ಉಡುಪಿ: ಕರುಳು ಸಂಬಂಧಿ ಕಾಯಿಲೆಯಿಂದ 6 ತಿಂಗಳ ಕಾಲ ಹಾಸಿಗೆಯ ಮೇಲೆ ಮಲಗಿದ್ದ ಬಾಲಕಿ 10ನೇ ತರಗತಿ (SSLC) ಪರೀಕ್ಷೆಯಲ್ಲಿ 625ಕ್ಕೆ 580 ಅಂಕ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ. ಶ್ರಾವ್ಯ ಎಂಬ ಬಾಲಕಿ ಈ ಅಪೂರ್ವ ಸಾಧನೆ ಮಾಡುವ ಮೂಲಕ ಕುಟುಂಬದವರು ಹೆಮ್ಮೆ ಪಡುವಂತೆ ಮಾಡಿದ್ದಾಳೆ.
ಸಂಕಷ್ಟದ ನಡುವೆಯೂ ಸಾಧನೆ ಮಾಡಿದ ಶ್ರಾವ್ಯ!
ಶ್ರಾವ್ಯಳ ಈ ಸಾಧನೆ ಇತರ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗಿದೆ. ಶ್ರಾವ್ಯ ಅವರ ತಂದೆ-ತಾಯಿ ಹೆಮ್ಮಾಡಿಯಲ್ಲಿ ಚಿಕ್ಕ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಾ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಶ್ರಾವ್ಯ ಆತ್ರಾಡಿ ಮಕ್ಕಳ ಕೂಟ ಶಾಲೆಯ ವಿದ್ಯಾರ್ಥಿನಿ. ಶಾಲೆಯಲ್ಲಿ ಎಲ್ಲರಂತೆ ಚುರುಕಾಗಿದ್ದ ಶ್ರಾವ್ಯಳಿಗೆ ಒಂದು ದಿನ ಅಚಾನಕ್ ಆಗಿ ಅನಾರೋಗ್ಯದ ಸಮಸ್ಯೆ ಕಾಣಿಸಿತು. ಎಲ್ಲರಂತೆ ಚುರುಕಾಗಿದ್ದ ಹುಡುಗಿ ಕರುಳು ಸಂಬಂಧಿ ಕಾಯಿಲೆಯಿಂದ ಬಲಳುವ ಸ್ಥಿತಿ ಎದುರಾಯಿತು. ದೇಹದ ತೂಕ ಕೇವಲ ೨೧ ಕೆ.ಜಿಗೆ ಇಳಿಯಿತು. ಹಾಸಿಗೆ ಹಿಡಿಯುವಂತಾಯಿತು. ಆದರೆ ಈ ಎಲ್ಲಾ ಕಷ್ಟಗಳ ನಡುವೆ ವಿದ್ಯಾಭ್ಯಾಸದ ಸಾಧನೆ ಮಾಡುವ ಛಲ ಮಾತ್ರ ಕಡಿಮೆಯಾಗುವುದಿಲ್ಲ.
ತನ್ನ ಬಳಿ ಇರುವ ನೋಟ್ಸ್‌ನ್ನೇ ಹಗಲು ರಾತ್ರಿ ಓದಿದಳು. ಈ ವೇಳೆ ಶಾಲೆಯ ಸಂಚಾಲಕರಾದ ಸುಲಾರ್ ಶೆಟ್ಟಿ ಹಾಗೂ ದೀಪಿಕಾ ಶೆಟ್ಟಿ ಅವರು ಶ್ರಾವ್ಯಾಳ ಓದಿಗೆ ಸಹಕಾರ ನೀಡಿದರು. ನೋಟ್ಸ್ ಹಾಗೂ ಆನ್‌ಲೈನ್ ಪಾಠದ ಝೆರಾಕ್ಸ್ ಪ್ರತಿ ಶ್ರಾವ್ಯಾಗೆ ತಲುಪಿಸುವ ವ್ಯವಸ್ಥೆ ಮಾಡಿದರು. ಶ್ರಾವ್ಯ ಹಗಲು ರಾತ್ರಿ ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿ ಎಲ್ಲರಿಗೂ ಸ್ಫೂರ್ತಿಯಾಗಿದ್ದಾಳೆ.
ಶ್ರಾವ್ಯಾಳ ಈ ಸಾಧನೆ ಜತೆಗೆ ಅವಳ ಮಾನವೀಯ ಮನಸ್ಸನ್ನು ಗುರುತಿಸಲೇಬೆಕು. 2 ವರ್ಷಗಳ ಹಿಂದೆ ಕೊಡುಗು ಪ್ರದೇಶದಲ್ಲಿ ಪ್ರಕೃತಿ ವಿಕೋಪ ನಡೆದಿತ್ತು. ಆ ಸಂದರ್ಭದಲ್ಲಿ ಶ್ರಾವ್ಯ ಸುಮಾರು ₹ 60,000 ಸಂಗ್ರಹಿಸಿ ಸಂತ್ರಸ್ತರ ಕಷ್ಟಕ್ಕೆ ಮರುಗಿದ್ದಳು. ಇತರರ ಕಷ್ಟಕ್ಕೂ ತುಡಿಯುವ ಅವರ ಮುಗ್ಧ ಮನಸ್ಸು ಹಾಗೂ ಸಾಧನೆ ಮಾಡಬೇಕೆಂಬ ಛಲ ನಿಜಕ್ಕೂ ಶ್ಲಾಘನೀಯ.
ಸದ್ಯ ಶ್ರಾವ್ಯಳ ದೈಹಿಕ ಶಕ್ತಿ ಕುಂದಿದ್ದರೂ ಕೂಡ ಓದುವ ಆಸಕ್ತಿ ಬತ್ತಿಲ್ಲ, ಪಿಯುಸಿಯಲ್ಲಿ ಪಿಸಿಎಂಬಿ ಆಯ್ಕೆ ಮಾಡಿ ಸ್ವಾವಲಂಬಿ ಜೀವನ ಸಾಗಿಸಬೇಕೆಂಬ ಕನಸು ಕಟ್ಟಿಕೊಂಡಿದ್ದಾರೆ. ಈಗ ಶ್ರಾವ್ಯ ಶಿರಸಿ ಪಕೃತಿ ಚಿಕಿತ್ಸಾ ಕೇಂದ್ರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ವಲ್ಪಮಟ್ಟಿಗೆ ಸುಧಾರಣೆ ಕಂಡುಕೊಂಡಿದ್ದಾರೆ.
ವರದಿ: ಅಶ್ವತ್ಥ್ ಆಚಾರ್ಯ, ಉಡುಪಿ
ಇದನ್ನೂ ಓದಿ: SSLC Result | ಸಾಧನೆಗೆ ಬಡತನ ಅಡ್ಡಿಯಲ್ಲ ಎಂದು ಸಾಬೀತುಪಡಿಸಿದ ವಿದ್ಯಾರ್ಥಿಗಳು