Site icon Vistara News

Ugadi 2023: ಯುಗಾದಿಗೆ ಇಲಾಳ ಮೇಳದ ಫಲ ಭವಿಷ್ಯ; ಪಂಚಭೂತಗಳಿಗೂ ವಿಕೋಪ, ಗಾಳಿ ಗಂಡಾಂತರ

#image_title

ಬಾಗಲಕೋಟೆ/ಧಾರವಾಡ: ಯುಗಾದಿ ಹಬ್ಬದಂದು (Ugadi 2023) ವಿವಿಧ ಜಿಲ್ಲೆಗಳಲ್ಲಿ ವಿಭಿನ್ನ ರೀತಿಯ ಆಚರಣೆಗಳು ನಡೆಯುತ್ತವೆ. ಬಾಗಲಕೋಟೆಯಲ್ಲಿ ಇಲಾಳ ಮೇಳದ ಫಲ ಭವಿಷ್ಯ ನುಡಿದರೆ, ಧಾರವಾಡದ ಗೊಂಬೆ ಭವಿಷ್ಯದ ಆಚರಣೆ ನಡೆಯುತ್ತದೆ. ಇಲ್ಲಿ ನುಡಿಯಲಾಗುವ ಭವಿಷ್ಯದ ಬಗ್ಗೆ ಜನರಿಗೆ ವಿಶೇಷ ಆಸಕ್ತಿಯೂ ಇರುತ್ತದೆ. ಅದರಂತೆ ತಮ್ಮ ವರ್ಷವಿಡೀ ಭವಿಷ್ಯವನ್ನು ಲೆಕ್ಕಾಚಾರ ಹಾಕಿಕೊಳ್ಳಲಾಗುತ್ತದೆ.

ತಲೆ ತಲಾಂತರದಿಂದ ನಡೆದು ಬಂದ ಬಾಗಲಕೋಟೆಯ ಗುಳೇದಗುಡ್ಡ ಪಟ್ಟಣದ ಇಲಾಳ ಮೇಳದ ಫಲ ಭವಿಷ್ಯವು ಹೊರಬಿದ್ದಿದೆ. ಗುಳೇದಗುಡ್ಡದ ಮಾರವಾಡಿ ಬಗಿಚ್‌ದಲ್ಲಿ ಯುಗಾದಿ ಪಾಡ್ಯದಂದು ನಡೆಯುವ ಫಲ ಭವಿಷ್ಯದಲ್ಲಿ ಈ ವರ್ಷ 16 ಮಳೆಗಳಲ್ಲಿ 11 ಮಳೆಗಳು ಪೂರ್ಣ ಪ್ರಮಾಣದಲ್ಲಿ ಸುರಿಯಲಿವೆ ಎಂದು ಮಲ್ಲೇಶ್ ಗುಬ್ಬಿ ಅವರು ಫಲ ಭವಿಷ್ಯ ನುಡಿದಿದ್ದಾರೆ.

ಭೂ ಕುಸಿತ, ಚಂಡಮಾರುತ, ಅಗ್ನಿ ಅವಘಡ

ಪಂಚಭೂತಗಳು ವಿಕೋಪಕ್ಕೆ ಹೋಗಲಿದ್ದು, ಅಲ್ಲಲ್ಲಿ ಭೂಮಿ ಕುಸಿಯಲಿದೆ. ಗುಡುಗು, ಮಿಂಚು, ಸಿಡಿಲಿನ ಆರ್ಭಟದಿಂದ ಎರಡ್ಮೂರು ರಾಜ್ಯಗಳಲ್ಲಿ ಸಾವು- ನೋವು ಉಂಟಾಗಲಿದೆ. ಅರಣ್ಯ, ಗುಡ್ಡ, ವಿವಿಧ ಕಟ್ಟಡಗಳಲ್ಲಿ ಅಗ್ನಿ ಅವಘಡ, ರಸ್ತೆ ಹಾಗೂ ವಿಮಾನ ಅಪಘಾತ ಸಂಭವಿಸಲಿದೆ. ಮೂರ್ನಾಲ್ಕು ರಾಜ್ಯಗಳಲ್ಲಿ ಚಂಡಮಾರುತ ಗಾಳಿ ಬೀಸಿ ತೊಂದರೆ ಆಗುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದಿದ್ದಾರೆ. ಅಗ್ನಿಯಲ್ಲಿ ಕೆಲಸ ಮಾಡುವವರು ಎಚ್ಚರಿಕೆಯಿಂದ ಇರಬೇಕು ಎಂದು ಭವಿಷ್ಯವಾಣಿ ಹೇಳಿದೆ.

ಹಸಿರು ಬಣ್ಣ ರಾರಾಜಿಸುತ್ತದೆ

ಇಲಾಳ ಮೇಳದ ಫಲ ಭವಿಷ್ಯದಲ್ಲಿ ಹಸಿರು ಬಣ್ಣದ ವಸ್ತುಗಳು ರಾರಾಜಿಸುತ್ತವೆ ಎಂದು ಹೇಳಿದ್ದು, ಹಲವರು ಜೆಡಿಎಸ್‌ ಪಕ್ಷ ಈ ಬಾರಿ ಅಧಿಕಾರಕ್ಕೆ ಬರುವ ಕುರಿತು ಮಾತನಾಡಿದ್ದಾರೆ. ವ್ಯಾಪಾರ ವಹಿವಾಟು ಯಶಸ್ಸನ್ನು ಕಾಣಲಿದೆ ಎಂದಿದ್ದಾರೆ.

ಕಾಯಿಲೆಗಳ ಅಬ್ಬರ

ಈ ವರ್ಷ ಕಾಯಿಲೆಗಳು ಹೆಚ್ಚಾಗಲಿವೆ. ಮನೆಯಲ್ಲಿ ಒಬ್ಬರಿಗೆ ಕಾಯಿಲೆ ಬಂದರೆ ಮನೆಮಂದಿಗೆಲ್ಲ ಹರಡಲಿದೆ. ಕಾಯಿಲೆ ಬಂದವರು ಇನ್ನೊಬ್ಬರನ್ನು ಮುಟ್ಟಿದರೂ ಹರಡಲಿದೆ. ನೆಗಡಿ, ಕೆಮ್ಮು, ಜ್ವರದಿಂದ ಜನರು ಬಳಲುವುದು ಹೆಚ್ಚಾಗಲಿದೆ. ಈ ವರ್ಷದ ಅಕ್ಟೋಬರ್, ನವೆಂಬರ್, ಡಿಸೆಂಬರ್‌ನಲ್ಲಿ ರೋಗಗಳು ಉಲ್ಬಣಗೊಳ್ಳಲಿದೆ ಎಂದು ಇಲಾಳ ಭವಿಷ್ಯ ಇದೆ.

ನಾಯಕತ್ವ ಬದಲಾವಣೆ! ಭವಿಷ್ಯ ನುಡಿದ ಧಾರವಾಡದ ಗೊಂಬೆ ಭವಿಷ್ಯ

ಧಾರವಾಡ: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಆಗಲಿದೆಯಾ? ಚುನಾವಣೆ (Karnataka Elections) ವೇಳೆಯಲ್ಲಿಯೇ ನಾಯಕತ್ವ ಬದಲಾವಣೆ ಭವಿಷ್ಯ ನುಡಿದಿದೆ ಧಾರವಾಡದ ಗೊಂಬೆ!

ಹೌದು, ಧಾರವಾಡದ ಉಪ್ಪಿನ ಬೆಟಗೇರಿ ವ್ಯಾಪ್ತಿಯ ಹನುಮನಕೊಪ್ಪದ ಗೊಂಬೆ ಭವಿಷ್ಯ ನಾಯಕತ್ವ ಬದಲಾವಣೆಯ ಮುನ್ಸೂಚನೆ ನೀಡಿದೆ. ಈ ಗ್ರಾಮದಲ್ಲಿ ಪ್ರತಿ ವರ್ಷವೂ ಯುಗಾದಿ ದಿನ ಭವಿಷ್ಯ ನುಡಿಯಲಾಗುತ್ತದೆ. ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಇಲ್ಲಿನ ಭವಿಷ್ಯ ನಿಜವಾಗುತ್ತದೆ ಎಂದೇ ಹೇಳಲಾಗಿದೆ. ಹೀಗಾಗಿ ಈ ವರ್ಷದ ಭವಿಷ್ಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಏನಿದು ಗೊಂಬೆ ಭವಿಷ್ಯ?

ಯುಗಾದಿಯ ಹಿಂದಿನ ದಿನವಾದ ಅಮವಾಸ್ಯೆಯಂದು ರಾತ್ರಿ ಗೊಂಬೆಗಳ ಪ್ರತಿಷ್ಠಾಪನೆ ನಡೆಯುತ್ತದೆ. ನಾಲ್ಕು ದಿಕ್ಕುಗಳಿಗೂ ನಾಲ್ಕು ಗೊಂಬೆಗಳನ್ನು ಗ್ರಾಮಸ್ಥರು ಪ್ರತಿಷ್ಠಾಪನೆ ಮಾಡುತ್ತಾರೆ. ಗ್ರಾಮದ ಹಳ್ಳದ ದಂಡೆಯಲ್ಲಿ ಈ ಪ್ರತಿಷ್ಠಾಪನೆ ನಡೆಯುತ್ತಿತ್ತು. ಪಾಡ್ಯದ ದಿನ ನಸುಕಿನ ಜಾವ ಈ ಸ್ಥಳಕ್ಕೆ ಬಂದು ಹಿರಿಯರು ಗೊಂಬೆಗಳನ್ನು ಅವಲೋಕಿಸುತ್ತಾರೆ. ಆಯಾ ದಿಕ್ಕಿನ ಗೊಂಬೆಯ ಪರಿಸ್ಥಿತಿ ಆಧರಿಸಿ ರಾಜಕೀಯ ಭವಿಷ್ಯವನ್ನು ನುಡಿಯಲಾಗುತ್ತದೆ.

ಗೊಂಬೆಯ ಅಂಗಾಂಗಗಳಿಗೆ ಧಕ್ಕೆಯಾದರೆ ನಾಯಕತ್ವ ಹೋಗುತ್ತದೆ ಎಂಬುದು ಸಾಮಾನ್ಯ ಭವಿಷ್ಯ. ಈ ಬಾರಿ ಕರ್ನಾಟಕದ ದಿಕ್ಕಿನ ಗೊಂಬೆ ಕಾಲಿಗೆ ಧಕ್ಕೆಯಾಗಿದ್ದು, ಹೀಗಾಗಿ ನಾಯಕತ್ವ ಬದಲಾವಣೆಯಾಗುತ್ತದೆ ಎಂಬ ಭವಿಷ್ಯ ನುಡಿಯಲಾಗಿದೆ.

ಹಿಂದಿನ ಭವಿಷ್ಯಗಳೂ ನಿಜವಾಗಿದ್ದವು!

ಎರಡು ವರ್ಷದ ಹಿಂದೆಯೂ ಕರ್ನಾಟಕದ ದಿಕ್ಕಿನ ಗೊಂಬೆಗೆ ಧಕ್ಕೆ ಆಗಿತ್ತು. ಆಗ ಬಿ.ಎಸ್‌. ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆಯಾಯಿತು. ಅಂದರೆ ಮೊದಲೇ ಗೊಂಬೆ ಭವಿಷ್ಯ ನುಡಿದಂತಾಗಿದೆ. ಅದೇ ರೀತಿ ಇಂದಿರಾ ಗಾಂಧಿ ನಿಧನದ ವರ್ಷವೂ ಭವಿಷ್ಯ ನಿಜವಾಗಿತ್ತು. ಆಗ ರಾಷ್ಟ್ರ ನಾಯಕರ ಗೊಂಬೆ ಸಂಪೂರ್ಣವಾಗಿ ಉರುಳಿ ಬಿದ್ದಿತ್ತು. ಅದೇ ವರ್ಷ ಇಂದಿರಾ ಗಾಂಧಿ ಹತ್ಯೆಯಾಗಿತ್ತು.

ಇದನ್ನೂ ಓದಿ: Weekend With Ramesh: ಸಾಧಕರ ಸೀಟ್‌ನಲ್ಲಿ ನಮ್ಮ ಸ್ಯಾಂಡಲ್‌ವುಡ್‌ ಕ್ವೀನ್‌ ಅಂದ್ರು ಫ್ಯಾನ್ಸ್‌!

ಈ ಬಾರಿಯೂ ನಾಲ್ಕು ತಿಂಗಳ‌ ಮೊದಲೇ ನಾಯಕತ್ವ ಬದಲಾವಣೆ ಭವಿಷ್ಯ ನುಡಿಯಲಾಗಿದೆ. ಇದು ಸರಿಯಾಗುತ್ತದೆಯೇ ಎನ್ನುವುದಕ್ಕೆ ಭವಿಷ್ಯವೇ ಉತ್ತರ ಕೊಡಬೇಕಾಗಿದೆ.

ರಾಜ್ಯದ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version