Site icon Vistara News

ಬಿಜೆಪಿ, ಶ್ರೀರಾಮ ಸೇನೆ ಮುಖಂಡರ ಹತ್ಯೆಗೆ ₹20 ಲಕ್ಷ ಬಹುಮಾನ, ದೂರು ದಾಖಲು

ಉಡುಪಿ: ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ ಮತ್ತು ಶ್ರೀರಾಮ ಸೇನೆ ಮುಖ್ಯಸ್ಥರಾದ ಪ್ರಮೋದ್‌ ಮುತಾಲಿಕ್‌ರನ್ನು ಹತ್ಯೆ ಮಾಡುವ ಬೆದರಿಕೆ ಪೋಸ್ಟ್‌ಅನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿರುವ ಪ್ರಕರಣ ಸಂಬಂಧ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

@mari_gudi_6 ಎಂಬ ಇನ್‌ಸ್ಟಾಗ್ರಾಂ ಖಾತೆಯಿಂದ ಯಶಪಾಲ್‌ ಸುವರ್ಣ ಹಾಗೂ ಪ್ರಮೋದ್‌ ಮುತಾಲಿಕ್‌ ಅವರ ಫೋಟೋವನ್ನು ಹಾಕಿ ಅದಕ್ಕೆ, ʼಈ ಎರಡು ಹಂದಿಗಳ ತಲೆ ಕಡಿದರೆ ₹ 20 ಲಕ್ಷ ನೀಡಲಾಗುವುದು. ಒಂದು ತಲೆಗೆ ₹ 10ಲಕ್ಷ ಘೋಷಣೆ. ನಿಮ್ಮ ಖಾತೆಗೆ ಜಮಾ ಮಾಡಲಾಗುವುದುʼ ಎಂದು ಬರೆಯಲಾಗಿತ್ತು.

ಇನ್‌ಸ್ಟಾಗ್ರಂನಲ್ಲಿ ಬೆದರಿಕೆಯ ಪೋಸ್ಟ್‌ ಹಾಕಿರುವುದರ ವಿರುದ್ಧ ಕಾಪು ಯುವ ಮೋರ್ಚಾದಿಂದ ಕಾಪು ಪೊಲೀಸ್ ವೃತ್ತ ನಿರೀಕ್ಷಕ ಪ್ರಕಾಶ್ ಹಾಗೂ ಕಾಪು ಪೊಲೀಸ್ ಠಾಣಾ ಉಪ ನಿರೀಕ್ಷಕರಿಗೆ ದೂರು ನೀಡಲಾಯಿತು. ಪ್ರಚೋದನಾಕಾರಿ ಪೋಸ್ಟ್ ಮೂಲಕ ಕೋಮು ಗಲಭೆಯನ್ನು ಸೃಷ್ಟಿಸಲು ಯತ್ನಿಸಲಾಗುತ್ತಿದೆ. ಶಾಂತಿ ಸುವ್ಯವಸ್ಥೆ ಹದಗೆಡಿಸುವ ದುರುದ್ದೇಶ ಹೊಂದಿರುವ ಮತೀಯವಾದಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ವಿವರಿಸಲಾಗಿದೆ.

ಈ ಸಂದರ್ಭದಲ್ಲಿ ಕಾಪು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಚಿನ್ ಸುವರ್ಣ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಪ್ರವೀಣ್ ಪೂಜಾರಿ, ಅಕ್ಷಿತ್ ಶೆಟ್ಟಿ ಹೆರ್ಗ, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಅಭಿರಾಜ್ ಸುವರ್ಣ, ಕಾಪು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸೋನು ಪಾಂಗಾಳ, ಉಪಾಧ್ಯಕ್ಷರಾದ ಪ್ರಕಾಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ಉಡುಪಿಯಲ್ಲಿ ಪ್ರೇಮಿಗಳ ಸಾವು ಪ್ರಕರಣಕ್ಕೆ ಟ್ವಿಸ್ಟ್‌: ಕೊಲೆಯಾಗಿರುವ ಶಂಕೆ

Exit mobile version