ಬೆಂಗಳೂರು: ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ (Sangolli rayanna railway station) ಶನಿವಾರ ಮುಂಜಾನೆ ಸಂಭವಿಸಿದ ಉದ್ಯಾನ್ ಎಕ್ಸ್‌ಪ್ರೆಸ್ (udyan express) ರೈಲಿನ ಎಸಿ ಕೋಚ್‌ಗಳ ಅಗ್ನಿ ಆಕಸ್ಮಿಕದ (Train Fire Accident) ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಶಾರ್ಟ್ ಸರ್ಕ್ಯುಟ್ ಕಾರಣ ಇರಬಹುದು ಎಂದು ಸದ್ಯ ರೈಲ್ವೇ ಪೊಲೀಸರು (Railway police) ಅನುಮಾನಿಸಿದ್ದಾರೆ.
ಮೆಜೆಸ್ಟಿಕ್‌ನ ಕೆಎಸ್‌ಆರ್ ರೈಲ್ವೆ ನಿಲ್ದಾಣದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಸತತ ಮೂರು ಗಂಟೆಗಳ ಕಾರ್ಯಾಚರಣೆ ಬಳಿಕ ಸಂಪೂರ್ಣವಾಗಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಸದ್ಯ ಅಗ್ನಿ ಅವಘಡಕ್ಕೆ ತುತ್ತಾಗಿ ಕರಕಲಾಗಿರುವ ಬೋಗಿಗಳನ್ನು ಪ್ಲಾಟ್‌ಫಾರಂನಿಂದ ತೆರವು ಮಾಡುವ ಕಾರ್ಯ ನಡೆಯುತ್ತಿದೆ. ರೈಲ್ವೆ ಸಿಬ್ಬಂದಿಯಿಂದ ಪ್ಲಾಟ್‌ಫಾರಂ ಸ್ವಚ್ಚತೆ ನಡೆಯುತ್ತಿದೆ.
ರೈಲ್ವೇ ಪೊಲೀಸ್ ಇಲಾಖೆ ಎಸ್‌ಪಿ ಸೌಮ್ಯಲತಾ ಅವರು ಈ ಕುರಿತು ಹೇಳಿಕೆ ನೀಡಿದ್ದಾರೆ. ಬೆಳಗ್ಗೆ 7 ಗಂಟೆಗೆ ಟ್ರೈನ್ ಬಂದು ನಿಂತ ಮೇಲೆ ಬೆಂಕಿ ಕಾಣಿಸಿಕೊಂಡಿದೆ. 7 ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಂಡಿರುವ ಮಾಹಿತಿ ಬಂದಿದೆ. ರೈಲು ಫ್ಲಾಟ್‌ಫಾರ್ಮ್‌ಗೆ 6 ಗಂಟೆಯಷ್ಟರಲ್ಲಿ ಬಂದಿದೆ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ಇಳಿದು ಹೊರಟುಹೋಗಿದ್ದಾರೆ. ಹೀಗಾಗಿ ಯಾರಿಗೂ ಏನೂ ಅಪಾಯವಾಗಿಲ್ಲ ಎಂದು ತಿಳಿಸಿದ್ದಾರೆ.
ಎಫ್ಐಆರ್ ದಾಖಲಿಸಿಕೊಂಡು ತನಿಖೆ ಮಾಡುತ್ತೇವೆ. ಸದ್ಯ ತನಿಖೆ ನಡೆಸುತ್ತಿರುವುದರಿಂದ ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಅಂತಾ ಹೇಳಲಾಗದು. ಸದ್ಯಕ್ಕೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎಂಬ ಶಂಕೆ ಇದೆ. ತನಿಖೆ ನಂತರವೇ ಬೆಂಕಿಗೆ ಕಾರಣ ಏನು ಅಂತ ಗೊತ್ತಾಗಲಿದೆ. ಸದ್ಯ ಉದ್ಯಾನ್ ಎಕ್ಸ್‌ಪ್ರೆಸ್ ಟ್ರೈನ್‌ಗೆ ಏನೂ ಸಮಸ್ಯೆಯಿಲ್ಲ. ಎಫ್ಎಸ್ಎಲ್ ಹಾಗೂ ಸೋಕೋ ಟೀಂ ನೀಡುವ ವರದಿ ಮೇಲೆ ತನಿಖೆ ಮುಂದುವರಿಯಲಿದೆ ಎಂದು ಎಸ್‌ಪಿ ಸೌಮ್ಯಲತಾ ತಿಳಿಸಿದ್ದಾರೆ.
ನಿನ್ನೆ ರಾತ್ರಿ 8:10ಕ್ಕೆ ಮುಂಬೈ ಬಿಟ್ಟಿದ್ದ ಉದ್ಯಾನ್ ಎಕ್ಸ್‌ಪ್ರೆಸ್ ಬೆಳಗ್ಗೆ 6 ಗಂಟೆ ಸುಮಾರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣಕ್ಕೆ ಬಂದಿತ್ತು. ಎಸಿ ಕೋಚ್‌ಗಳಾದ B1-B2 ಬೋಗಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತ್ತು. 6ನೇ ಬೋಗಿಯಲ್ಲಿ ಮೊದಲು ಬೆಂಕಿ ಹೊತ್ತಿಕೊಂಡಿದ್ದು, ಐದನೇ ಬೋಗಿ B2ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಎಂಜಿನ್‌ನಿಂದ ಐದನೇ ಬೋಗಿ B2 ಆಗಿದೆ.
ಇದನ್ನೂ ಓದಿ: Train Fire Accident: ಮೆಜೆಸ್ಟಿಕ್ ನಿಲ್ದಾಣದಲ್ಲಿ ನಿಂತಿದ್ದ ರೈಲಿನ ಸ್ಲೀಪರ್ ಕೋಚ್‌ನಲ್ಲಿ ಬೆಂಕಿ, ತಪ್ಪಿದ ಭಾರಿ ಅನಾಹುತ