ಮೈಸೂರು/ ಕೊಡಗು : ರಾಜ್ಯದಲ್ಲಿ ಬೆಂಬಿಡದೆ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಹಾನಿಗೊಳಗಾದ ಪ್ರದೇಶಗಳಿಗೆ ಮಂಗಳವಾರ (ಜು.12) ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಲಿದ್ದಾರೆ. ಮಳೆಯಿಂದ ತತ್ತರಗೊಂಡಿರುವ ಕೊಡಗು, ಉಡುಪಿ, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಎರಡು ದಿನಗಳ ಪ್ರವಾಸ ನಡೆಸಲಿದ್ದಾರೆ.
ಮೊದಲು ಮೈಸೂರಿಗೆ ತೆರಳಿ ನಂತರ ಕೊಡಗು ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ಆಗಮಿಸಿ ನಂತರ ರಸ್ತೆ ಮೂಲಕ ಕೊಡಗಿಗೆ ಪ್ರಯಾಣಿಸಲಿದ್ದಾರೆ. ಒಂದೇ ದಿನದಲ್ಲಿ ಮೂರ್ನಾಲ್ಕು ಜಿಲ್ಲೆಗಳ ಪ್ರವಾಸವನ್ನು ಸಿಎಂ ಕೈಗೊಂಡಿದ್ದಾರೆ. ಹಾನಿಗೊಳಗಾದ ಜಿಲ್ಲೆಗಳಿಗೆ ಪರಿಹಾರ ಘೋಷಿಸುವ ಸಾಧ್ಯತೆ ಇದೆ.
ಇದನ್ನೂ ಓದಿ | ಬೆಳಗಾವಿಯಲ್ಲಿ ವರುಣನ ಅಬ್ಬರ, ನೆರೆಪೀಡಿತ ಜಿಲ್ಲೆಗಳಿಗೆ ಇಂದು ಸಿಎಂ ಭೇಟಿ
ಮಧ್ಯಾಹ್ನ 1 ಗಂಟೆಗೆ ಮಡಿಕೇರಿಯಲ್ಲಿ ಅಧಿಕಾರಿಗಳ ಜತೆ ಸಿಎಂ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 2:30ಕ್ಕೆ ದಕ್ಷಿಣ ಕನ್ನಡಕ್ಕೆ ತೆರಳಲಿದ್ದಾರೆ. ಮಂಗಳೂರಿಗೆ ತೆರಳುವ ವೇಳೆ NH 275 ರಲ್ಲಿನ ಭೂಕುಸಿತ ವೀಕ್ಷಣೆ ಮಾಡುವ ಸಾಧ್ಯತೆ ಇದೆ. ಸಿಎಂ ಜತೆ ಕಂದಾಯ ಸಚಿವ ಆರ್. ಅಶೋಕ್ ಆಗಮಿಸಲಿದ್ದಾರೆ.
ಎರಡನೇ ದಿನದ ಪ್ರವಾಸದಲ್ಲಿ ಬೆಳಗ್ಗೆ 9 ಗಂಟೆಗೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ಸಭೆ ನಡೆಸಲಿದ್ದಾರೆ. 12 ಗಂಟೆಗೆ ಭಟ್ಕಳಕ್ಕೆ ಭೇಟಿ ನೀಡಿ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆ ಮಾಡಲಿದ್ದಾರೆ. ಅಲ್ಲಿಂದ ಉತ್ತರ ಕನ್ನಡ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ಸಭೆ ನಡೆಸಲಿದ್ದಾರೆ. ಮತ್ತೆ ಉಡುಪಿಗೆ ವಾಪಸಾಗಿ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆ ಮಾಡಲಿದ್ದಾರೆ.
ಇದನ್ನೂ ಓದಿ | 25ನೇ ದಿನಕ್ಕೆ ಕಾಲಿಟ್ಟ ಮಹಾಲಿಂಗಪುರ ತಾಲೂಕು ಹೋರಾಟ: ಬೆಂಗಳೂರಲ್ಲಿ ಇಂದು ಸಿಎಂ ಭೇಟಿ