Site icon Vistara News

Journalist death : ಕೃಷಿ ಲೇಖನಗಳ ಮೂಲಕ ಗಮನ ಸೆಳೆದಿದ್ದ ಪತ್ರಕರ್ತ ಶಶಿಧರ ಹೆಮ್ಮಣ್ಣ ಇನ್ನಿಲ್ಲ

Journalist Shashidhar Hemmanna No more

ಉಡುಪಿ: ಅಪರೂಪದ ಕೃಷಿ, ಕೃಷಿ ಸಾಧಕರನ್ನು ಪರಿಚಯಿಸುವ ಮೂಲಕ ರಾಜ್ಯಾದ್ಯಂತ ಗಮನ ಸೆಳೆದಿದ್ದ ಹಿರಿಯ ಪತ್ರಕರ್ತ ಶಶಿಧರ್‌ ಹೆಮ್ಮಣ್ಣ (Shashidhar Hemmanna) (57) ಇನ್ನಿಲ್ಲ. ಉಡುಪಿ ಮತ್ತು ಕುಂದಾಪುರವನ್ನು ಕಾರ್ಯಕ್ಷೇತ್ರವಾಗಿ ಮಾಡಿಕೊಂಡಿದ್ದ ಅವರು ಹೃದಯಾಘಾತದಿಂದ (Heart Attack) ನಿಧನರಾಗಿದ್ದಾರೆ (Journalist death).

ಗುರುವಾರ ಬೆಳಗ್ಗೆ ಉಡುಪಿಯ ಮನೆಯಲ್ಲಿದ್ದಾಗ ದಿಢೀರಾಗಿ ಎದೆನೋವು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವರನ್ನು ನಗರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಅವರಿಗೆ ಹೃದಯಾಘಾತ ಅಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಅಂಬ್ಯುಲೆನ್ಸ್ ನಲ್ಲಿ ಕರೆದೊಯ್ಯಲಾಯಿತು. ದಾರಿ ಮಧ್ಯೆಯೇ ಹೆಮ್ಮಣ್ಣ ಅವರು ತೀವ್ರ ಅಸ್ವಸ್ಥರಾಗಿದ್ದರು. ಮಣಿಪಾಲ ಅಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೆಮ್ಮಣ್ಣ ಅವರು ರಾತ್ರಿ ಹೊತ್ತಿಗೆ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.

32 ವರ್ಷಗಳಿಂದ ಪತ್ರಿಕಾ ವೃತ್ತಿ

1991ರಲ್ಲಿ ಕುಂದಪ್ರಭ ಪತ್ರಿಕೆಯ ಮೂಲಕ ವೃತ್ತಿ ಜೀವನ ಅರಂಭಿಸಿದ ಶಶಿಧರ್, ಕ್ಷಿತಿಜ ಎನ್ನುವ ಸ್ವಂತ ವಾರ ಪತ್ರಿಕೆ ಅರಂಭಿಸಿ, ಮುಖ್ಯ ಸಂಪಾದಕರಾಗಿದ್ದರು. ಬಳಿಕ ಈ ಟಿವಿ ಕನ್ನಡ, ಡಿಡಿ ನ್ಯೂಸ್‌ನಲ್ಲಿ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು.

ಹಲವು ಉದಯೋನ್ಮುಖ ಪತ್ರಕರ್ತರಿಗೆ ಪ್ರೇರಕರಾಗಿದ್ದ ಹೆಮಣ್ಣ ಅವರು ಪ್ರಜಾವಾಣಿ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಕೃಷಿ ಸಂಬಂಧಿತ ಲೇಖನಗಳನ್ನು ಬರೆದು, ಸರಕಾರದ ಗಮನ ಸೆಳೆಯುವಲ್ಲಿ ಪ್ದಮುಖ ಪಾತ್ರ ವಹಿಸಿದ್ದರು‌.

ಮೃತರು ತಂದೆ ತಾಯಿ,ಪತ್ನಿ , ಪುತ್ರ , ನಾಲ್ಕು ಜನ ಸಹೋದರು ಹಾಗೂ ಸಹೋದರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಅಂತಿಮ ಅಂತ್ಯಕ್ರಿಯೆ ಕುಂದಾಪುರ ತಾಲೂಕಿನ ಕಮಲ ಶಿಲೆ ಸಮೀಪದ ಎಡಮೊಗೆಯಲ್ಲಿರುವ ಕುಟುಂಬದ ಸ್ವಗೃಹದಲ್ಲಿ ಶುಕ್ರವಾರ ಬೆಳಗ್ಗೆ ನಡೆಯಿತು.

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಂತಾಪ

ಉಡುಪಿಯ ಹಿರಿಯ ಪತ್ರಕರ್ತ ಶಶಿಧರ ಹೆಮ್ಮಣ್ಣ ನಿಧನಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಂತಾಪ ಸೂಚಿಸಿದ್ದಾರೆ. ಶಶಿಧರ ಅವರ ಅಕಾಲಿಕ ನಿಧನ ದುಃಖವನ್ನುಂಟು ಮಾಡಿದೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ನೀಡಲಿ ಎಂದು ಹೆಬ್ಬಾಳಕರ್ ಪ್ರಾರ್ಥಿಸಿದ್ದಾರೆ.

ಇದನ್ನೂ ಓದಿ: Shekhar Ajekar : ಹಿರಿಯ ಪತ್ರಕರ್ತ, ಸಾಹಿತಿ ಶೇಖರ ಅಜೆಕಾರು ಹೃದಯಾಘಾತದಿಂದ ನಿಧನ

ಕೆಲವು ದಿನದ ಹಿಂದಷ್ಟೇ ಶೇಖರ ಅಜೆಕಾರ್‌ ನಿಧನ

ಕರಾವಳಿಯಲ್ಲಿ ಕಳೆದ ಒಂದೇ ವಾರದ ಅವಧಿಯಲ್ಲಿ ಇಬ್ಬರು ಹಿರಿಯ ಪತ್ರಕರ್ತರು ನಿಧನ ಹೊಂದಿದಂತಾಗಿದೆ. ಕಳೆದ ವಾರ ಕರಾವಳಿಯ ಸಾಧಕ ಪತ್ರಕರ್ತರಲ್ಲಿ ಒಬ್ಬರಾಗಿದ್ದ ಶೇಖರ ಅಜೆಕಾರ್‌ ಅವರು ಲೋ ಬಿಪಿಗೆ ಗುರಿಯಾಗಿ ಮೃತಪಟ್ಟಿದ್ದರು. ಜನವಾಹಿನಿ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ದುಡಿದುದಲ್ಲದೆ, ಸಾಹಿತ್ಯ ಸಂಘಟಕರಾಗಿ ಅವರು ಗಮನ ಸೆಳೆದಿದ್ದರು. ಇದೀಗ ಶಶಿಧರ ಹೆಮ್ಮಣ್ಣ ಅವರು ಮೃತಪಟ್ಟಿದ್ದಾರೆ.

Exit mobile version