Site icon Vistara News

Lakshmi Hebbalkar : ಹೆದ್ದಾರಿಯಲ್ಲಿ ಅಪಘಾತವಾಗಿ ನರಳುತ್ತಿದ್ದ ವಿದ್ಯಾರ್ಥಿ ನೆರವಾದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Lakshmi Hebbalkar

ಉಡುಪಿ: ಕಳೆದ ಸೋಮವಾರವಷ್ಟೇ ಚಾಮರಾಜನಗರದ ಹೊರವಲಯದಲ್ಲಿ ರಸ್ತೆ ಅಪಘಾತದಿಂದ (Road accident) ರಕ್ತದ ಮಡುವಿನಲ್ಲಿ ನರಳುತ್ತಿದ್ದ ಇಬ್ಬರು ಯುವಕರನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಶನಿವಾರ ಕೂಡ ಓರ್ವ ವಿದ್ಯಾರ್ಥಿಗೆ ಆಟೋ ಮೂಲಕ ಆಸ್ಪತ್ರೆಗೆ ಸಾಗಿಸಲು ನೆರವಾದರು‌.

ಸಚಿವರು ಉಡುಪಿಯ (Udupi News) ಕಾಪು ತಾಲೂಕಿನ ಪಣಿಯೂರಿನ ಬೆಳಪು ವ್ಯವಸಾಯ ಸಹಕಾರ ಸಂಘದ ಅಮೃತ ಮಹೋತ್ಸವ ಸಂಭ್ರಮಾಚರಣೆ ಹಾಗೂ ‘ಸಹಕಾರಿ ಮಹಲ್’ನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಉಡುಪಿಯತ್ತ ಬರುತ್ತಿದ್ದರು.

ಈ ವೇಳೆ ರಾಷ್ಟ್ರೀಯ ಹೆದ್ದಾರಿ 66ರ ಕಾಪು ಕ್ರಾಸ್ ಬಳಿ ರಸ್ತೆ ದಾಟುತ್ತಿದ್ದ ವೇಳೆ ವಿದ್ಯಾರ್ಥಿಯೊಬ್ಬನಿಗೆ ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ರಸ್ತೆಯಲ್ಲೆ ನರಳುತ್ತಿದ್ದ‌.

ಅದೇ ಮಾರ್ಗದಲ್ಲಿ ಸಾಗುತ್ತಿದ್ದ ಸಚಿವರು, ವಿದ್ಯಾರ್ಥಿಯ ನರಳಾಟವನ್ನು ಕಂಡು ತಕ್ಷಣವೇ ಕಾರನ್ನು ನಿಲ್ಲಿಸಿ, ಆತನಿಗೆ ಉಪಚರಿಸಿ, ಬಳಿಕ ಅಲ್ಲಿಯೇ ನಿಂತಿದ್ದ ಆಟೋವೊಂದರಲ್ಲಿ ವಿದ್ಯಾರ್ಥಿಯನ್ನು ಕೂರಿಸಿ ಆಸ್ಪತ್ರೆಗೆ ಸಾಗಿಸಿದರು‌. ಸಚಿವರ ಈ ಕಾರ್ಯ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಯಿತು.

ಕಳೆದ ಸೋಮವಾರ ಏನಾಗಿತ್ತು?

ಗೃಹಲಕ್ಷ್ಮಿ ಯೋಜನೆ ಚಾಲನಾ ಸಮಾರಂಭದ ಹಿನ್ನೆಲೆಯಲ್ಲಿ ಚಾಮರಾಜನಗರದಲ್ಲಿ ಆಯೋಜಿಸಲಾದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ ಬಳಿಕ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಮಂಡ್ಯಕ್ಕೆ ತೆರಳುತ್ತಿದ್ದರು. ನಗರದ ಹೊರವಲಯದ ಸಂತೇಮರಳ್ಳಿ ಮುಖ್ಯ ರಸ್ತೆಯ ದೊಡ್ಡಪೇಟೆ ಕ್ರಾಸ್ ಬಳಿ ಬೈಕ್‌ನಲ್ಲಿ ಚಲಿಸುತ್ತಿದ್ದ ಇಬ್ಬರು ಯುವಕರು ಆಟೋ‌ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಬಿದ್ದು ನರಳುತ್ತಿದ್ದರು.

ಇದೇ ಮಾರ್ಗದಲ್ಲಿ ಚಲಿಸುತ್ತಿದ್ದ ಸಚಿವರು, ತಮ್ಮ ಕಾರನ್ನು ನಿಲ್ಲಿಸಿ ಆಂಬ್ಯುಲೆನ್ಸ್‌ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು. ಕೆಲಸದ ಒತ್ತಡದ ಮಧ್ಯೆಯೂ ಸಚಿವರು ಗಾಯಾಳುಗಳನ್ನು ಸಾಗಿಸಲು ಎಲ್ಲ ವ್ಯವಸ್ಥೆ ಮಾಡಿದರು.

Exit mobile version