ಉಡುಪಿ: ಎಲ್ಲ ಮಸೀದಿಗಳಲ್ಲಿ ಶಿವಲಿಂಗ ಹುಡುಕಬೇಡಿ ಎಂಬ ಮೋಹನ್ ಭಾಗವತ್ ಅವರ ಹೇಳಿಕೆಯನ್ನು ಸ್ವಾಗತಿಸುತ್ತೇವೆ. ಆದರೆ ಈಗ ಇರುವುದನ್ನು ಸರಿ ಮಾಡಿಕೊಳ್ಳೋಣ ಎಂಬುವುದೇ ಅವರ ಮಾತಿನ ಅರ್ಥ ಎಂದು ಶಾಸಕ ರಘುಪತಿ ಭಟ್ ವ್ಯಾಖ್ಯಾನ ಮಾಡಿದ್ದಾರೆ.
ಎಲ್ಲ ದೇಗುಲಗಳಲ್ಲೂ ಶಿವಲಿಂಗ ಏಕೆ ಹುಡುಕಬೇಕು ಎಂದು ನಾಹಪುರದಲ್ಲಿ ನಡೆದ ಆರ್‌ಎಸ್‌ಎಸ್ ಶಿಬಿರ ಸಮಾರೋಪದಲ್ಲಿ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಹೇಳಿದ್ದರು. ಈ ಕುರಿತು ರಘುಪತಿ ಭಟ್ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ | ಪ್ರತಿ ಮಸೀದಿಯಲ್ಲೂ ಶಿವಲಿಂಗ ಹುಡುಕುವ ಅಗತ್ಯವೇನಿದೆ? ಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತ್
ಮಸೀದಿಗಳಲ್ಲಿ ದೇಗುಲಗಳ ಕುರುಹುಗಳು ಸಿಕ್ಕಾಗ ನಮ್ಮ ಭಾವನೆಗೆ ಧಕ್ಕೆ ಆಗುತ್ತದೆ. ದೇಗುಲಗಳ ಮೂಲಸ್ಥಾನಕ್ಕೆ ಹುಡುಕಿಕೊಂಡು ಹೋಗಿ ಜೀರ್ಣೋದ್ಧಾರ ಮಾಡುತ್ತೇವೆ. ಸೌಹಾರ್ದತೆ ಇರಬೇಕೆಂದು ಆರೆಸ್ಸೆಸ್ ಮುಖ್ಯಸ್ಥರು ಕರೆಕೊಟ್ಟಿದ್ದಾರೆ. ಆದರೆ ಇವು ನಂಬಿಕೆ, ಭಾವನಾತ್ಮಕ ವಿಷಯಗಳು ಆಗಿರುವುದರಿಂದ ಸಾಕ್ಷ್ಯ ಸಿಕ್ಕಲ್ಲಿ ಹೋರಾಟ ಆಗಿಯೇ ಆಗುತ್ತದೆ ಎಂದು ತಿಳಿಸಿದ್ದಾರೆ.
ಆರ್‌ಎಸ್‌ಎಸ್ ಚಡ್ಡಿ ಸುಡುವ ಅಭಿಯಾನಕ್ಕೆ ಸಿದ್ದರಾಮಯ್ಯ ಕರೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಭಟ್, ಸಿದ್ದರಾಮಯ್ಯಗೆ ಆರೆಸ್ಸೆಸ್ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆರ್‌ಎಸ್‌ಎಸ್ ಚಡ್ಡಿ ಸಂಸ್ಕೃತಿ ಬಿಟ್ಟು ಪ್ಯಾಂಟಿಗೆ ಬಂದು ಬಹಳ ಸಮಯವಾಯಿತು. ಈಗ ನಮ್ಮ ಗಣವೇಶ ಅಂಗಿ ಪ್ಯಾಂಟ್ ಆಗಿದೆ. ಸಿದ್ದರಾಮಯ್ಯ ರಾಜಕೀಯ ದ್ವೇಷದಿಂದ ಹೀಗೆ ಮಾತನಾಡುತ್ತಾರೆ. ಆ ಚಡ್ಡಿ ಇದ್ದಿದ್ದರಿಂದಲೇ ದೇಶದಲ್ಲಿ ಒಳ್ಳೆಯ ವಾತಾವರಣ ಇದೆ ಎಂದು ಹೇಳಿದ್ದಾರೆ.
ಆರ್‌ಎಸ್ಎಸ್ ಇಲ್ಲದಿದ್ದಿದ್ದರೆ ದೇಶದ ಪರಿಸ್ಥಿತಿ ಊಹಿಸಲೂ ಸಾಧ್ಯವಾಗುತ್ತಿರಲಿಲ್ಲ, ಸಂಘವು ಮಾಜಿ ಸಿಎಂಗೆ ಏನು ಮಾಡಿದೆಯೋ ಗೊತ್ತಿಲ್ಲ. ದೇಶಭಕ್ತರ ತಯಾರು ಮಾಡುವ ಸಂಸ್ಥೆ ಆರ್‌ಎಸ್‌ಎಸ್ ಆಗಿದ್ದು, ರಾಷ್ಟ್ರೀಯತೆ ಮತ್ತು ಒಳ್ಳೆಯ ಶಿಕ್ಷಣ ಕೊಡುವುದೇ ಅದರ ಉದ್ದೇಶ. ಆರ್‌ಎಸ್‌ಎಸ್ ಇರುವುದರಿಂದ ಸಿದ್ದರಾಮಯ್ಯನ ಬೇಳೆ ಬೆಳೆಯುತ್ತಿಲ್ಲ, ಆರ್‌ಎಸ್‌ಎಸ್ ಏನು ಎಂಬುದು ಇಡೀ ವಿಶ್ವಕ್ಕೇ ಗೊತ್ತು ಎಂದು ಕುಟುಕಿದ್ದಾರೆ.
ಇದನ್ನೂ ಓದಿ | ಚಡ್ಡಿಗೆ ಅಷ್ಟೊಂದು ಪವರಾ? ಚಡ್ಡಿ ಏನು ರಾಷ್ಟ್ರಧ್ವಜವೇ ಎಂದು ಪ್ರಶ್ನಿಸಿದ ಕಾಂಗ್ರೆಸ್