Site icon Vistara News

Physical Abuse : ವೈದ್ಯಾಧಿಕಾರಿ ಅಶ್ಲೀಲ ವರ್ತನೆ; ರಾತ್ರಿಯಾದರೆ ವಿಡಿಯೊ ಕಾಲ್‌ನಲ್ಲಿ ವೈದ್ಯೆಗೆ ಟಾರ್ಚರ್‌‌

Physical Abuse

ಉಡುಪಿ: ಉಡುಪಿಯ ಕುಂದಾಪುರ ತಾಲೂಕು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಕಾಮಕಾಂಡಕ್ಕೆ ವೈದ್ಯೆಯೊಬ್ಬರು ಬೇಸತ್ತು (Physical Abuse) ಹೋಗಿದ್ದಾರೆ. ವೈದ್ಯಾಧಿಕಾರಿ ಡಾ. ರಾಬರ್ಟ್ ರೆಬೆಲ್ಲೋ ವಿರುದ್ಧ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ರಾಬರ್ಟ್‌ ರೆಬೆಲ್ಲೋ ವಿರುದ್ಧ ದೂರು ದಾಖಲಾಗಿದೆ.

ಕಳೆದ ಆರು ತಿಂಗಳಿನಿಂದ ತಾಲೂಕು ಆಸ್ಪತ್ರೆಯ ಮಹಿಳಾ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎನ್ನಲಾಗಿದೆ. 2023ರಲ್ಲಿ ತಾಲೂಕು ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ಸೇರಿದ್ದ ಮಹಿಳೆ ಎನ್ಆರ್‌ಸಿ ವಿಭಾಗದಲ್ಲಿ ವೈದ್ಯಾಧಿಕಾರಿಯಾಗಿದ್ದಾರೆ. ಕರ್ತವ್ಯಕ್ಕೆ ಸೇರಿದ ದಿನದಿಂದಲೇ ರಾಬರ್ಟ್‌ ಮೊಬೈಲ್‌ನಲ್ಲಿ ಅಶ್ಲೀಲ ಸಂದೇಶ ರವಾನೆ ಮಾಡುತ್ತಿದ್ದರು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಮಾತ್ರವಲ್ಲದೆ ಡಾ. ರಾಬರ್ಟ್ ರೆಬೆಲ್ಲೋ ಫೋನ್‌ ಕರೆ ಮಾಡಿ ಅಶ್ಲೀಲವಾಗಿ ಮಾತನಾಡುತ್ತಾ, ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಕರ್ತವ್ಯದ ಸಮಯ ಮತ್ತು ಮುಗಿದ ಮೇಲೆ ರಾತ್ರಿ ಮೆಸೇಜ್ ಮಾಡುವುದು. ವಿಡಿಯೊ ಕಾಲ್ ಮಾಡಿ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸದ್ಯ ಕುಂದಾಪುರ ಪೊಲೀಸ್ ಠಾಣೆಯಲ್ಲಿ ವೈದ್ಯಾಧಿಕಾರಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: Murder case : ಸ್ನೇಹಿತರೇ ದುಷ್ಮನ್‌ಗಳು; ಕಂಠಪೂರ್ತಿ ಕುಡಿಸಿ ಗೆಳೆಯನ ತಲೆ ಮೇಲೆ‌ ಕಲ್ಲು ಎತ್ತಿಹಾಕಿ ಕೊಲೆ

ಸಂಜೆಯಾದರೆ ರೂಮಿಗೆ ಬಾ ಅಂತಾರೆ! ಕೇಂದ್ರೀಯ ವಿವಿಯ ಪಿಎಚ್‌ಡಿ ಗೈಡ್ ಕಿರುಕುಳ

ಕಲಬುರಗಿ : ವಿದ್ಯಾಕಾಶಿಯಲ್ಲಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಕೇಂದ್ರೀಯ ವಿವಿಯಲ್ಲಿ ವಿದ್ಯಾರ್ಥಿನಿಗೆ ಸಹಾಯಕ ಪ್ರಾಧ್ಯಾಪಕನಿಂದ ಮಾನಸಿಕ ಕಿರುಕುಳ (Physical Abuse) ನೀಡಲಾಗುತ್ತಿದೆ ಎನ್ನಲಾಗಿದೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ಕೇಂದ್ರೀಯ ವಿವಿಯಲ್ಲಿ (Central University Of Karnataka) ಘಟನೆ ನಡೆದಿದೆ.

ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾದ್ಯಾಪಕ ಪ್ರೊ. ವಿಜಯಕುಮಾರ್ ಎಂಬುವವರಿಂದ ವಿದ್ಯಾರ್ಥಿನಿಯರಿಗೆ ಮಾನಸಿಕ‌ ಕಿರುಕುಳ ನೀಡಲಾಗುತ್ತಿದೆ ಅಂತೆ. ಪಿ.ಎಚ್.ಡಿ ಗೈಡ್ ಆಗಿರುವ ಪ್ರೊ. ವಿಜಯಕುಮಾರ್‌, ಸಂಜೆ ಆಗುತ್ತಿದ್ದಂತೆ ವಿದ್ಯಾರ್ಥಿನಿಯರನ್ನು ಸಂಶೋಧನೆಗಾಗಿ ಕರೆಯುತ್ತಾರೆ.

ಸಂಜೆ ಹೊತ್ತಿಗೆ ಸಂಶೋಧನೆಗಾಗಿ ‌ತಮ್ಮ ಕೊಠಡಿಗೆ ಕರೆಯುತ್ತಿದ್ದರು ಎಂದು ಕನ್ನಡ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಆರೋಪಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಈತನ ಕಿರುಕುಳಕ್ಕೆ ಬೇಸತ್ತ ವಿದ್ಯಾರ್ಥಿನಿ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಜತೆಗೆ ರಾಷ್ಟ್ರಪತಿಗಳಿಗೂ ಪತ್ರ ಬರೆದಿದ್ದು ಕ್ರಮವಹಿಸುವಂತೆ ಒತ್ತಾಯಿಸಿದ್ದಾರೆ.

ಭಾನುವಾರ ಮತ್ತು ರಜಾದಿನದಲ್ಲೂ ಕೊಠಡಿಗೆ ಬರುವಂತೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಹೋಗದೆ ಇದ್ದರೆ ಶಿಷ್ಯವೇತನ ಅರ್ಜಿಗೆ ಸಹಿ ಹಾಕುತ್ತಿರಲಿಲ್ಲ ಎಂದು ಪತ್ರದಲ್ಲಿ ವಿದ್ಯಾರ್ಥಿನಿ ಉಲ್ಲೇಖಿಸಿದ್ದಾಳೆ. ಇನ್ನೂ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡುತ್ತಿದ್ದರು ಎಂದು ಮಹಿಳಾ‌ ಆಯೋಗಕ್ಕೆ ದೂರು ನೀಡಿದ್ದಾರೆ. ಜತೆಗೆ ಗರ್ಭಿಣಿ ಎಂಬುದು ತಿಳಿದರೂ ವಿನಾಕಾರಣ ಮಾರ್ಗದರ್ಶಕರಿಂದ ತೊಂದರೆ ಆಗುತ್ತಿದೆ. ಮಾರ್ಗದರ್ಶಕರನ್ನು ಬದಲಾವಣೆ ಮಾಡಿ, ಸಂಶೋಧನಾ ಅಧ್ಯಯನಕ್ಕೆ ಸಹಾಯ ಮಾಡುವಂತೆ ಮಹಿಳಾ ಆಯೋಗಕ್ಕೆ ವಿನಂತಿಸಿದ್ದಾರೆ.

ವಿಶ್ವವಿದ್ಯಾಲಯಕ್ಕೆ ಬಂದಾಗಿನಿಂದಲೂ ಉದ್ದೇಶಪೂರ್ವಕವಾಗಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ನನ್ನ ವೈಯಕ್ತಿಕ ವಿಷಯ ಮಾತಾಡಿ ನಿಂದಿಸುವುದು, ಹಣದ ಆಮಿಷ ತೋರಿಸುವುದು, ವಿವಿಗೆ ರಜಾದಿನಗಳಲ್ಲಿ ಮತ್ತು ಭಾನುವಾರವೂ ವಿಭಾಗಕ್ಕೆ ಬರಬೇಕೆಂದು ಹೇಳುವುದು. ಅವಾಚ್ಯ ಶಬ್ಧಗಳಿಂದ ಬೈಯುತ್ತಾರೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version