Site icon Vistara News

Illegal Mining: ಮರಳು, ಕೆಂಪುಕಲ್ಲು ಗಣಿಗಾರಿಕೆಯಲ್ಲಿ ಜನರಿಗೆ ತೊಂದರೆ ಆಗದಂತೆ ಕ್ರಮ: ಸಿಎಂ ಸೂಚನೆ

CM Siddaramaiah on Illegal Mining

ಬೆಂಗಳೂರು: ಕಾನೂನು ಬಾಹಿರ ಗಣಿಗಾರಿಕೆಗೆ (Illegal Mining) ಅವಕಾಶ ನೀಡುವುದಿಲ್ಲ. ಇದೇ ವೇಳೆಗೆ ಕಾನೂನುಪ್ರಕಾರ ಅನುಮತಿ ನೀಡುವ ಪ್ರಕ್ರಿಯೆಗೆ ವೇಗ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಸೂಚಿಸಿದರು.

ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಮರಳು, ಕೆಂಪುಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಇಂದು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಕೆಂಪು ಕಲ್ಲು ಹಾಗೂ ಮಣ್ಣಿನ ವಿಚಾರದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗಕೂಡದು ಎಂದು ಸೂಚನೆ ನೀಡಿದರು.

ರಾಜ್ಯ ಪರಿಸರ ಪ್ರಭಾವ ಮೌಲ್ಯ ಮಾಪನ ಪ್ರಾಧಿಕಾರ ಅನುಮತಿ ನೀಡಿದ ಬಳಿಕವೇ ಮರಳು ಬ್ಲಾಕ್ ಗಳಿಗೆ ಅನುಮತಿ ಪತ್ರ ದೊರೆಯುತ್ತದೆ. ಪ್ರಾಧಿಕಾರದ ತಿಂಗಳಿಗೊಮ್ಮೆ ಸಭೆ ನಡೆಯುವುದರಿಂದ ವಿಳಂಬವಾಗುತ್ತಿದೆ. ಈ ಪ್ರಕ್ರಿಯೆಗೆ ವೇಗ ನೀಡಬೇಕೆಂದು ಮುಖ್ಯ ಮಂತ್ರಿಗಳು ಪ್ರಾಧಿಕಾರದ ಆಯುಕ್ತರಿಗೆ ಸೂಚಿಸಿದರು.

ಸಾಂಪ್ರದಾಯಿಕ ಮರಳುಗಾರಿಕೆಗೆ ಹಿತಾಸಕ್ತಿ ಕಾಪಾಡಬೇಕಿದೆ

ಹೊಸ ಮರಳು ನೀತಿ 2020 ನ್ನು 1.12.2021 ರಂದು ಜಾರಿಗೆ ತಂದಿದ್ದು, ಸಣ್ಣ ಬ್ಲಾಕ್ ಗಳಿವೆ. ಕಟ್ಟಡ ನಿರ್ಮಾಣ ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವುದರ ಜೊತೆಗೆ ಸಾಂಪ್ರದಾಯಿಕವಾಗಿ ಮರಳು ತೆಗೆಯುವವರ ಹಿತಾಸಕ್ತಿ ಯನ್ನೂ ಕಾಪಾಡಬೇಕಿದೆ . ಕಾರ್ಮಿಕರಿಗೆ ಸಮಸ್ಯೆಯಾಗದಂತೆ ತೀರ್ಮಾನ ತೆಗೆದುಕೊಳ್ಳಬೇಕೆಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ತಿಳಿಸಿದರು.

ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ನೀಡಿದ ಮಾಹಿತಿ, ಸಲಹೆಗಳು

  1. CRZ ಹೊರತಾದ ಪ್ರದೇಶದಲ್ಲಿ ಟೆಂಡರ್ ಕಂ ಹರಾಜು ಮೂಲಕ ಗುತ್ತಿಗೆ ಮಂಜೂರು ಮಾಡಲು 39 ಮರಳು ಬ್ಲಾಕ್ ಗಳನ್ನು ಗುರುತಿಸಲಾಗಿದೆ. ಈ ಪೈಕಿ 9 ಬ್ಲಾಕ್ ಗಳ ಟೆಂಡರ್ ಪ್ರಕ್ರಿಯೆ ಯಶಸ್ವಿಯಾಗಿದ್ದು, 30 ಮರಳು ಬ್ಲಾಕ್ ಗಳಿಗ ಮರುಹಾರಾಜು ಪ್ರಕ್ರಿಯೆ ಶೀಘ್ರ ಕೈಗೊಳ್ಳಲಾಗುವುದು.
  2. ಜಿಲ್ಲೆಗೆ 8 ಲಕ್ಷ ಟನ್ ಮರಳು ಅಗತ್ಯವಿದೆ. ಜೆಲ್ಲಿ, ಕೆಂಪುಕಲ್ಲಿನ ಸಮಸ್ಯೆ ಇದೆ.
  3. ಮಂಗಳೂರು, ಉಡುಪಿಯಲ್ಲಿನ ಹವಾಗುಣಕ್ಕಾಗಿ ಗೃಹನಿರ್ಮಾಣಕ್ಕೆ ಬಳಕೆಯಾಗುತ್ತದೆ. ಇದರಲ್ಲಿ ಬಾಕ್ಸೈಟ್ ಇದೆ ಎಂಬ ಕಾರಣಕ್ಕೆ ಕೈಗಾರಿಕೆಗಳು ಇದನ್ನು ಬಳಸುತ್ತವೆ. ಜಿಲ್ಲೆಯಿಂದ ಹೊರಗೆ ಕಳಿಸುವುದು ಬೇಡ ಎಂಬ ಅಭಿಪ್ರಾಯ ಜನರಲ್ಲಿದೆ.
  4. ಮರಳು ಗಣಿಗಾರಿಕೆಗೆ ಪರವಾನಗಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಪರವಾನಗಿ ನೀಡಲಿ. ಮನೆ ಕಟ್ಟಲು ಅಗತ್ಯವಿರುವ ಸೈಜುಗಲ್ಲುಗಳಿಗೆ ಗಣಿಗಾರಿಕೆ ಮಾಡಲು ಕಾಯ್ದೆಯ ಸರಳೀಕರಣ ಮಾಡಿ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಬೇಕು.

ಲ್ಯಾಟರೈಟ್‌ ಖನಿಜಕ್ಕೆ ಕಾರ್ಯಾದೇಶ ನೀಡುತ್ತಿಲ್ಲ

ಕೆಂಪುಕಲ್ಲಿನ( Laterite) ಗಣಿಗಾರಿಕೆ ಗೆ 71 ಕಾರ್ಯಾದೇಶಗಳನ್ನು ಒಂದು ವರ್ಷದ ಅವಧಿಗೆ ನೀಡಲಾಗಿದೆ. ಖನಿಜವನ್ನು ಬಾಕ್ಸೈಟ್ ಆಗಿ ವಿಂಗಡಿಸಿರುವುದರಿಂದ 17.03.2023 ರಂದು ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಗಳು 1994 ಗೆ ತಿದ್ದುಪಡಿ ತಂದು ತಿದ್ದುಪಡಿ ನಿಯಮ 2023 ಜಾರಿಗೊಳಿಸಲಾಗಿದೆ. ಹೀಗಾಗಿ ಲ್ಯಾಟರೈಟ್ ಖನಿಜಕ್ಕೆ ಕಾರ್ಯಾದೇಶ ನೀಡುವುದನ್ನು ಕೈಬಿಡಲಾಗಿದೆ ಎಂದು ಸಭೆಯ ಗಮನಕ್ಕೆ ತರಲಾಯಿತು.

ಸ್ಥಳೀಯ ಜಿಲ್ಲೆಗೆ ಅಗತ್ಯವಿರುವಂತೆ ಕಾಯ್ದೆಗೆ ತಿದ್ದುಪಡಿ ಮಾಡಬಹುದು. Laterite ಸಂಬಂಧಿಸಿದಂತೆ ಹಿಂದಿನ ಸರ್ಕಾರ ಮಾಡಲಾಗಿರುವ ತಿದ್ದುಪಡಿಯನ್ನು ಪುನಃ ತಿದ್ದುಪಡಿ ಮಾಡಿ ವಾಹನಗಳಿಗೆ ಅನುಮತಿ ನೀಡಬಹುದು. ಕ್ರಶಿಂಗ್ ಮಾಡಲಾದ ಮಣ್ಣನ್ನು ಜಿಲ್ಲೆಯೊಳಗಿನ ಬಳಕೆಗೆ ಮಾತ್ರ ಸೀಮಿತಗೊಳಿಸಬೇಕು ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು.

ಜಿಲ್ಲಾಸ್ಪತ್ರೆಯಲ್ಲಿ 9 ಡಯಾಲಿಸಿಸ್‌ ಯಂತ್ರಗಳು ಕೆಟ್ಟಿವೆ

ಜಿಲ್ಲಾ ಆಸ್ಪತ್ರೆಯಲ್ಲಿ 9 ಡಯಾಲಿಸಿಸ್ ಯಂತ್ರಗಳು ಕೆಟ್ಟಿದೆ. ಒಂದೇ ಯಂತ್ರ ಕಾರ್ಯನಿರ್ವಹಿಸುತ್ತಿದೆ. ಅಲ್ಲಿನ ಸಿಬ್ಬಂದಿಗೆ 6 ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಕೂಡಲೇ ವೇತನ ನೀಡುವಂತೆ ಸಿಎಂ ಸೂಚಿಸಿದರು.

Exit mobile version