Site icon Vistara News

Lakshmi Hebbalkar: ನಕಲಿ ಪರಶುರಾಮ ಪ್ರತಿಮೆ ಸ್ಥಾಪನೆ; ಎಸ್ಐಟಿ ತನಿಖೆಗೆ ಹೆಬ್ಬಾಳಕರ್ ಒತ್ತಾಯ

Protest by Congress alleged that MLA Sunil Kumar has built a fake Parashurama statue

ಬೆಂಗಳೂರು: ನಕಲಿ ಪರಶುರಾಮ ಮೂರ್ತಿ ಸ್ಥಾಪಿಸುವ ಮೂಲಕ ಕಾರ್ಕಳ ಕ್ಷೇತ್ರದ ಶಾಸಕ ಸುನೀಲ್ ಕುಮಾರ್‌, ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ (Lakshmi Hebbalkar) ಕಿಡಿ ಕಾಡಿದ್ದಾರೆ.

ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಕಲಿ ಪರಶುರಾಮ ಮೂರ್ತಿ ನಿರ್ಮಿಸಿರುವ ಮಾಜಿ ಸಚಿವ ಹಾಗೂ ಹಾಲಿ ಶಾಸಕ ವಿ. ಸುನೀಲ್ ಕುಮಾರ್ ವಿರುದ್ಧ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಯಲ್ಲಿ ಮಾತನಾಡಿದ ಸಚಿವರು, ಬಿಜೆಪಿ ಶಾಸಕ ಸುನೀಲ್ ಕುಮಾರ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಸುಳ್ಳನ್ನು ನೂರು ಬಾರಿ ಹೇಳಿ ನಿಜ ಮಾಡುವ ಕಲೆ ಸುನೀಲ್ ಕುಮಾರ್ ಅವರಿಗಿದೆ. ನಾನು ಬೆಳಗಾವಿಯಲ್ಲಿ ಶಿವಾಜಿ ಪ್ರತಿಮೆ ನಿರ್ಮಿಸಿರುವೆ, ನನಗೂ ಗೊತ್ತಿದೆ ಎಷ್ಟು ಸಮಯ ಬೇಕಾಗುತ್ತದೆ ಎಂದು. ಆದರೆ ಕೇವಲ 3 ತಿಂಗಳಲ್ಲಿ 12 ಕೋಟಿ ರೂಪಾಯಿ ವೆಚ್ಚದಲ್ಲಿ ಕಂಚಿನ ಪರಶುರಾಮ ಪ್ರತಿಮೆ ನಿರ್ಮಿಸಲಾಗಿದೆ. ಇಂಥ ಪ್ರತಿಮೆಗಳನ್ನು ನಿರ್ಮಿಸುವಾಗ ವರ್ಷಾನುಗಟ್ಟಲೆ ಸಮಯ ಹಿಡಿಯುತ್ತದೆ. ಚುನಾವಣೆಗಾಗಿ ಕೇವಲ ಮೂರು ತಿಂಗಳಲ್ಲಿ ಪ್ರತಿಮೆ ನಿರ್ಮಾಣ ಕಾರ್ಯ ಮುಗಿಸಿದ್ದು, ಕೇಳಿ ಆಶ್ಚರ್ಯ ಉಂಟಾಯಿತು ಎಂದರು.

ಇದನ್ನೂ ಓದಿ: Lakshmi Hebbalkar: ಇ.ಡಿ ಮೂಲಕ ಸಿದ್ದರಾಮಯ್ಯ ಹೆಸರು ಕೆಡಿಸಲು ಹುನ್ನಾರ; ಹೆಬ್ಬಾಳಕರ್ ಆರೋಪ

ಹಿಂದುತ್ವದ ಹೆಸರಿನಲ್ಲಿ ಜನರ ಭಾವನೆಗಳನ್ನು ಕೆರಳಿಸಿ ಮತ ಪಡೆಯುವ ಬಿಜೆಪಿಗರಿಗೆ ಕರಾವಳಿ ಜನತೆ ಮುಂದಿನ ದಿನಗಳಲ್ಲಿ ಪಾಠ ಕಲಿಸಬೇಕಿದೆ. ರಾಮಮಂದಿರ ನಿರ್ಮಾಣಗೊಂಡಿರುವ ಅಯೋಧ್ಯೆಯಲ್ಲಿಯೇ ಬಿಜೆಪಿ ಸೋತಿದ್ದು, ಕರಾವಳಿ ಜನರು ಕೂಡ ಬಿಜೆಪಿಗೆ ಪಾಠ ಕಲಿಸಬೇಕಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಅಧಿವೇಶನದಲ್ಲಿ ಸುನೀಲ್ ಕುಮಾರ್, ಮುಖ್ಯಮಂತ್ರಿಗಳ ವಿರುದ್ಧ ಟೀಕಾ ಪ್ರಹಾರ ಮಾಡುವುದನ್ನು ನೋಡಿದರೆ ತಾನೊಬ್ಬ ಸಂಭಾವಿತ ಎಂದು ತೋರಿಸಿಕೊಳ್ಳುತ್ತಾರೆ. ಪರಶುರಾಮನ ನಕಲಿ ಪ್ರತಿಮೆ ಸ್ಥಾಪಿಸಿ ಜನರ ದಿಕ್ಕನ್ನು ತಪ್ಪಿಸುತ್ತಿರುವ ಸುನೀಲ್ ಕುಮಾರ್ ಮಾಡಿದ ತಪ್ಪಿಗೆ ಶಿಕ್ಷೆಯಾಗಲೇಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಗ್ರಹಿಸಿದರು.

ಈ ವೇಳೆ ಮಾಜಿ ಸಚಿವರಾದ ರಮಾನಾಥ್ ರೈ, ವಿನಯ್ ಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ, ಮುಖಂಡರಾದ ಜಯಪ್ರಕಾಶ್ ಹೆಗ್ಡೆ, ‌ಉದಯ್ ಕುಮಾರ್ ಶೆಟ್ಟಿ ಮುನಿಯಾಳ್, ಮಿಥುನ್ ರೈ, ದಿನೇಶ್ ಹೆಗ್ಡೆ ಮೊಳಹಳ್ಳಿ, ಸುಧೀರ್ ಕುಮಾರ್ ಮೊರಳ್ಳಿ, ಉಡುಪಿ‌ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಹರೀಶ್ ಕುಮಾರ್, ಕಿಶನ್ ಹೆಗ್ಡೆ, ಕಿರಣ್ ಹೆಗ್ಡೆ, ರಮೇಶ್ ಕಾಂಚನ್, ಕೃಪಾ ಆಳ್ವ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಇದನ್ನೂ ಓದಿ: IBPS: ರಾಷ್ಟ್ರೀಕೃತ ಬ್ಯಾಂಕ್‌ಗಳ 6,128 ಹುದ್ದೆಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ; ಇಲ್ಲಿದೆ ಹೊಸ ಟೈಮ್‌ ಟೇಬಲ್‌

ಎಸ್‌ಐಟಿ ತನಿಖೆಗೆ ಆಗ್ರಹಿಸಿ ಸಿಎಂಗೆ ಮನವಿ

ಪರಶುರಾಮ ಥೀಮ್ ನಿರ್ಮಾಣದಲ್ಲಿ ಆಗಿರುವ ಅವ್ಯವಹಾರ ಹಾಗೂ ನಕಲಿ ಪರಶುರಾಮ ಪ್ರತಿಮೆ ನಿರ್ಮಾಣದ ಪ್ರಕರಣವನ್ನು ವಿಶೇಷ ತನಿಖಾ ದಳ (ಎಸ್‌ಐಟಿ)‌ ರಚಿಸಿ ತನಿಖೆ ಮಾಡಿಸಬೇಕು ಎಂದು ಆಗ್ರಹಿಸಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನೇತೃತ್ವದ ನಿಯೋಗದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಮುಖಂಡರು ನಿಯೋಗದಲ್ಲಿ ಇದ್ದರು.

Exit mobile version