ಉಡುಪಿ/ ಆನೇಕಲ್: ವಿದ್ಯುತ್ ಟ್ರಾನ್ಸ್‌ಫಾರ್ಮರ್ ರಿಪೇರಿ ಮಾಡುವ ವೇಳೆ ವಿದ್ಯುತ್ ಪ್ರವಹಿಸಿ (Electric shock) ಲೈನ್‌ಮ್ಯಾನ್ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಉಡುಪಿಯ ಬೈಂದೂರು ತಾಲೂಕಿನ ತಗ್ಗರ್ಸೆ ಗ್ರಾಮದ ಹೆಗ್ಗೇರಿಯಲ್ಲಿ ಅವಘಡ ನಡೆದಿದೆ.
ಲೈನ್ ಮ್ಯಾನ್ ಸಲೀಂ (38) ಮೃತ ದುರ್ದೈವಿ. ಟ್ರಾನ್ಸ್‌ಫಾರ್ಮರ್ ಬಳಿ ವಿದ್ಯುತ್ ಸಂಪರ್ಕ ರಿಪೇರಿ ಮಾಡುವಾಗ ಶಾಕ್ ಹೊಡೆದಿದೆ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉತ್ತರ ಕರ್ನಾಟಕದ ಮುಂಡಗೋಡು ನಿವಾಸಿಯಾಗಿರುವ ಸಲೀಂ, ಬೈಂದೂರು ಮೆಸ್ಕಾಂನಲ್ಲಿ ಕಳೆದ ಎಂಟು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಬೈಂದೂರಿನಲ್ಲಿ ಸಲೀಂ ಜನಸ್ನೇಹಿ ಲೈನ್‌ಮ್ಯಾನ್ ಆಗಿದ್ದರು.
ಇದನ್ನೂ ಓದಿ: Road Accident : ಎದುರಿಗೆ ಬಂದ ಬೈಕ್ ತಪ್ಪಿಸಲು ಹೋಗಿ ಮಹಿಳೆಗೆ ಗುದ್ದಿದ ಕಾರು; ಎಗರಿ ಬಿದ್ದವಳು ಸ್ಥಳದಲ್ಲೇ ಸಾವು
ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮೂಕಜೀವಿ ಬಲಿ
ಬೆಂಗಳೂರು ಹೊರವಲಯ ಜಿಗಣಿ ಸಮೀಪದ ಮಂಚನಹಳ್ಳಿಯಲ್ಲಿ ವಿದ್ಯುತ್ ಶಾಕ್‌ನಿಂದ ಹಸುವೊಂದು ದಾರುಣವಾಗಿ ಮೃತಪಟ್ಟಿದೆ. ಕರೆಂಟ್ ಶಾಕ್‌ನಿಂದ ಹಸು ಮೃತಪಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕರಗಪ್ಪ ಎಂಬುವವರು ಹಸುಗಳನ್ನ ಮೇಯಿಸಿಕೊಂಡು ರಸ್ತೆಯಲ್ಲಿ ನಡೆದು ಬರುತ್ತಿದ್ದರು. ಈ ವೇಳೆ ವಿದ್ಯುತ್ ಕಂಬದ ಬಳಿ ಕರೆಂಟ್ ಗ್ರೌಂಡಿಂಗ್ ಆಗಿ ಹಸು ಮೃತಪಟ್ಟಿದೆ. ಇದೇ ರೀತಿ ನಾಲ್ಕೈದು ಹಸುಗಳಿಗೆ ಅದೇ ಜಾಗದಲ್ಲಿ ಗ್ರೌಂಡಿಂಗ್‌ನಿಂದ ಶಾಕ್ ಆಗಿದೆ.
ರೈತನ ಜೀವನಾಧಾರೆಯಾಗಿದ್ದ ಹಸು ಮೃತಪಟ್ಟಿದ್ದಕ್ಕೆ ಜಿಗಣಿ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾರಣವೆಂದು ಆರೋಪಿಸಿದ್ದಾರೆ. ಒಂದು ಲಕ್ಷಕ್ಕೂ ಬೆಲೆಬಾಳುವ ಹಸುವನ್ನು ಕಳೆದುಕೊಂಡ ರೈತ ಕಂಗಾಲಾಗಿದ್ದಾರೆ. ಬೆಸ್ಕಾಂ ಇಲಾಖೆ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕೆಂದು ಕರಗಪ್ಪ ಒತ್ತಾಯಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ