ಉಡುಪಿ: ಬಾಕ್ಸಿಂಗ್ ಕ್ರೀಡೆಯಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿದ್ದ ಕ್ರೀಡಾಪಟುವೊಬ್ಬರು (Boxing player) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಡುಪಿ ಜಿಲ್ಲೆಯ (Udupi News) ಮಲ್ಪೆ ಸಮೀಪದ ಶಾಂತಿನಗರದ ನಿವಾಸಿ ವಿರಾಜ್ ಮೆಂಡನ್ (29) ಆತ್ಮಹತ್ಯೆ ಮಾಡಿಕೊಂಡ ಯುವಕ. ಅವರು ತಮ್ಮ ಮನೆಯ ಕೊಠಡಿಯಲ್ಲೇ ನೇಣು ಬಿಗಿದು ಪ್ರಾಣ ಕಳೆದುಕೊಂಡಿದ್ದಾರೆ.
ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ವಿರಾಜ್ ಅವರು ಈ ಹಿಂದೆ ಬಾಕ್ಸಿಂಗ್ ಕ್ಷೇತ್ರದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿ ಹೆಸರು ಮಾಡಿದ್ದರು. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಬಡ್ಡಿ ಆಟಗಾರ ಆತ್ಮಹತ್ಯೆ ಮಾಡಿಕೊಂಡಿದ್ದರು
ಕೆಲವು ದಿನಗಳ ಹಿಂದಷ್ಟೇ ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುದುವೆಟ್ಟಿನಲ್ಲಿ, ಪುದುವೆಟ್ಟು ನಿವಾಸಿ ಸ್ವರಾಜ್(24) ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರು ಖ್ಯಾತ ಕಬಡ್ಡಿ ಆಟಗಾರರು. ಕಬಡ್ಡಿಯಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿ ಗಮನ ಸೆಳೆದಿದ್ದರು. ಸ್ಥಳೀಯ ಕೂಟಗಳಲ್ಲಿ ಸಾಕಷ್ಟು ಆಕರ್ಷಣೆ ಹೊಂದಿದ್ದರು. ಉಜಿರೆಯ ಸಾನಿಧ್ಯ ಖಾಸಗಿ ಕಂಪೆನಿಯ ಉದ್ಯೋಗಿಯಾಗಿದ್ದ ಸ್ವರಾಜ್ ಅವರು ಸ್ನಾನದ ಕೊಠಡಿಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಇವರು ಲೋನ್ ನೀಡುವ ಆಪ್‌ಗಳಿಂದ ಲೋನ್ ಪಡೆದು ಅವರ ಚಿತ್ರಹಿಂಸೆಗೆ ಗುರಿಯಾಗಿದ್ದರು ಎಂದು ಹೇಳಲಾಗಿತ್ತು.
ಇದನ್ನೂ ಓದಿ: Murder Case : ಮರುಮದುವೆ ಆಸೆಗೆ 14 ತಿಂಗಳ ಮಗುವನ್ನೇ ಬಲಿ ಕೊಟ್ಟ; ಕಲ್ಲಿನಡಿ ಮೂರು ದಿನ ಮುಚ್ಚಿಟ್ಟ ಪಾಪಿ ತಂದೆ!
ಪ್ರೀತಿಸಿದ ಹುಡುಗಿ ಕೈಕೊಟ್ಟ ನೋವಿನಿಂದ ಕಾನ್‌ಸ್ಟೇಬಲ್ ಆತ್ಮಹತ್ಯೆ
ಬೀದರ್: ಪ್ರೇಮ ವೈಫಲ್ಯದಿಂದ (love failure) ನೊಂದ ಪೊಲೀಸ್ ಕಾನ್‌ಸ್ಟೇಬಲ್ (Police Constable) ಒಬ್ಬರು ಆತ್ಮಹತ್ಯೆಗೆ (Suicide case) ಶರಣಾಗಿದ್ದಾರೆ. ಬೀದರ್ ಜಿಲ್ಲೆಯ ಬಸವ ಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ (Basava Kalyana Police station) ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಕಾನ್‌ಸ್ಟೇಬಲ್ ಉಮೇಶ್ ನಾಯ್ಕ್ ಅವರೇ ಆತ್ಮಹತ್ಯೆ ಮಾಡಿಕೊಂಡವರು.
25 ವರ್ಷದ ಉಮೇಶ್ ನಾಯಕ್ ಅವರು ಬಸವಕಲ್ಯಾಣ ನಗರದ ಟೂರಿಸ್ಟ್ ಲಾಡ್ಜ್ ನಲ್ಲಿ ರೂಂ ಮಾಡಿಕೊಂಡು ಅಲ್ಲೇ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ.
ಉಮೇಶ್ ನಾಯಕ್ ಅವರು ಮೂಲತಃ ವಿಜಯನಗರ ಜಿಲ್ಲೆಯವರು. 2021ರಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಆಗಿ ಆಯ್ಕೆಯಾಗಿ ಬೀದರ್‌ನಲ್ಲಿ ನೇಮಕಾತಿ ಪಡೆದಿದ್ದರು. ಹಲವು ತಿಂಗಳಿನಿಂದ ಬಸವಕಲ್ಯಾಣ ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಸುತ್ತಿರುವ ಉಮೇಶ್ ನಾಯಕ್ ಅವರು ಪ್ರೇಮ ವೈಫಲ್ಯದಿಂದ ನೊಂದು ಪ್ರಾಣ ಕಳೆದುಕೊಂಡಿದ್ದಾರೆ ಎನ್ನುವುದು ಪ್ರಾಥಮಿಕ ಮಾಹಿತಿ.
ಉಮೇಶ್ ನಾಯಕ್ ಅವರು ಒಬ್ಬ ಹುಡುಗಿಯನ್ನು ಪ್ರೀತಿಸುತ್ತಿದ್ದು, ಆಕೆ ಈಗ ನಿರಾಕರಣೆ ಮಾಡಿದ್ದರಿಂದ ಅವರು ನೊಂದಿದ್ದರು ಎಂದು ಹೇಳಲಾಗಿದೆ.