ಬೆಂಗಳೂರು: ಕುಂದಾಪುರದಲ್ಲಿ (Kundapura Kannada) ಎಷ್ಟು ಸೊಬಗಿದೆಯೋ ಅಷ್ಟೇ ಸೊಬಗಿನ ಸೊಗಡು ಆ ಭಾಷೆಯಲ್ಲೂ ಇದೆ. ಕುಂದಾಪುರ, ಬ್ರಹ್ಮಾವರ, ಬೈಂದೂರು, ಹೆಬ್ರಿ ತಾಲೂಕಿನಲ್ಲಿ ಬಳಸಲಾಗುವ ವಿಶಿಷ್ಟ ಶೈಲಿಯ ಕನ್ನಡವೇ ಕುಂದಾಪುರ ಕನ್ನಡ. ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಜುಲೈ 16ರಂದು ʻವಿಶ್ವ ಕುಂದಾಪುರ ಕನ್ನಡ ಹಬ್ಬದ ಸಂಭ್ರಮ ಮನೆಮಾಡಿತ್ತು. ಟೀಮ್ ಕುಂದಾಪುರಿಯನ್ಸ್ ವತಿಯಿಂದ ʻಮಾತಿನ್ ಹಬ್ಬʼ ಕಾರ್ಯಕ್ರಮ ನಡೆದಿದ್ದು, ಕುಂದಾಪುರಿಗರು ಎದುರಿಸುತ್ತಿರುವ ಸಮಸ್ಯೆ ಹಾಗೂ ಕನಸಿನ ಕುಂದಾಪುರದ ಬಗ್ಗೆ ಹಲವು ನಿರ್ಣಯ ಕೈಗೊಳ್ಳಲಾಯಿತು. ಮಾತಿನ ಹಬ್ಬ ಕಾರ್ಯಕ್ರಮದಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಭಾಗಿಯಾಗಿದ್ದು ವಿಶೇಷ.
ಈ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ವಾಸಿಸುವ ಕುಂದಾಪುರ ಭಾಗದವರು ರಚಿಸಿಕೊಂಡಿರುವ ಟೀಮ್ ಕುಂದಾಪುರಿಯನ್ಸ್ ತಂಡದ ಮೂಲಕ ಆಯೋಜಿಸಲಾಗಿತ್ತು. ಬದುಕು ಕಟ್ಟಕೊಳ್ಳುವ ಸಲುವಾಗಿ ಊರು ಬಿಟ್ಟು ಬೆಂಗಳೂರಿನಲ್ಲಿ ನೆಲೆಯಾದ ಕುಂದಾಪುರ ಭಾಗದವರೇ ಸೇರಿ ಕಟ್ಟಿದ ತಂಡವೇ ಟೀಂ ಕುಂದಾಪುರಿಯನ್ಸ್. ಈಗಾಗಲೇ ಹತ್ತು-ಹಲವು ಸಾಮಾಜಿಕ ಕಾರ್ಯಗಳ ಮೂಲಕ ಮಹಾನಗರಿಯಲ್ಲಿ ಮನೆಮಾತಾದ ತಂಡ, ಇಂದು(ಜು.16) ಕುಂದಾಪುರದ ಹಬ್ಬದ ಮೂಲಕ ತಮ್ಮ ಭಾಷಾ ಪ್ರೇಮ ಮತ್ತು ಬದ್ಧತೆಯನ್ನು ಮೆರೆದಿದೆ.
ಇದನ್ನೂ ಓದಿ: ಜುಲೈ 28ರಂದು ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ: ಭಾಷಿ ಅಲ್ಲ ಬದ್ಕ್!
ಕುಂದಾಪುರದ ಗ್ರಾಮೀಣ ಸೊಗಡಿನ ಅಟ
ಮಾತಿನ ಹಬ್ಬ ಕಾರ್ಯಕ್ರಮದಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕುಂದಾಪುರ ಕನ್ನಡ ಪ್ರತಿಷ್ಠಾನದ ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ದೀಪಕ್ ಶೆಟ್ಟಿ ಬಾರ್ಕೂರು, ನಟ ಕವೀಶ್ ಶೆಟ್ಟಿ, ಸಮಾಜಸೇವಕ ಗೋವಿಂದ್ ಪೂಜಾರಿ, ಅಜಿತ್ ಶೆಟ್ಟಿ ಉಳ್ತೂರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಇದೇ ವೇಳೆ ಕುಂದಾಪುರಿಗರಿಗೆ ಮುಂದೆ ಆಗಬೇಕಾದ ಕಾರ್ಯಗಳ ಬಗ್ಗೆ ಚರ್ಚೆ ಮಾಡಿ ನಿರ್ಣಯ ಕೈಗೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಕುಂದಾಪುರ ಕ್ವಿಜ್, ಕಠಿಣ ಪದಗಳ ಅರ್ಥ ಹೇಳುವ ಸ್ಪರ್ಧೆ ನಡೆಯಿತು. ಹಾಗೇ ಕಾರ್ಯಕ್ರಮದಲ್ಲಿ ಕುಂದಾಪುರದ ಗ್ರಾಮೀಣ ಆಟಗಳನ್ನು ಆಡಿಸಿ ಬಾಲ್ಯವನ್ನು ಮೆಲಕು ಹಾಕಲಾಯಿತು. ಈ ಸಂದರ್ಭದಲ್ಲಿ ಕುಂದಾಪುರ ಗ್ರಾಮೀಣ ಭಾಗದ ಲಗೋರಿ ಆಟವನ್ನು ಆಡಿಸಿದ್ದು ನೆರೆದಿದ್ದ ಕುಂದಾಪುರಿಗರಿಗೆ ತಮ್ಮ ಹುಟ್ಟೂರನ್ನ ನೆನಪಿಸಿತು.
ಹಾಗೆ ಇನ್ನು ಹಲವು ಆಟೋಟ ಸ್ಪರ್ಧೆಗಳು ಬಂದವರ ಗಮನ ಸೆಳೆಯಿತು. ಕುಂದಾಪುರ ಶೈಲಿಯ ಗಂಜಿ-ಉಪ್ಪಿನೋಡಿ ಬಂದರನ್ನ ಆಕರ್ಷಿಸಿತು.
ಇದನ್ನೂ ಓದಿ: ಅದ್ಧೂರಿಯಾಗಿ ನಡೆಯಿತು ವಿಶ್ವಕುಂದಾಪ್ರ ಕನ್ನಡ ದಿನಾಚರಣೆ
ಟೀಮ್ ಕುಂದಾಪುರಿಯನ್ಸ್ ಕೆಲಸಕ್ಕೆ ಶಾಸಕ ಗುರುರಾಜ್ ಗಂಟಿಹೊಳೆ ಶ್ಲಾಘನೆ
ʻʻಕುಂದಾಪುರವು ಒಂದು ಕಡೆ ಸಮುದ್ರ, ಪಶ್ಚಿಮ ಘಟ್ಟ ಸಮೃದ್ದ ಸಂಸ್ಕ್ರತಿ ಹೊಂದಿದ ವೈಶಿಷ್ಟ್ಯ ಪ್ರದೇಶ. ದೇಶದ ನಾನಾ ಭಾಗಗಳಲ್ಲಿ ಬದುಕು ಕಟ್ಟಿಕೊಂಡರೂ ನಮ್ಮವರು ಭಾಷೆಯನ್ನು ಪ್ರೀತಿಸುವುದನ್ನು ನೋಡುವುದೇ ಚೆಂದ. ಹೀಗೆ ಬೆಂಗಳೂರಿನಲ್ಲಿ ನಮ್ಮ ಟೀಮ್ ಕುಂದಾಪುರಿಯನ್ಸ್ ಮಾತಿನ ಹಬ್ಬ ಕಾರ್ಯಕ್ರಮದ ಮೂಲಕ ವಿಶ್ವ ಕುಂದಾಪುರ ಕನ್ನಡ ಹಬ್ಬ ಆಚರಣೆ ಮಾಡುತ್ತಿರುವುದು ಶ್ಲಾಘನೀಯ” ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದ್ದಾರೆ.
ಜುಲೈ 23ಕ್ಕೆ ಅದ್ಧೂರಿ ಕುಂದಾಪುರ ಹಬ್ಬ ಕಾರ್ಯಕ್ರಮ
ಇದೇ ಜುಲೈ ತಿಂಗಳ 23ಕ್ಕೆ ಬೆಂಗಳೂರಿನ ಬಂಟರ ಸಂಘದಲ್ಲಿ ಕುಂದಾಪುರ ಕನ್ನಡ ಪ್ರತಿಷ್ಠಾನ ವತಿಯಿಂದ ಅದ್ಧೂರಿಯಾಗಿ ವಿಶ್ವ ಕುಂದಾಪುರ ಕನ್ನಡ ಹಬ್ಬ ಆಯೋಜಿಸಲಾಗಿದೆ.