Site icon Vistara News

Kantara Effect : ಕಣ್ಮರೆಯಾಗಿದ್ದಯುವಕ 8 ದಿನಗಳ ಬಳಿಕ ನಾಯಿ ಜತೆ ಪ್ರತ್ಯಕ್ಷ; ಅವನ ಹಿಂದೆ ಇದೆ ಕಾಂತಾರ ಪವಾಡ ಕಥೆ!

Disappeared man reaapears, people connect to Kantara

ಅಶ್ವತ್ಥ್‌ ಆಚಾರ್ಯ, ವಿಸ್ತಾರ ನ್ಯೂಸ್‌ ಉಡುಪಿ

ಕಾಂತಾರ (Kantara Movie) ಒಂದು ಸಿನಿಮಾ ಅಲ್ಲ, ಅದೊಂದು ಅನುಭವ ಎಂದು ಹಲವು ಹೇಳುತ್ತಾರೆ. ಹಲವರಿಗೆ ಇಂಥ ಅತೀಂದ್ರಿಯ ಅನುಭವ (Unnatural Experience) ಆಗಿರುವುದರಿಂದಲೇ ಅದು ನಮ್ಮೆಲ್ಲರ ಕಥೆ ಅನಿಸುವುದು. ಅಂಥಹುದೇ ಒಂದು ಅನುಭವ ಈಗ ಕುಂದಾಪುರ ತಾಲೂಕಿನ (Kundapura taluk) ಮಚ್ಚಟ್ಟು ಗ್ರಾಮದ ತೊಂಬಟ್ಟಿನ ಜನತೆಗೆ ಆಗಿದೆ. ಮನೆಯಿಂದ ದಿಢೀರ್‌ ಕಣ್ಮರೆಯಾಗಿದ್ದ ಒಬ್ಬ ಯುವಕ (Young man dissapears) ಎಲ್ಲಿ ಹುಡುಕಿದರೂ ಸಿಗುವುದಿಲ್ಲ. ಆದರೆ, ದೈವದ ನುಡಿಯಲ್ಲಿ ಕೇಳಿದಾಗ ಅವನು ಇಲ್ಲೇ ಇದ್ದಾನೆ ಎನ್ನುತ್ತದೆ. ಎಂಟು ದಿನಗಳ ಬಳಿಕ ಆತ ದಿಢೀರ್‌ ಪ್ರತ್ಯಕ್ಷನಾಗುತ್ತಾನೆ (Young man Reappears). ಅವನನ್ನು ಕರೆದುಕೊಂಡು ಬರುವುದು ಒಂದು ನಾಯಿ! ಎಲ್ಲಿ ಹೋಗಿದ್ದೆ ಎನ್ನುವುದು ಅವನಿಗೇ ಗೊತ್ತಿಲ್ಲ! ಹಾಗಿದ್ದರೆ ಮರಳಿ ಬಂದಿದ್ದು ಹೇಗೆ? ದೈವವೇ ಕರೆದುಕೊಂಡುಬಂದಿದೆ ಎನ್ನುತ್ತಾರೆ (Kantara Effect) ತೊಂಬಟ್ಟಿನ ಜನ.

ಹಾಗಿದ್ದರೆ ನಿಜಕ್ಕೂ ಆಗಿದ್ದೇನು? ಇಲ್ಲದೆ ಕಂಪ್ಲೀಟ್‌ ರಿಪೋರ್ಟ್‌

ಆ ಯುವಕನ ಹೆಸರು ವಿವೇಕಾನಂದ. ಕುಂದಾಪುರ ತಾಲೂಕು ಅಮವಾಸೆ ಬೈಲು ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಬರುವ ಮಚ್ಚಟ್ಟು ಗ್ರಾಮದ ತೊಂಬಟ್ಟುವಿನ ಇರ್ಕಿಗದ್ದೆ ನಿವಾಸಿ ಶೀನ ನಾಯ್ಕರ ಮಗ. ವಯಸ್ಸು 28. ಕಳೆದ ಸೆಪ್ಟೆಂಬರ್‌ 16ರಂದು ವಿವೇಕಾನಂದ ಇದ್ದಕ್ಕಿದ್ದಂತೆಯೇ ನಾಪತ್ತೆಯಾಗಿದ್ದ. ಜತೆಗೆ ಮನೆಯ ನಾಯಿಯೂ ಕಣ್ಮರೆಯಾಗಿತ್ತು.

ಇವನೇ ನೋಡಿ ವಿವೇಕಾನಂದ

ಈ ಭಾಗದಲ್ಲಿ ಚಿರತೆಗಳ ಕಾಟ ವಿಪರೀತ. ಹೀಗಾಗಿ ಮೊದಲ ಸಂಶಯ ಬಂದಿದ್ದು ಚಿರತೆಗಳೇನಾದರೂ…! ಅಂತ. ಇಲ್ಲಿ ಯಾವುದೇ ದನ, ನಾಯಿ ಕಣ್ಮರೆಯಾದರೂ ಜನ ಗುಂಪಾಗಿ ಹುಡುಕಾಟ ಮಾಡುವುದು ರೂಢಿ. ಹೀಗಾಗಿ ವಿವೇಕಾನಂದ ನಾಪತ್ತೆಯಾದಾಗಲೂ ಹುಡುಕಾಟ ನಡೆಸಿದರು. ಅರಣ್ಯ ಇಲಾಖೆಗೂ ದೂರು ನೀಡಿದರು. ಅವರೂ ಬಂದು ಬಂದು ಹುಡುಕಾಟ ನಡೆಸಿದರು. ಅದು ದಟ್ಟವಾದ ಕಾಡಿನ ಪ್ರದೇಶ. ಹೀಗಾಗಿ ಎಷ್ಟು ದಿನ ಹುಡುಕಿದರೂ ಸಿಗಲಿಲ್ಲ. ಕೊನೆಗೆ ಮೃತದೇಹವಾಗಲೀ, ಸಾವಿನ ಯಾವುದೇ ಕುರುಹುಗಳಾಗಲೀ ಸಿಗಲಿಲ್ಲ. ಹೀಗಾಗಿ ಜನ ಆತನನ್ನು ಚಿರತೆ ಹೊತ್ತುಕೊಂಡು ಹೋಗಿರಲಾರದು ಅಂದುಕೊಂಡರು.

ಶೀನ ನಾಯ್ಕ ಮತ್ತು ಮನೆಯವರು ಇದ್ದ ದೈವ ದೇವರಿಗೆಲ್ಲ ಹರಕೆ ಹೊತ್ತರು. ಕೊರಗಜ್ಜಾ ಹುಡುಕಿಕೊಡು ಎಂದರು. ಸಾಮಾನ್ಯವಾಗಿ ಈ ಭಾಗದಲ್ಲಿ ಮನುಷ್ಯರು, ಪ್ರಾಣಿಗಳು ನಾಪತ್ತೆಯಾದಾಗ ʻನಿಮಿತ್ತ ಕೇಳುವುದುʼ ರೂಢಿ. ಅಂದರೆ ದೈವದಲ್ಲಿ, ದೇವರಲ್ಲಿ, ಜೋಯಿಸರಲ್ಲಿ ಪ್ರಶ್ನೆ ಕೇಳುವುದು. ವೀಳ್ಯದೆಲೆ, ಕವಡೆ ಕಾಯಿಯ ಮೂಲಕ ಅವರು ಪ್ರಶ್ನೆ ಹೇಳುತ್ತಾರೆ.

ಹಾಗೆ ಶೀನ ನಾಯ್ಕರೂ ನಿಮಿತ್ತ ಕೇಳಿದರು. ಕೇಳಿಬಂದ ಸಂತಸದ ಸಂಗತಿ ಏನೆಂದರೆ: ವಿವೇಕಾನಂದ ಈಸ್‌ ಸೇಫ್!.‌ ಯಾವುದೋ ಒಂದು ನಿರ್ದಿಷ್ಟ ದಿಕ್ಕು ಹೇಳಿದರು. ಎಷ್ಟೋ ದೂರ ಅಂದರು. ಮರಳಿ ಬರುತ್ತಾನೆ ಅಂದರು. ಇದನ್ನು ಕೇಳಿದ ಕುಟುಂಬ ಮತ್ತು ಊರಿನವರು ಅಲ್ಲೆಲ್ಲ ಹುಡುಕಿದರು.

ಇದಾದ ಬಳಿಕ ಸಂಭವಿಸಿದ್ದೇ ಅಚ್ಚರಿ. ಸರಿಯಾಗಿ 8 ದಿನಗಳ ಬಳಿಕ ವಿವೇಕಾನಂದ ನಿಧಾನವಾಗಿ ನಡೆದುಕೊಂಡು ಬರುತ್ತಿದ್ದ. ಆತನ ಮುಂದೆ ನಾಯಿ ದಾರಿ ತೋರಿಸುತ್ತಾ ಬರುತ್ತಿತ್ತು. ಹಾಗಂತ ವಿವೇಕಾನಂದ ಬಂದಿದ್ದು ತನ್ನ ಮನೆಗಲ್ಲ. ತೊಂಬಟ್ಟಿನಿಂದ ಸುಮಾರು ಏಳೆಂಟು ಕಿ.ಮೀ. ದೂರದ ಕಬ್ಬಿನಾಲೆಯ ಸಮೀಪದ ಮನೆಯೊಂದರ ಸಮೀಪ ಬಂದಿದ್ದಾನೆ. ವಿವೇಕಾನಂದ ಮತ್ತು ನಾಯಿ ಎರಡನ್ನೂ ಗಮನಿಸಿದ ಮನೆಯವರು ಶೀನ ನಾಯ್ಕರಿಗೆ ಸುದ್ದಿ ಮುಟ್ಟಿಸಿದರು. ಈಗ ವಿವೇಕಾನಂದನನ್ನು ಮನೆಗೆ ಕರೆತರಲಾಗಿದೆ. ಆಹಾರ ಸೇವಿಸದೆ ಬರಿ ನೀರಿನಲ್ಲೇ ಬದುಕಿದಂತಿರುವ ವಿವೇಕಾನಂದ ನಿತ್ರಾಣನಾಗಿದ್ದಾನೆ. ಆದರೆ, ಮರಳಿಬಂದನಲ್ಲ ಎಂದು ಜನರು ದೈವ ದೇವರ ಮಹಿಮೆಯನ್ನು ಕೊಂಡಾಡುತ್ತಿದ್ದಾರೆ. ಈಗ ವಿವೇಕಾನಂದ ನಾಯಿ, ಮನೆಯವರು ಎಲ್ಲರೂ ಖುಷಿಯಾಗಿದ್ದಾರೆ. ಎಂಬಲ್ಲಿಗೆ ಕಥೆ ಮುಗಿಯುವುದಿಲ್ಲ!

ವಿವೇಕಾನಂದನನ್ನು ಕರೆ ತಂದ ನಾಯಿ

ನಿಜವಾದ ಕಥೆ ಶುರುವಾಗುವುದು ಇಲ್ಲಿಂದಲೇ!

ವಿವೇಕಾನಂದ ಎಂಬ ಸ್ವಲ್ಪ ಬುದ್ಧಿಮಾಂದ್ಯತೆ ಹೊಂದಿರುವ ಯುವಕ ನಾಪತ್ತೆಯಾಗಿ ಎಷ್ಟು ದಿನ ಹುಡುಕಿದರೂ ಸಿಗದೆ ಕೊನೆಗೆ ಎಂಟು ದಿನಗಳ ಬಳಿಕ ಮನೆಗೆ ಬರುವ ಈ ಕಥೆಗೆ ಸಂಬಂಧಿಸಿ ಮತ್ತೊಂದು ಮಗ್ಗುಲೂ ಇದೆ. ನೀವು ಕಾಂತಾರಕ್ಕೂ ಈ ಘಟನೆಗೂ ಏನು ಸಂಬಂಧ ಎಂದು ಯೋಜಿಸುತ್ತಿದ್ದೀರಲ್ಲಾ.. ಅದುವೇ ಈ ಕಥೆ. ಈ ಘಟನೆಗೆ ಸಂಬಂಧಿಸಿ ನಡೆದಿದೆ ಎನ್ನಲಾದ ವಿದ್ಯಮಾನವನ್ನು ರವೀಶ್‌ ಎಂಬವರು ಬರೆದಿದ್ದಾರೆ. ಅವರು ಹೇಳುವ ಕುತೂಹಲಕಾರಿ ವಿಚಾರವನ್ನು ಅವರ ಬರವಣಿಗೆಯಲ್ಲೇ ಓದಿ. ಮುಂದಿನದು ರವೀಶ್‌ ಅವರು ಹೇಳಿದ ಕಥೆ.

ಕಾಂತಾರದಲ್ಲಿ ದೈವ ನರ್ತಕ ಮಾಯವಾಗುವ ಕಥೆಗೂ ಇದಕ್ಕೂ ಸಂಬಂಧ

ಕಾಂತಾರ ಸಿನಿಮಾಮಾದಲ್ಲಿ ದೈವ ನರ್ತಕರು ಕಾಡಿನಲ್ಲಿ ಮಾಯವಾಗುವ ದೃಶ್ಯವಿದೆ. ಅದು ನಿಜವಾ ? ಕಲ್ಪನೆಯಾ? ಎನ್ನುವ ಒಂದು ಚರ್ಚೆ ಹುಟ್ಟು ಹಾಕಿತ್ತು. ಅದು ನಿಜವಾ? ಸುಳ್ಳಾ ಗೊತ್ತಿಲ್ಲ. ಅಂತಹದ್ದೆ ಒಂದು ಘಟನೆ ಕುಂದಾಪುರ ತಾಲೂಕಿನ ಮಚ್ಚಟ್ಟು ಗ್ರಾಮದ ತೊಂಬಟ್ಟಿನಲ್ಲಿ ನಡೆದಿದೆ.

ಇಂದಿಗೆ ಸುಮಾರು ಹತ್ತು ದಿನ‌ ಮೊದಲು ಊರಿನ ಯುವಕನೊಬ್ಬ ತನ್ನ ಮನೆಯ ಎರಡು ನಾಯಿಗಳೊಂದಿಗೆ ಕಾಣೆಯಾಗುತ್ತಾನೆ. ಮನೆಯವರು ಹುಡುಕಲು ಆರಂಭಿಸುತ್ತಾರೆ ಎಲ್ಲಿ ಹುಡುಕಿದರೂ ಸುಳಿವು ಸಿಗುವುದಿಲ್ಲ. ಮನೆಯವರು,‌ ಊರವರು, ಪೊಲೀಸರು, ಸಿಕ್ಕ ಸಿಕ್ಕವರೆಲ್ಲ ದಟ್ಟ ಕಾಡಿನಲ್ಲಿ ಬಿಟ್ಟು ಬಿಡದೆ ಹುಡುಕುತ್ತಾರೆ ಒಂದೆರಡು ದಿನದಲ್ಲಿ‌ ಒಂದು ನಾಯಿ‌ ಮನೆಗೆ ವಾಪಸ್‌ ಬರುತ್ತದೆ. ಅಲ್ಲಿಗೆ ಊರವರು ಅನಾಹುತವನ್ನು ಗ್ರಹಿಸುತ್ತಾರೆ ಆದರೆ ಹುಡುಕುವುದು ನಿಲ್ಲುವುದಿಲ್ಲ.

ಸಿಗದೆ ಹೋದಾಗ ದೈವ, ದೇವರುಗಳ ಮೊರೆ ಹೋಗುತ್ತಾರೆ . ಕೊರಗಜ್ಜನ ಸನ್ನಿದಿಯಲ್ಲಿ ಕೇಳಿದಾಗ ಬದುಕಿದ್ದಾನೆ ಎಂಬ ಆಶ್ವಾಸನೆ ಸಿಗುತ್ತದೆ. ಅದಾಗಲೇ ಒಂದು ವಾರ ಕಳೆದುಹೋಗುತ್ತದೆ ಯುವಕನ ಸುಳಿವಿಲ್ಲ. ಮನೆಯವರು ಜ್ಯೋತಿಷಿಗಳ‌ ಮೊರೆ ಹೋಗುತ್ತಾರೆ. ಅದರಲ್ಲಿ ಒಂದು ಆಡಿಯೋ ಮಾತ್ರ ದಿಗ್ಬ್ರಮೆಗೊಳಿಸುತ್ತದೆ.

ಅದೊಂದು ಫೋನ್ ಕಾಲ್ ಸಂಭಾಷಣೆ. ಒಂದು ಕಡೆ ಒಬ್ಬ ಹೆಂಗಸು: ಮಾಂತ್ರಿಕರೊ, ತಾಂತ್ರಿಕರೊ ಇರಬಹುದು ಇನ್ನೊಂದು ಕಡೆ ಈ ಯುವಕನ ಸಂಬಂಧಿಕರು ಇದ್ದಂತಿದೆ.

ಆ ಮಹಿಳೆ ಹೇಳುತ್ತಾರೆ: “ಹುಡುಗ ಬದುಕಿದ್ದಾನೆ. ಅವರ ಮನೆಯ ಗದ್ದೆಯಲ್ಲಿ ಒಂದು ಕಲ್ಲಿದೆ. ನೋಡಲು ಅದೊಂದು ಸಾಧಾರಣ ಕಲ್ಲು. ಆ ಕಲ್ಲಿನಲ್ಲಿ ದೇವಿ ಇದ್ದಾಳೆ. ಆ ಕಲ್ಲಿನ ಮೇಲೆ ಈತ ಆವಾಗಾವಾಗ ಕೂರುತಿದ್ದ. ಈಗ ಆ ಕಲ್ಲನ್ನು ಗದ್ದೆಯ ಪಕ್ಕದಲ್ಲಿ ಎಸೆದಿದ್ದಾರೆ. ನನಗೆ ಸ್ಪಷ್ಟವಾಗಿ ಕಾಣುತ್ತಿದೆ ಆ ದೇವಿಯ ಕೈಯಲ್ಲಿ ಕತ್ತಿ ಇದೆ. ಅವಳೇ ಅವನನ್ನು ಅಡಗಿಸಿ ಇಟ್ಟಿದ್ದಾಳೆ. ಈಗ ಮನೆಯವರು ಆ ಕಲ್ಲನ್ನು ಹುಡುಕಬೇಕು, ಸಂಜೆ ಆರು ಘಂಟೆಯ ನಂತರ ಕಲ್ಲಿಗೆ ಪೂಜೆ ಮಾಡಿ ಒಂದು ರೂಪಾಯಿ ನಾಣ್ಯವನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ಎಕ್ಕದ ಮರಕ್ಕೆ‌ ಕಟ್ಟಿ ಪ್ರಾರ್ಥಿಸಿಕೊಳ್ಳಬೇಕು ಹುಡುಗ ಮನೆಗೆ ಬರುತ್ತಾನೆ ” ಎಂದು ಹೇಳುತ್ತಿರುವ ಆಡಿಯೋ ಅದು.

ದಿನ ಬೆಳಗಾದರೆ ಇಂತಹ ಅದೆಷ್ಟೊ ಜ್ಯೋತಿಷಿಗಳು ಹೊಟ್ಟೆ ಪಾಡಿಗೆ ಏನೇನೊ ಹೇಳುತ್ತಿರುತ್ತಾರೆ. ಎಂಟು ದಿನ ಊಟ ವಿಲ್ಲದೆ ಸುರಿವ ಮಳೆಯಲ್ಲಿ ಕ್ರೂರ ಪ್ರಾಣಿಗಳಿರುವ ಕಾಡಿನಲ್ಲಿ ಆ ಯುವಕ ಬದುಕವ ಸಾದ್ಯತೆ ತೀರಾ ಕಡಿಮೆ‌ ಅನಿಸದಿರದು.

Kantara Movie scene

ಆದರೆ, ಮನೆಯವರು ಆ ಕಲ್ಲನ್ನು ಹುಡುಕಿದರು. ಆ ಕಲ್ಲಿಗೆ ಪೂಜೆ ಮಾಡಿ ದೀಪವಿಟ್ಟು ಬೇಡಿಕೊಂಡರು. ಆ ರಾತ್ರಿ ಹಾಗೆ ಮುಗಿಯಿತು. ಮರುದಿನ ಆ ಯುವಕ ತನಗೇನೂ ಆಗಿಲ್ಲ ಎಂಬಂತೆ ತನ್ನ ಇನ್ನೊಂದು ನಾಯಿ ಜೊತೆ ನಡೆದುಕೊಂಡು ಬರುತ್ತಿರುವುದನ್ನು ಊರವರು ನೋಡಿ ಅವರ ಮನೆಯಲ್ಲಿರಿಸಿ ಊಟಕ್ಕೆ ಹಾಕಿ ಮನೆಯವರಿಗೆ ಸುದ್ದಿ ಮುಟ್ಟಿಸುತ್ತಾರೆ.

ಈಗ ಸುತ್ತಮುತ್ತ ಎಲ್ಲ ಕಡೆ ಇದೇ ಸುದ್ದಿ. ಆ ಕಲ್ಲು, ಈ ಮಾಂತ್ರಿಕ ಮಹಿಳೆ, ಅವರು ಹೇಳಿದ ದೇವಿ. ಊಟವಿಲ್ಲದ ಎಂಟು ದಿನ ಬದುಕಿದ ಯುವಕ ಅವನನ್ನು ಬಿಟ್ಟು ಬಾರದ ನಾಯಿ. ಅದೇ ಕಾಂತಾರದ ಕಾಡು. ಅಲ್ಲಿ ಮಾಯವಾದವರು ಮತ್ತೆ ಬರಲಿಲ್ಲ. ಇಲ್ಲಿ ಈ ಯುವಕ ಬಂದಿದ್ದಾನೆ.

ಈ ವಿಜ್ಞಾನದ ಯುಗದಲ್ಲಿ ಹೀಗೂ ನಡೆಯುತ್ತದಾ ಎನ್ನುವ ಪ್ರಶ್ನೆಗಳಿಗೆ ಉತ್ತರ ಹೌದು ಮತ್ತು ಇಲ್ಲ. ನಂಬಿದವರಿಗೆ ಹೌದು. ನಾನು ಇದೆ ಊರಿನಲ್ಲಿ ಹುಟ್ಟಿ ಬೆಳೆದಿರುವುದರಿಂದ ನಾನದನ್ನು ಬಲವಾಗಿ ನಂಬುತ್ತೇನೆ. ನಂಬದವರಿಗೆ ಒಂದು ಅವಕಾಶವಿದೆ ಇದು ಕಥೆಯಲ್ಲ ನಿಜ ಘಟನೆ ಈಗಷ್ಟೆ ನಡೆದಿದೆ ನೀವು ಇದರ ಹಿಂದೆ‌ ಬೀಳಬಹುದು.
-ಇದಿಷ್ಟು ರವೀಶ್‌ ಅವರು ಹೇಳುವ ಕಥೆ. ಈ ಜಗತ್ತಿನಲ್ಲಿ ಅತಿಮಾನುಷವಾದ ದೈವಿಕ ಶಕ್ತಿಯೊಂದಿದೆ. ಅದುವೇ ಜಗತ್ತನ್ನು ನಿಯಂತ್ರಿಸುತ್ತದೆ ಎನ್ನುವುದನ್ನು ಸಾರವಾಗಿ ಹೇಳುತ್ತದೆ ಕತೆ.

ಇದನ್ನೂ ಓದಿ ; Rishab Shetty : ಭಾರಿ ಬಜೆಟ್‌ನಲ್ಲಿ ನಿರ್ಮಾಣವಾಗಲಿದೆ ಕಾಂತಾರ 2! ಶೂಟಿಂಗ್‌ ಯಾವಾಗ?

ವಿವೇಕಾನಂದನ ಕರೆ ತಂದ ನಾಯಿಗಿದೆ ಸನ್ಮಾನ

ವಿವೇಕಾನಂದ ಬದುಕಿದ್ದಾನೆ ಎಂಬುದನ್ನು ಸಾರಿ ಸಾರಿ ಹೇಳಿದ್ದರು ಹೆಬ್ರಿ ಸಮೀಪದ ಗುಡಿಯೊಂದರ ಕೊರಗಜ್ಜ. ಹೀಗಾಗಿ ಮನೆಯವರೆಲ್ಲ ಸೋಮವಾರ ಸಂಜೆ ಆ ಗುಡಿಗೆ ಹೋಗಲಿದ್ದಾರೆ. ಇತ್ತ ವಿವೇಕಾನಂದನ ಪ್ರಾಣ ಉಳಿಸಿದ್ದು, ಮರಳಿ ಮನೆಗೆ ಕರೆತಂದಿದ್ದು ನಾಯಿ ಎಂಬುದು ನಂಬಿಕೆ. ಇಂಥ ವಿಶ್ವಾಸಾರ್ಹ ಪ್ರಾಣಿಯನ್ನು ಸನ್ಮಾನಿಸುವ ಕಾರ್ಯಕ್ರಮವೂ ಸೋಮವಾರ ಸಂಜೆ ನಡೆಯಲಿದೆ. ಅಂದ ಹಾಗೆ, ಈ ಎಲ್ಲ ವಿದ್ಯಮಾನಗಳನ್ನು ಅಚ್ಚರಿಯ ಕಣ್ಣುಗಳಿಂದ ನೋಡುತ್ತಿರುವವರು ಪೊಲೀಸರು. ವಿವೇಕಾನಂದ ಬದುಕಿದ್ದಾನೆ, ಮರಳಿ ಬಂದಿದ್ದಾನೆ ಎಂದು ಮನೆಯವರು ಹೇಳಿದಾಗ, ನಾವು ಅಷ್ಟು ಹುಡುಕಿದರೂ ಸಿಗದಿದ್ದವನು ಎಲ್ಲಿದ್ದ ಎಂಬ ಅಚ್ಚರಿಯೊಂದಿಗೆ, ಅವನನ್ನು ಒಮ್ಮೆ ಠಾಣೆಗೆ ಕರೆದುಕೊಂಡು ಬನ್ನಿ. ಅವನು ಬದುಕಿದ್ದಾನೆ ಎಂದು ರುಜುವಾತು ಮಾಡಿ ನಾಪತ್ತೆ ಕೇಸು ಕ್ಲೋಸ್‌ ಮಾಡಿಬಿಡುವ ಎಂದಿದ್ದಾರಂತೆ.

ಇದನ್ನೂ ಓದಿ: ಪತ್ನಿ, ಮಕ್ಕಳೊಂದಿಗೆ ರಿಷಬ್ ಶೆಟ್ಟಿ ಧರ್ಮಸ್ಥಳಕ್ಕೆ ಭೇಟಿ; ದೇವರ ದರ್ಶನ, ಖಾವಂದರ ಆಶೀರ್ವಾದ ಪಡೆದ ಕಾಂತಾರ ಹೀರೋ

ಇದಿಷ್ಟು ಕಾಂತಾರ ಕಥೆ. ಜನಜೀವನದಲ್ಲಿ ನಡೆಯುವ ಹಲವು ಅಚ್ಚರಿಗಳಲ್ಲಿ ಇದೂ ಒಂದು. ನೀವು ದೈವ ದೇವರುಗಳನ್ನು ನಂಬುವವರೇ ಆದರೆ ದೈವವೇ ಆ ಯುವಕನನ್ನು ಮರಳಿ ತಂದು ಮನೆ ಸೇರಿಸಿದೆ ಎಂದು ನಂಬಬಹುದು. ಇಲ್ಲಾ ಈಗೆಲ್ಲ ಅದು ಸಾಧ್ಯವಾ ಎನ್ನುವ ಯೋಚನೆ ನಿಮ್ಮದಾಗಿದ್ದರೆ ನಾಯಿಯೇ ಅವನನ್ನು ಕೈಹಿಡಿದಿದೆ ಎಂದೂ ಒಪ್ಪಬಹುದು. ಅಂತೂ ಅಚ್ಚರಿಯ ವಿದ್ಯಮಾನವೊಂದು ಇಲ್ಲಿ ನಡೆದಿರುವುದು ಮಾತ್ರ ನಿಜ.

Exit mobile version