Site icon Vistara News

ಉಳ್ಳಾಲ ನಗರಸಭೆ ಬಜೆಟ್ : ಕಿವಿಗೆ ಹೂವಿಟ್ಟುಕೊಂಡು ಆಡಳಿತಾರೂಢ ಕಾಂಗ್ರೆಸನ್ನು ಅಣಕಿಸಿದ ಜೆಡಿಎಸ್ ಸದಸ್ಯರು; ನೂಕಾಟ, ತಳ್ಳಾಟ

#image_title

ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ನಗರಸಭೆಯಲ್ಲಿ 2023-24ನೇ ಸಾಲಿನ ಬಜೆಟ್ ಮಂಗಳವಾರ ಮಂಡನೆಯಾಯಿತು. ಈ ವೇಳೆ ಬಜೆಟ್‌ ಅನ್ನು ವಿರೋಧಿಸಿ ಜೆಡಿಎಸ್ ಕೌನ್ಸಿಲರ್‌ಗಳು ಕಿವಿಗೆ ಹೂವಿಟ್ಟುಕೊಂಡು ಆಡಳಿತರೂಢ ಕಾಂಗ್ರೆಸ್‌ ಪಕ್ಷವನ್ನು ಅಣಕಿಸಿದ್ದರಿಂದ ಎರಡು ಪಕ್ಷಗಳ ಸದಸ್ಯರ ನಡುವೆ ತಳ್ಳಾಟ, ನೂಕಾಟ ನಡೆಯಿತು.

ರಾಜ್ಯ ಬಜೆಟ್ ಮಂಡನೆ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್‌ ಪ್ರಮುಖ ನಾಯಕರು ಸದನದಲ್ಲಿ ಕಿವಿಗೆ ಹೂ ಇಟ್ಟುಕೊಂಡು ಬಿಜೆಪಿ ಸರ್ಕಾರವನ್ನು ಅಣಕಿಸಿ ಗಮನ ಸೆಳೆದಿದ್ದರು. ಕಾಂಗ್ರೆಸ್‌ ಅಸ್ತ್ರವನ್ನೇ ಇದೀಗ ಜೆಡಿಎಸ್‌ನ ಉಳ್ಳಾಲ ನಗರಸಭೆ ಸದಸ್ಯರು ಬಳಸಿ ಆಡಳಿತಾರೂಢ ಪಕ್ಷದ ಕೈ ನಾಯಕರನ್ನು ಅಣಕಿಸಿದರು.

ಉಳ್ಳಾಲ ನಗರಸಭೆ ಆಡಳಿತ ಸೌಧದಲ್ಲಿ ಬಜೆಟ್ ಮಂಡನೆ ವೇಳೆ ಜೆಡಿಎಸ್‌ನ ಸದಸ್ಯರಾದ ದಿನಕರ ಉಳ್ಳಾಲ್, ಅಬ್ದುಲ್ ಬಶೀರ್, ಖಲೀಲ್, ಜಬ್ಬಾರ್, ಮುಶ್ತಾಕ್ ಪಟ್ಲ ಅವರು ಕಿವಿಗೆ ಹೂವಿಟ್ಟುಕೊಂಡು ಬಜೆಟ್‌ಗೆ ತೀವ್ರ ವಿರೋಧ ವ್ಯಕ್ತ ಪಡಿಸಿದರು.

ಇದನ್ನೂ ಓದಿ | J.P. Nadda: ಮೋದಿ ಸರ್ಕಾರ ಉಚಿತ ಘೋಷಣೆ ಮಾಡಲಿಲ್ಲ; ಅದಕ್ಕೇ ದೇಶ ಉತ್ತಮ ಸ್ಥಿತಿಯಲ್ಲಿದೆ: ಕಾಂಗ್ರೆಸ್‌ ಕುರಿತು ಜೆ.ಪಿ. ನಡ್ಡಾ ಟೀಕೆ

ಈ ವೇಳೆ ಬಿಜೆಪಿ ನಾಮ ನಿರ್ದೇಶಿತ ಸದಸ್ಯ ಬಾಬು ಬಂಗೇರ ಮಾತನಾಡಿ, ಕಾಂಗ್ರೆಸ್ ಬಜೆಟ್‌ಗೆ ಬೆಂಬಲ ಸೂಚಿಸಿದರೆ, ಜೆಡಿಎಸ್‌ನವರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ನಾವು ಬಜೆಟ್ ವಿಚಾರದಲ್ಲಿ ತಟಸ್ಥ ಎಂದಾಕ್ಷಣ ಸಭೆಯ ವೇದಿಕೆಯಲ್ಲಿದ್ದ ನಗರಸಭೆ ಉಪಾಧ್ಯಕ್ಷ ಆಯುಬ್ ಮಂಚಿಲ ಟೇಬಲ್‌ ಬಡಿದು ಬೆಂಬಲ ಸೂಚಿಸಿದರು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್ ಹಿರಿಯ ಸದಸ್ಯ ದಿನಕರ್ ಉಳ್ಳಾಲ್ ವಿರೋಧ ಪಕ್ಷ ಬಿಜೆಪಿ ಮತ್ತು ಆಡಳಿತ ಪಕ್ಷ ಕಾಂಗ್ರೆಸ್ ಹೊಂದಾಣಿಕೆಯ ರಾಜಕೀಯ ನಡೆಸುತ್ತಿದ್ದು, ನೀವಿಬ್ಬರು ಒಂದೇ ನಾಣ್ಯದ ಎರಡು ಮುಖಗಳೆಂದು ಆಕ್ಷೇಪಿಸಿದರು.

ನಂತರ ಸದನದಲ್ಲಿ ಆಡಳಿತ, ವಿರೋಧ ಪಕ್ಷಗಳ ನಡುವೆ ಗದ್ದಲ ಎದ್ದಿದ್ದರಿಂದ ಸಭಾಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷೆ ಚಿತ್ರಕಲಾ ಅವರು ಗಲಾಟೆಯ ಮಧ್ಯೆಯೇ ರಾಷ್ಟ್ರಗೀತೆ ಹಾಡುವುದರೊಂದಿಗೆ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದರು.

ಇದನ್ನೂ ಓದಿ | Karnataka Election: ದೇವೇಗೌಡರನ್ನು ಸಿಎಂ ಎಂದು ಹೇಳಿಕೊಂಡು ಎಲೆಕ್ಷನ್‌ಗೆ ಹೋಗಿ: ಜೆಡಿಎಸ್‌ನ ಶರವಣಗೆ ಮಾಧುಸ್ವಾಮಿ ಸವಾಲು

ಎಸ್‌ಡಿಪಿಐ ಸದಸ್ಯರಾದ ಅಝ್ಗರ್ ಆಲಿ ನಗರಸಭೆ ಪ್ರಬಂಧಕರಲ್ಲಿ ಅಜೆಂಡಾದಲ್ಲಿ ಸಭೆ ಸಂಪೂರ್ಣಗೊಂಡಿಲ್ಲವೆಂದು ದಾಖಲಿಸಲು ಸೂಚಿಸಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಕಾಂಗ್ರೆಸ್ ಸದಸ್ಯರಾದ ಭಾರತಿ ಮತ್ತು ವೀಣಾ ಶಾಂತಿ ಡಿ‌ಸೋಜ ಪ್ರಬಂಧಕರಲ್ಲಿ ಅಝ್ಗರ್ ವಿರುದ್ಧ ಪೊಲೀಸ್ ದೂರು ನೀಡುವಂತೆ ಹೇಳಿದರು. ಇದರಿಂದ ಕೆರಳಿದ ಅಝ್ಗರ್ ಕೈ ಸದಸ್ಯೆಯರ ವಿರುದ್ಧ ಗಲಾಟೆ ನಡೆಸಿದಾಗ, ಮಾತಿನ ಚಕಮಕಿ ನಡೆದು ಸದಸ್ಯರ ನಡುವೆ ತಳ್ಳಾಟ ನೂಕಾಟ ನಡೆಯಿತು.

Exit mobile version