Site icon Vistara News

ಕಡಲ ಮಕ್ಕಳ ಹುಮ್ಮಸ್ಸಿಗೆ ತಣ್ಣೀರು; ಸ್ಥಗಿತವಾಯ್ತು ಮೀನುಗಾರಿಕೆ ಚಟುವಟಿಕೆ

ಮೀನುಗಾರಿಕೆ

ಉಡುಪಿ: ಬೇಸಿಗೆ ಕಾಲ ಮುಗಿದು ಕರಾವಳಿಯಲ್ಲಿ ಮುಂಗಾರು ಮಳೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಆದಾಯ ಮೂಲದಲ್ಲಿ ಒಂದಾದ ಸಮುದ್ರ ಮೀನುಗಾರಿಕೆ ನಿಂತಿದೆ. ಮುಂಗಾರು ಆರಂಭಕ್ಕೂ ಮೊದಲು ಕಾಡಿದ ಚಂಡಮಾರುತ ಪ್ರಭಾವದಿಂದಾಗಿ ಕೊನೆಯ ಹಂತದ ಭರ್ಜರಿ ಮೀನುಗಾರಿಕೆ ಮಾಡಿ ಲಾಭ ಗಳಿಸುವ ಕಡಲ ಮಕ್ಕಳ ಹುಮ್ಮಸ್ಸಿಗೆ ತಣ್ಣೀರು ಬಿದ್ದಿದೆ. ಈ ಬಾರಿಯ ಮೀನುಗಾರಿಕೆ ‌ಋತು ಮಾತ್ರ ನಷ್ಟದಲ್ಲೆ ಕಳೆದು ಹೋಗಿದೆ. ಈ ವೃತ್ತಿ ನಂಬಿದ ಮಂದಿಗೆ ಮೀನುಗಾರಿಕೆ ಸ್ಥಗಿತದಿಂದ ಇನ್ನಷ್ಟೂ ಸಂಕಷ್ಟ ಎದುರಿಸುವಂತಾಗಿದೆ.

ಇದನ್ನೂ ಓದಿ | ಮಳೆಗಾಲದಲ್ಲಿ ಡೇಂಜರ್‌: ಮಲ್ಪೆ ಬೀಚ್‌ಗೆ ತಡೆ ಬೇಲಿ ಹಾಕಿದ ಉಡುಪಿ ಜಿಲ್ಲಾಡಳಿತ

ಉಡುಪಿಯ ಮಲ್ಪೆ ಬಂದರು ಸರ್ವ ಋತು ಬಂದರು. ವರ್ಷವಿಡೀ ಮೀನುಗಾರಿಕೆ ನಡೆಸಲು ಅನುಕೂಲವಾಗಿದೆ. ಮಲ್ಪೆಗೆ ಏಷ್ಯಾದ ಅತೀ ದೊಡ್ಡ ಸರ್ವಋತು ಮೀನುಗಾರಿಕೆ ಬಂದರು ಎಂಬ ಹೆಗ್ಗಳಿಕೆಯೂ ಇದೆ. ಮಂಗಳೂರು ಹಾಗೂ ಕಾರವಾರ ನಡುವೆ ಇರುವ ಈ ಬಂದರಿನಲ್ಲಿ ಬಹುಕೋಟಿಯ ಮೀನುಗಾರಿಕೆ ನಡೆಯುತ್ತದೆ. ಡಿಸೇಲ್ ಸಮಸ್ಯೆ, ಆಳ ಮೀನುಗಾರಿಕೆಯ ಸವಾಲಿನ ನಡುವೆ ಮತ್ತೊಂದು ಸಮಸ್ಯೆ ಮೀನುಗಾರನ್ನು ಕಾಡುತ್ತಿದೆ. ಸದ್ಯ  ಮಳೆಗಾಲ ಆರಂಭವಾದ ಹಿನ್ನಲೆಯಲ್ಲಿ ಬೋಟ್‌ಗಳು ಬಂದರು ಸೇರಿವೆ. ಇನ್ನೂ ಈ ಬಾರಿ ಮೀನುಗಾರಿಕೆ ಲಾಭಕ್ಕಿಂತ ಹೆಚ್ಚು ನಷ್ಟದ ರುಚಿ ನೋಡುವಂತೆ ಮಾಡಿತ್ತು. ಪ್ರತಿಕೂಲ ಹವಾಮಾನ, ಸೂಕ್ತ ಕಾಲದಲ್ಲಿ ತೂಫಾನ್ ಅಗದೆ ಇರುವುದು ಕೂಡ ಮೀನುಗಾರರನ್ನು ಈ ಬಾರಿ ಬಿಡದೆ ಬಾಧಿಸಿತ್ತು ಅಂತಾರೆ ಮೀನುಗಾರ ಮುಖಂಡ ಶಿವರಾಮ ಕುಂದರ್.

ದಿನಕ್ಕೆ 5-6 ಕೋಟಿ ರೂ. ಮೌಲ್ಯದ ಮೀನುಗಾರಿಕೆ ಮಲ್ಪೆಯಲ್ಲಿ ನಡೆಯುತ್ತದೆ. ಸುಮಾರು 2 ಸಾವಿರಕ್ಕೂ ಅಧಿಕ ಬೋಟ್ ಗಳು ಇಲ್ಲಿವೆ. ಆದರೆ ಉಡುಪಿಯ ಮಲ್ಪೆ ಬಂದರಿನಲ್ಲಿ 1 ಸಾವಿರ ಬೋಟ್ ಗಳು ನಿಲ್ಲುವುದಕ್ಕೆ ಮಾತ್ರ ಅವಕಾಶವಿದೆ. ಹೀಗಾಗಿ ಬೋಟ್ ದಡ ಸೇರಿಸುವ ತರಾತುರಿಯಿಂದ ಮೀನುಗಾರಿಕೆ ನಿಲ್ಲಿಸಿ ಬೋಟ್ ಕಟ್ಟುವುದಕ್ಕೆ ಮೀನುಗಾರು ಸ್ಫರ್ಧೆಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೂರನೇ ಹಂತದ ಬಂದರು ಕಾಮಗಾರಿ ಪೂರ್ಣಗೊಂಡರೆ ಪ್ರತಿ ವರ್ಷದ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಂತಾಗುತ್ತದೆ. ಆದರೆ ರಾಜ್ಯ ಸರ್ಕಾರ ಹಾಗೂ ಮೀನುಗಾರಿಕಾ ಇಲಾಖೆ ಈ ಕಡೆಗೆ ಗಮನ ಹರಿಸಿಲ್ಲ. ಸ್ಥಳೀಯ ಜನಪ್ರತಿನಿಧಿಗಳೂ ಈ ಕುರಿತ ಆಸಕ್ತಿ ಹೊಂದಿಲ್ಲ. ಹೀಗಾಗಿ ನಷ್ಟವನ್ನು ಎದುರಿಸುವ ಪರಿಸ್ಥಿತಿ ಉಂಟಾಗಿದೆ ಅಂತ ಮೀನುಗಾರ ಚಂದ್ರಕಾಂತ್ ಅಳಲು ತೋಡಿಕೊಂಡಿದ್ದಾರೆ.

ಸದ್ಯ, ಉಡುಪಿ ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಸ್ಥಗಿತಗೊಳಿಸಿ ಬೋಟ್ ನಿಲುಗಡೆ ಜಾಗ ಮಾಡಿಕೊಳ್ಳುವುದಕ್ಕೆ ಒದ್ದಾಡುವ  ಸ್ಥಿತಿ ಮೀನುಗಾರರದ್ದು. ಮೂರನೇ ಹಂತದ ಕಾಮಗಾರಿ ಪೂರ್ಣಗೊಳ್ಳಿಸಿ ನಾಲ್ಕನೇ ಹಂತದ ಕಾಮಗಾರಿ ಕೈಗೆತ್ತಿಕೊಂಡ್ರೆ ಸಾವಿರಾರು ಕೋಟಿನಷ್ಟ ತಪ್ಪಿಸಿ ಮೀನುಗಾರ ಸಮಸ್ಯೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಇದನ್ನೂ ಓದಿ | ಉಡುಪಿ ಜಿಲ್ಲಾಸ್ಪತ್ರೆಗೆ ಜಿಲ್ಲಾ ನ್ಯಾಯಾಧೀಶರ ದಿಢೀರ್‌ ಭೇಟಿ, ಕುಂದುಕೊರತೆ ಪರಿಶೀಲನೆ

Exit mobile version