ಉಡುಪಿ: ಸಿಎಂ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ಬೆನ್ನಲ್ಲೇ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಭಾನುವಾರ ಉಡುಪಿಗೆ ಭೇಟಿ ನೀಡಿದರು. ಎರಡು ವಾರಗಳಿಂದ ಸುರಿದ ಭಾರೀ ಮಳೆಗೆ (Karnataka Rain) ಉಡುಪಿ ಜಿಲ್ಲೆ ತತ್ತರಿಸಿ ಹೋಗಿತ್ತು. ಬೈಂದೂರು ತಾಲೂಕಿನಲ್ಲಿ ಸಾವಿರಕ್ಕೂ ಅಧಿಕ ಮರಗಳು ಧರಶಾಹಿಯಾಗಿತ್ತು. ಜೀವನದಿಗಳ ಹರಿವಿನಿಂದ ಕೃತಕ ನೆರೆ ಸೃಷ್ಟಿಯಾಗಿತ್ತು. ಉಸ್ತುವಾರಿ ಸಚಿವೆ ಭೇಟಿಯಾಗದಿರುವ ಬಗ್ಗೆ ಭಾರಿ ವಿರೋಧ ಕೇಳಿ ಬಂದಿತ್ತು. ಕೊನೆಗೂ ನೆರೆ, ಪ್ರವಾಹ ಕಡಿಮೆ ಆಗುತ್ತಲೇ ಉಡುಪಿಗೆ ಸಚಿವೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಶೀಲನೆ ಬಳಿಕ ಮಾತನಾಡಿದ ಅವರು ನನ್ನ ಅವಶ್ಯಕತೆ ಇದ್ದಾಗ ಇಲ್ಲಿಗೆ ಬರುತ್ತೇನೆ. ದಿನದ 24 ಗಂಟೆಯೂ ಜಿಲ್ಲಾಡಳಿತ, ಸರ್ಕಾರ ಎಚ್ಚರವಾಗಿವೆ. ಎಲ್ಲೂ ಯಾವ ತೊಂದರೆ ಆಗಬಾರದು. ಪ್ರಾಣ ಹಾನಿ ಆಗಬಾರದು ಎಂದು ಮುನ್ನೆಚ್ಚರಿಕೆ ಕೈಗೊಂಡಿದ್ದೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಇನ್ನೂ ಮಳೆಯಿಂದ ಯಾವುದೇ ಅನಾಹುತ ಸಂಭವಿಸದಂತೆ ತಡೆಯಲು ಉಡುಪಿ ಜಿಲ್ಲಾಡಳಿತ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ (Lakshmi Hebbalkar) ಹೇಳಿದ್ದಾರೆ.
ಭಾನುವಾರ ರಜೆ ಆದರೂ ಪರಿಶೀಲನೆಗೆ ಬಂದಿರುವೆ
ಮಳೆಯಿಂದ ಹಾನಿಗೊಳಗಾಗಿರುವ ವಿವಿಧ ಪ್ರದೇಶಗಳಿಗೆ ಅಧಿಕಾರಗಳೊಂದಿಗೆ ಭಾನುವಾರ ಭೇಟಿ ನೀಡಿದ ಲಕ್ಷ್ಮೀ ಹೆಬ್ಬಾಳಕರ್, ಮಳೆ ಹಾನಿಯಿಂದ ಆದ ನಷ್ಟದ ಕುರಿತು ಮಾಹಿತಿ ಪಡೆದುಕೊಂಡರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಮಂಡಲ ಅಧಿವೇಶನ ನಡೀತಾ ಇದೆ. ಮಳೆ ಪರಿಸ್ಥಿತಿ ಕುರಿತು ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಭಾನುವಾರ ರಜೆ ಇದ್ದರೂ ಪರಿಶೀಲನೆ ಮಾಡಲು ಬಂದಿರುವೆ ಎಂದರು.
25 ದಿನಗಳ ಹಿಂದೆಯೇ ಜಿಲ್ಲಾ ಮಟ್ಟದ ಮುಂಜಾಗ್ರತಾ ಸಭೆ ನಡೆಸಿದ್ದೆ. ಬೀಳುವ ಹಂತದಲ್ಲಿರುವ ಮರಗಳನ್ನು ಕಡಿಯುವಂತೆ ಸೂಚಿಸಿದ್ದೆ. ಹೀಗಾಗಿ ಅರಣ್ಯ ಇಲಾಖೆ ವತಿಯಿಂದ 500 ರಿಂದ 600 ಮರಗಳನ್ನು ತೆರವು ಮಾಡಲಾಗಿದೆ. ಶಾಲೆಯ ಪಕ್ಕ ಇರುವ ವಯರ್‌ಗಳನ್ನು ತೆರವು ಮಾಡಲು ಮೆಸ್ಕಾಂನವರಿಗೆ ಈ ಮೊದಲೇ ಸೂಚನೆ ಕೊಟ್ಟಿದ್ದೇನೆ. ಅವರು ಕೂಡ ಅಪಾಯ ಇರುವಲ್ಲಿ ತೆರವು ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.
ನಗರದಲ್ಲಿ ಚರಂಡಿಯಿಂದ ಸಮಸ್ಯೆ ಆಗಿತ್ತು, ಸ್ವಚ್ಛಗೊಳಿಸಿದ್ದಾರೆ. ಕಾಲು ಸಂಕಗಳ ಸಮಸ್ಯೆ ಆಗದಂತೆ ನೋಡಿಕೊಂಡಿದ್ದೇವೆ. ಜಿಲ್ಲಾಡಳಿತದಿಂದ ಹೆಲ್ಪ್ ಲೈನ್ ತೆರೆಯಲಾಗಿದೆ. ಮಳೆ ಹಾನಿಗೆ ಸಂಬಂಧಿಸಿದಂತೆ ಪರಿಹಾರ ನೀಡುವ ವಿಚಾರದಲ್ಲಿ ಯಾವುದೇ ತಾರತಮ್ಯ ಆಗಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸ್ಪಷ್ಟ ಪಡಿಸಿದರು.
ಇದನ್ನೂ ಓದಿ: HD Kumaraswamy: ದರೋಡೆ, ಲೂಟಿ ತಡೆಯಲು ಸೇನೆ ಕರೆಸಬೇಕಿತ್ತಾ? ಡಿಕೆಶಿಗೆ ತಿರುಗೇಟು ಕೊಟ್ಟ ಎಚ್‌ಡಿಕೆ
ಈ ವೇಳೆ ಬೈಂದೂರು ಮಾಜಿ ಶಾಸಕ ಗೋಪಾಲ್ ಪೂಜಾರಿ, ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಯಲ್, ಕುಂದಾಪುರ ವಿಭಾಗದ ಸಹಾಯಕ ಆಯುಕ್ತರಾದ ಎಸ್.ಆರ್. ರಶ್ಮಿ, ಡಿಎಫ್‌ಒ ಗಣಪತಿ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪರಿಶೀಲನೆ ಬಳಿಕ ಗೃಹ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್, ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಯಲ್ ಜತೆ ಸಭೆ ನಡೆಸಿ, ಹೆಚ್ಚಿನ ಮಾಹಿತಿ ಪಡೆದು ಕೊಂಡರು. ಇದೇ ವೇಳೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಟ್ಟಿಯಂಗಡಿಯಲ್ಲಿರುವ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ , ಸಚಿವರು ವಿಶೇಷ ಪೂಜೆ ಸಲ್ಲಿಸಿದರು.
ಸಚಿವರು ಬೀಚ್, ದೇವಸ್ಥಾನ ನೋಡಲು ಬಂದಿದ್ದಾ?
ಬೈಂದೂರಿಗೆ ಭೇಟಿ ನೀಡಿದ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸೋಮೇಶ್ವರ ಗುಡ್ಡ ಕುಸಿತವನ್ನು ದೂರದಿಂದ ವೀಕ್ಷಿಸಿ ತೆರಳಿದರು. ಜರಿಯುತ್ತಿರುವ ಗುಡ್ಡದ ಬುಡದಲ್ಲಿ ಕಾಯುತ್ತಿದ್ದ ಗ್ರಾಮಸ್ಥರು ಅಸಮಾಧಾನ ಹೊರಹಾಕಿದರು. ಕಡಲ ತೀರ ಪ್ರದೇಶದಿಂದ ಗುಡ್ಡ ವೀಕ್ಷಿಸಿ ವಾಪಸ್ ಆದ ಸಚಿವರು ಬೀಚ್, ದೇವಸ್ಥಾನ ನೋಡಲು ಬಂದದ್ದಾ? ಗುಡ್ಡ ನೋಡಲು ಬಂದದ್ದಾ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ನಾಲ್ಕು ದಿನಗಳಿಂದ ಸೋಮೇಶ್ವರ ಗುಡ್ಡ ಕುಸಿಯುತ್ತಿದೆ. ಖಾಸಗಿ ರೆಸಾರ್ಟ್ ನಿರ್ಮಾಣದಿಂದ ಈ ಅವ್ಯವಸ್ಥೆ ಉಂಟಾಗಿದೆ. ಗುಡ್ಡಜರಿತಕ್ಕೆ ಶೀಘ್ರ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ