆ.
ಇದನ್ನೂ ಓದಿ | Hanuma jayanti | ಧರ್ಮ ದಂಗಲ್ ನಡುವೆಯೇ ಸಾಮರಸ್ಯ: ಮಾಲೆ ಧರಿಸಿ ಅಂಜನಾದ್ರಿಗೆ ಬಂದ ಮುಸ್ಲಿಂ ವ್ಯಕ್ತಿ