Site icon Vistara News

Shivaji Statue: ಬಾಗಲಕೋಟೆಯಲ್ಲಿ ಅನಧಿಕೃತ ಶಿವಾಜಿ ಮೂರ್ತಿ ತೆರವು; ಹಿಂದುಪರ ಸಂಘಟನೆಗಳ ಆಕ್ರೋಶ

Shivaji statue

ಬಾಗಲಕೋಟೆ: ನಿಷೇಧಾಜ್ಞೆ ಜಾರಿಗೊಳಿಸಿ ನಗರದ ಸೋನಾರ್ ಬಡಾವಣೆಯಲ್ಲಿ ಅನಧಿಕೃತವಾಗಿ ಪ್ರತಿಷ್ಠಾಪನೆ ಮಾಡಿದ್ದ ಶಿವಾಜಿ ಮೂರ್ತಿಯನ್ನು (Shivaji Statue) ಬಿಗಿ ಪೊಲೀಸ್ ಭದ್ರತೆಯ ನಡುವೆ ಜಿಲ್ಲಾಡಳಿತ ಬುಧವಾರ ರಾತ್ರಿ ತೆರವುಗೊಳಿಸಿದೆ. ಮುಂಜಾಗ್ರತಾ ಕ್ರಮವಾಗಿ ಹಿಂದುಪರ ಸಂಘಟನೆ, ಬಿಜೆಪಿ ಮುಖಂಡರನ್ನು ಪೊಲೀಸರು ಬಂಧಿಸಿ ಶಿವಾಜಿ ಮೂರ್ತಿ ತೆರವು ಮಾಡಿದ್ದು, ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಜೆಸಿಬಿ ಮೂಲಕ ಶಿವಾಜಿಮೂರ್ತಿ ತೆರವು ಮಾಡಿದ ಪೊಲೀಸರು, ಟಾಟಾ ಏಸ್ ವಾಹನದಲ್ಲಿ ಪ್ರತಿಮೆಯನ್ನು ರವಾನೆ ಮಾಡಿ ನಗರಸಭೆ ಸಿಬ್ಬಂದಿ ಸುಪರ್ದಿಗೆ ನೀಡಿದ್ದಾರೆ. ಇನ್ನು ಪ್ರತಿಮೆ ತೆರವು ವಿರೋಧಿಸಿ ಗುರುವಾರ ಬೆಳಗ್ಗೆ 10 ಗಂಟೆಗೆ ಹಿಂದುಪರ ಸಂಘಟನೆಗಳು ಸಭೆ ಕರೆದಿದ್ದು, ಮುಂದಿನ ಹೋರಾಟ ಮತ್ತು ರೂಪುರೇಷೆ ಬಗ್ಗೆ ಚರ್ಚೆಯಾಗಲಿದೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ತಿಳಿಸಿದ್ದಾರೆ.

ಅಗಸ್ಟ್ 18ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ

ಅನಧಿಕೃತ ಶಿವಾಜಿ ಮೂರ್ತಿ ತೆರವು ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಹಳೇ ಬಾಗಲಕೋಟೆ, ನವನಗರ, ವಿದ್ಯಾಗಿರಿಯಲ್ಲಿ 144 ಸೆಕ್ಷನ್ ಜಾರಿ ಮಾಡಿ ಬಾಗಲಕೋಟೆ ಜಿಲ್ಲಾಧಿಕಾರಿ ಜಾನಕಿ.ಕೆ.ಎಮ್.ಆದೇಶ ಹೊರಡಿಸಿದ್ದಾರೆ. ಅಗಸ್ಟ್ 18ರ ಮಧ್ಯರಾತ್ರಿ 12 ಗಂಟೆವರೆಗೆ ನಿಷೇಧಾಜ್ಞೆ ಇರಲಿದೆ. ಪ್ರತಿಭಟನೆ, ಗುಂಪು ಸೇರಿದರೆ ಪೊಲೀಸರು ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ | Mandya Politics: ಮಾಟ-ಮಂತ್ರ ಮಾಡಿಸುವುದೇ ಚಲುವರಾಯಸ್ವಾಮಿ ಕೆಲಸ, ಭ್ರಷ್ಟಾಚಾರದಲ್ಲಿ ಫಸ್ಟ್‌: ಸುರೇಶ್‌ ಗೌಡ ಕಿಡಿ

ಹಿಂದುಪರ, ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಕಳೆದ ಎರಡು ದಿನಗಳ ಹಿಂದೆಯಷ್ಟೇ ಮೂರ್ತಿಯನ್ನು ಕೆಲವರು ಪ್ರತಿಷ್ಠಾಪನೆ ಮಾಡಿದ್ದರು. ಆದರೆ ಅನಧಿಕೃತವಾಗಿ ಪ್ರತಿಷ್ಠಾಪನೆ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಜಿಲ್ಲಾಡಳಿತ ಮೂರ್ತಿ ತೆರವಿಗೆ ಮುಂದಾದಾಗ ಹಿಂದುಪರ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಎಸ್ಪಿ ಜಯಪ್ರಕಾಶ್ ಆಗಮಿಸಿ, ಘಟನಾ ಸ್ಥಳದಿಂದ ತೆರಳುವಂತೆ ಪ್ರತಿಭಟನಾನಿರತರಿಗೆ ಸೂಚನೆ ನೀಡಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ನಂತರ ಮನವೊಲಿಕೆ ಜಗ್ಗದ ಬಿಜೆಪಿ ಹಾಗೂ ಹಿಂದು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಕರೆದೊಯ್ದರು. ನಂತರ ಶಿವಾಜಿ ಮೂರ್ತಿ ತೆರವುಗೊಳಿಸಲಾಗಿದೆ.

ಮಾಜಿ ಎಂಎಲ್‌ಸಿ ನಾರಾಯಣಸಾ ಭಾಂಡಗೆ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಾಜು ನಾಯ್ಕರ್, ಶಿವಾಜಿ ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷ, ಮಾರುತಿ ಶಿಂಧೆ, ಬಿಜೆಪಿ ವಿಭಾಗದ ಸಹ ಪ್ರಭಾರಿ, ಬಸವರಾಜ್ ಯಂಕಂಚಿ ಸೇರಿ ಹಲವರ ಬಂಧನವಾಗಿದೆ.

ಇದನ್ನೂ ಓದಿ | Karnataka Politics : ಇಲ್ಲ ಇಲ್ಲ ನಾವು ಬಿಜೆಪಿ ಬಿಡೋದಿಲ್ಲ; ನೀವು ಬಂದ್ರೂ ಫಸ್ಟ್‌ ಬೆಂಚ್‌ ಸಿಗೋದಿಲ್ಲ!

ಪ್ರತಿಭಟನಾಕಾರರನ್ನು ಬಂಧಿಸಿದ ಹಿನ್ನೆಲೆಯಲ್ಲಿ ಬಾಗಲಕೋಟೆ ನಗರ ಪೋಲಿಸ್ ಠಾಣೆ ಎದುರು ನೂರಾರು ಹಿಂದೂಪರ ಕಾರ್ಯಕರ್ತರು ಜಮಾಯಿಸಿ ಪ್ರತಿಭಟನೆ ನಡೆಸಿದರು. ಶಿವಾಜಿ ಪರ ಘೋಷಣೆಗಳನ್ನು ಕೂಗುತ್ತಾ ಪೊಲೀಸರು ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದರು.

Exit mobile version