ಉಡುಪಿ: ನಮ್ಮ ಮಕ್ಕಳು ನಮ್ಮ ಚರಿತ್ರೆಯನ್ನು ಕಲಿಯಬೇಕು, ನಮ್ಮ ಮಕ್ಕಳು ನಮ್ಮ ದೇಶದ ಇತಿಹಾಸವನ್ನು ಕಲಿಯಬೇಕು. ನಮ್ಮ ಇತಿಹಾಸದಲ್ಲಿ ಆಗಿರುವ ಲೋಪದೋಷಗಳನ್ನು ತಿಳಿದುಕೊಳ್ಳಬೇಕು ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಪಠ್ಯಪುಸ್ತಕ ವಿವಾದದ ಕುರಿತು ಸುದ್ದಿಗಾರರ ಪ್ರಶ್ನೆಗೆ ಶೋಭಾ ಕರಂದ್ಲಾಜೆ ಉತ್ತರಿಸಿದರು. ಬ್ರಿಟಿಷರು ದೇಶಕ್ಕೆ ಯಾಕೆ ಬಂದರು? ಮೊಘಲರು ಈ ದೇಶಕ್ಕೆ ಯಾಕೆ ಬಂದರು? ಘಜ್ನಿ ಮಹಮ್ಮದ್ 18 ಬಾರಿ ದಾಳಿ ಮಾಡಿದ್ದು ಯಾಕೆ? ನಮ್ಮ ಸಮಸ್ಯೆ, ನಮ್ಮ ಕೊರತೆ ಏನು? ಎಲ್ಲವನ್ನೂ ನಮ್ಮ ಮಕ್ಕಳು ಅಧ್ಯಯನ ಮಾಡಬೇಕು. ನಮ್ಮ ಮಕ್ಕಳಿಗೆ ಡಿಗ್ರಿ ಮಾಡಿದರೂ ದೇಶದ ಚರಿತ್ರೆ ಗೊತ್ತಿರುವುದಿಲ್ಲ, ದೇಶದ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದವರ ಬಗ್ಗೆ ಗೊತ್ತಿರುವುದಿಲ್ಲ ಎಂದರು.
ಇದನ್ನೂ ಓದಿ | ಕಾಂಗ್ರೆಸ್ ತ್ಯಜಿಸುವ ಅನೇಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ವ್ಯಕ್ತಿ ಅಥವಾ ಸಮಿತಿಯ ಬಗ್ಗೆ ನಾನು ಮಾತನಾಡುವುದಿಲ್ಲ. ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ರಾಜ್ಯ ನಮ್ಮದು.
ನಮ್ಮ ಕನ್ನಡ ಸಾಹಿತ್ಯ ಸತ್ವಯುತವಾಗಿದೆ, ಕನ್ನಡದ ಸಾಹಿತಿ ಕವಿಗಳಲ್ಲಿ ಅಷ್ಟೊಂದು ತಾಕತ್ತು ಇದೆ. ನಮ್ಮ ರಾಜ್ಯದ ಏಕೀಕರಣ ದಂತಹ ವಿಚಾರಗಳು ಕೂಡ ಮಕ್ಕಳಿಗೆ ತಿಳಿಯುವಂತಾಗಬೇಕು. ವಿವಾದ ಇಲ್ಲದಂತಹ ವ್ಯಕ್ತಿಗಳನ್ನು ಸಮಿತಿಯಲ್ಲಿ ಜೋಡಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಎಲ್ಲರಿಗೂ ಪ್ರಿಯವಾದ ವಿಚಾರಗಳನ್ನು ಹೇಳಿಕೊಡಬೇಕು. ಎಲ್ಲರನ್ನೂ ಖುಷಿಪಡಿಸುವುದು ಕಷ್ಟ. ಆದರೆ ಎಲ್ಲರೂ ಸಮಾನ ಎನ್ನುವ ರೀತಿಯಲ್ಲಿ ಪರಿಷ್ಕರಣೆ ಯಾಗಬೇಕು, ಮಕ್ಕಳ ಮನಸ್ಸನ್ನು ಪುಳಕಗೊಳಿಸುವ, ವಿಕಸಿತ ಗೊಳಿಸುವ ಪಠ್ಯಗಳು ಬರಬೇಕು ಎಂದು ಹೇಳಿದರು.
ಇದನ್ನೂ ಓದಿ| ʼಹುದ್ದೆ ವಾಪ್ಸಿʼ ಅಭಿಯಾನ: ರೋಹಿತ್ ಚಕ್ರತೀರ್ಥ ತಲೆದಂಡಕ್ಕಾಗಿ ಸಾಲುಸಾಲು ರಾಜೀನಾಮೆ
ಕೈಗೊಂದು ಮಗುವನ್ನು ಕೊಟ್ಟು ಓಡಿ ಹೋಗುತ್ತಾರೆ
ಲವ್ ಜಿಹಾದ್ ನಮ್ಮ ಹೆಣ್ಣುಮಕ್ಕಳನ್ನು ನರಕದ ಕೂಪಕ್ಕೆ ತಳ್ಳುವ ಪ್ರಕ್ರಿಯೆ. ಪ್ರೀತಿಯ ಹೆಸರಲ್ಲಿ ಮದುವೆಯಾಗುತ್ತಾರೆ ಅಥವಾ ಮದುವೆಯಾಗದೆ ಮೋಸ ಮಾಡುತ್ತಾರೆ. ಕೈಗೊಂದು ಮಗುವನ್ನು ಕೊಟ್ಟು ಓಡಿ ಹೋಗುತ್ತಾರೆ. ನಂತರ ತಲಾಖ್ ಎಂದು ಹೇಳಿ ಇನ್ನೊಬ್ವರನ್ನು ಮದುವೆಯಾಗುತ್ತಾರೆ. ದೇಶದ ಅನೇಕ ಭಾಗಗಳಲ್ಲಿ ನಮ್ಮ ಹೆಣ್ಣುಮಕ್ಕಳು ಸಮಸ್ಯೆ ಎದುರಿಸುತ್ತಿದ್ದಾರೆ. ಲವ್ ಜಿಹಾದ್ ಒಂದು ಪಿಡುಗು ತಕ್ಷಣ ಕೊನೆಯಾಗಬೇಕು, ಲವ್ ಜಿಹಾದ್‌ಗೆ ಹೆಣ್ಣುಮಕ್ಕಳು ಬಲಿಯಾದರೆ ತಂದೆ-ತಾಯಿಯ ದುಃಖ ಕೇಳುವವರ್ಯಾರು? ಲವ್ ಜಿಹಾದ್ ತಡೆಗೆ ಬಲವಾದ ಕಾನೂನು ಜಾರಿ ಮಾಡುವ ಅಗತ್ಯ ಇದೆ. ಹಿಂದಿನಿಂದಲೂ ಈ ಬಗ್ಗೆ ವಾದ ಮಾಡಿಕೊಂಡು ಬಂದಿದ್ದೇನೆ ಎಂದರು.
ವೈಯಕ್ತಿಕ ದ್ವೇಷ ಕಾರುವುದು ಸರಿಯಲ್ಲ
ಯಾವುದೇ ಹೋರಾಟಗಾರರ ಮೇಲೆ ಈ ರೀತಿ ಮಾಡುವುದು ಸರಿಯಲ್ಲ. ಪ್ರಜಾತಂತ್ರದಲ್ಲಿ ಹೋರಾಟಕ್ಕೆ ಬಲವಿದೆ ಮತ್ತು ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್ ಗಳಲ್ಲಿ ಪ್ರತಿಪಕ್ಷಕ್ಕೆ ದೊಡ್ಡ ತಾಕತ್ತು ಇದೆ. ಸರಕಾರದ ಲೋಪದೋಷಳನ್ನು ಸರಿಪಡಿಸಿ ಎಚ್ಚರಗೊಳಿಸುವ ಕೆಲಸ ಹೋರಾಟದಿಂದಲೇ ಸಾಧ್ಯ. ಟಿಕಾಯತ್ ತನ್ನದೇ ಒಂದು ವಿಚಾರ ಇಟ್ಟು ಹೋರಾಟ ನಡೆಸುತ್ತಿದ್ದಾರೆ. ಅದರಿಂದ ರೈತರಿಗೆ ಎಷ್ಟು ಲಾಭ ಆಯ್ತು ನಷ್ಟ ಆಯ್ತು? ಅನ್ನೋದನ್ನು ಅವರೇ ಅವಲೋಕನ ಮಾಡಲಿ ಆದರೆ ಯಾವುದೇ ವ್ಯಕ್ತಿಯ ಮೇಲೆ ಈ ರೀತಿ ವೈಯಕ್ತಿಕ ದ್ವೇಷ ಕಾರುವುದು ಸರಿಯಲ್ಲ. ಮಸಿಬಳಿಯುವ ಕೆಲಸ ಯಾರು ಕೂಡ ಮಾಡಬಾರದು, ಶೋಭೆ ತರುವಂತದ್ದಲ್ಲ ಎಂದು ಹೇಳಿದರು.
ಕಾನೂನು ಉಲ್ಲಂಘನೆ ಸರಿಯಲ್ಲ:
ತರಗತಿಯ ಒಳಗೆ ಹಿಜಾಬ್ ಗೆ ಅವಕಾಶ ಇಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ಸ್ಪಷ್ಟವಾಗಿದೆ. ಈ ನೆಲದಲ್ಲಿ ಬದುಕುವಂಥ ಕಾನೂನಿಗೆ ಗೌರವ ಕೊಡುವಂತ ಎಲ್ಲರೂ ಈ ಆದೇಶ ಪಾಲಿಸಬೇಕು ಹಾಗು ಹೈಕೋರ್ಟ್ ಕಾನೂನು ಉಲ್ಲಂಘನೆ ಮಾಡುತ್ತೇವೆ ಅನ್ನೋದು ಸರಿಯಲ್ಲ, ಅಂಥವರ ಮೇಲೆ ಕಠಿಣವಾದ ಕ್ರಮ ಕೈಗೊಳ್ಳಬೇಕು ಮತ್ತೆ ಮುಂದೆ ಸಮಾಜದ್ರೋಹಿ, ದೇಶದ್ರೋಹಿ ಚಟುವಟಿಕೆಗೆ ಕಾರಣವಾಗುತ್ತೆ. ಹೈಕೋರ್ಟ್ ಆದೇಶವನ್ನು ಎಲ್ಲರೂ ಪಾಲಿಸಬೇಕು ಎಂದು ಶೋಭಾ ಕರಂದ್ಲಾಜೆ ಹೇಳಿದರು.
ದೇವಸ್ಥಾನಗಳನ್ನು ಕೆಡವಿ ಮಸೀದಿ ಕಟ್ಟಲಾಗಿದೆ:
ಗೃಹ ಇಲಾಖೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆಗಳು ಈ ವಿಚಾರ ಗಮನಿಸುತ್ತದೆ. ಇತಿಹಾಸಗಳಲ್ಲಿ ಆಗಿರುವ ತಪ್ಪುಗಳನ್ನು ಸರಿ ಮಾಡಬೇಕು. ಯಾವುದು ಹಿಂದೂಗಳಿಗೆ ಸೇರಬೇಕು ಅನ್ನುವುದರ ನಿಷ್ಕರ್ಷೆಯಾಗಬೇಕು. ಈ ಬಗ್ಗೆ ಎಲ್ಲರೂ ಆಲೋಚಿಸಿದರೆ ಒಟ್ಟಾಗಿ ಬದುಕಬಹುದು. ಹಲವಾರು ದೇವಸ್ಥಾನಗಳನ್ನು ಕೆಡವಿ ಮಸೀದಿಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ನಾವ್ಯಾರೂ ಇದಕ್ಕೆ ಸಾಕ್ಷಿಗಳಲ್ಲ. ನಮ್ಮ ಹಿರಿಯರ ಕಾಲದಲ್ಲಿ ಕೆಲವೊಂದು ತಪ್ಪುಗಳಾಗಿವೆ. ಇತಿಹಾಸಜ್ಞರು ಉತ್ಖನನ ಮಾಡಿ ಯಾವುದು ಸರಿ ಯಾವುದು ತಪ್ಪು ಎನ್ನುವ ಬಗ್ಗೆ ತಿಳಿಸಬೇಕು. ಎಲ್ಲರೂ ಈ ಬಗ್ಗೆ ಒಟ್ಟಾಗಿ ಯೋಚನೆ ಮಾಡಿದರೆ ಖಂಡಿತ ಈ ಸಮಸ್ಯೆ ಬಗೆಹರಿಸಬಹುದು. ಮಳಲಿ ಮಸೀದಿ ವಿವಾದ ಎರಡು ಧರ್ಮದವರು ಒಟ್ಟಿಗೆ ಕುಳಿತು ಬಗೆಹರಿಸಿಕೊಳ್ಳಬೇಕು. ನಿಜವಾಗಿಯೂ ಇತಿಹಾಸದಲ್ಲಿ ಯಾರಿಗೆ ಸೇರಿತ್ತು ಅನ್ನೋದನ್ನು ಸಹ ಹರ್ಷದಿಂದ ಯೋಚನೆ ಮಾಡಬೇಕು ಎಂದು ಹೇಳಿದರು.
ಇದನ್ನೂ ಓದಿ | ಮಳಲಿ ಮಸೀದಿ ವಿವಾದದ ಸೌಹಾರ್ದ ಇತ್ಯರ್ಥಕ್ಕೆ ಹಿಂದೂ-ಮುಸ್ಲಿಂ ಮುಖಂಡರ ನಿರ್ಧಾರ