Site icon Vistara News

BBMP anti encroachment drive : ಅನಧಿಕೃತ ಅಂಗಡಿ-ಮುಂಗಟ್ಟು ನೆಲಸಮ ಮಾಡಿದ ಬಿಬಿಎಂಪಿ

Demolition‌

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೆಲ ದಿನಗಳ ಕಾಲ ಸೈಲೆಂಟ್ ಆಗಿದ್ದ ಜೆಸಿಬಿ ಮತ್ತೆ ಗರ್ಜಿಸಲು ಶುರು ಮಾಡಿದೆ. ರಾಜಕಾಲುವೆ ಒತ್ತುವರಿ ಮಾಡಿಕೊಂಡವರಿಗೆ ಬಿಸಿ ಮುಟ್ಟಿಸಿದ್ದ ಪಾಲಿಕೆ (BBMP) ಅಧಿಕಾರಿಗಳು, ಇದೀಗ ಅನಧಿಕೃತ ಅಂಗಡಿ-ಮುಂಗಟ್ಟುಗಳನ್ನೂ (BBMP anti encroachment drive) ಗುರಿಯಾಗಿಸಿಕೊಂಡು ಕಾರ್ಯಾಚರಣೆಗಿಳಿದಿದ್ದಾರೆ.

ಹಿಂದೆ ಕೆ. ಆರ್‌. ಮಾರುಕಟ್ಟೆಯಲ್ಲಿ (Kr market) ಇದೇ ರೀತಿಯ ಕಾರ್ಯಾಚರಣೆ ನಡೆಸಲಾಗಿತ್ತು. ಈಗ ಇಲ್ಲಿಯೇ ಮತ್ತೆ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಜೆಸಿಬಿ ಸಹಾಯದಿಂದ ಅಂಗಡಿಗಳ ನೆಲಸಮ ಮಾಡಿದ ಪಾಲಿಕೆ

ಸೋಮವಾರ (ಮೇ 29) ಕಲಾಸಿಪಾಳ್ಯದ ತರಕಾರಿ ಮಾರ್ಕೆಟ್‌ನಲ್ಲಿ 9 ಅನಧಿಕೃತ ಅಂಗಡಿಗಳನ್ನು ನೆಲಸಮ ಮಾಡಲಾಗಿದೆ. ಕೆ.ಆರ್‌.ಮಾರ್ಕೆಟ್‌ ಸೇರಿದಂತೆ ಹಲವೆಡೆ ಅನಧಿಕೃತ ಕಟ್ಟಡ, ಅಂಗಡಿಗಳ ತೆರವಿಗೆ ಕೋರ್ಟ್‌ ಸೂಚಿಸಿತ್ತು. ಹೀಗಾಗಿ ಎಲ್ಲೆಲ್ಲಿ ಅನಧಿಕೃತ ಅಂಗಡಿ-ಮುಂಗಟ್ಟುಗಳಿವೆ ಅಲ್ಲಿ ತೆರವು ಕಾರ್ಯ ಮಾಡಲು ಪಾಲಿಕೆ ಪ್ಲಾನ್‌ ಮಾಡಿದೆ. ಮೊದಲು ಅನಧಿಕೃತ ಕಟ್ಟಡ, ಅಂಗಡಿಗಳನ್ನು ಗುರುತಿಸಿ ಬಳಿಕ ತೆರವು ಕಾರ್ಯ ಮಾಡಲು ತಯಾರಿ ನಡೆದಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಮಾಹಿತಿ ನೀಡಿದ್ದಾರೆ.

ಜಯಚಾಮರಾಜೇಂದ್ರ ಮಾರುಕಟ್ಟೆ ಸಮೀಪ ನಿರ್ಮಿಸಿದ್ದ ಅನಧಿಕೃತ ಮಳಿಗೆಗಳ ತರೆವು

ದಾಖಲೆಗಳಿಲ್ಲದೇ ಅನಧಿಕೃತವಾಗಿ ವ್ಯಾಪಾರ, ವಹಿವಾಟು ಮಾಡುತ್ತಿದ್ದವರಿಗೆ ಪಾಲಿಕೆ ಡೆಮಾಲಿಶನ್‌ ಮೂಲಕ ಟ್ರೈಲರ್‌ ತೋರಿಸಿದೆ. ಜಯಚಾಮರಾಜೇಂದ್ರ ತರಕಾರಿ, ಹಣ್ಣಿನ ಮಾರುಕಟ್ಟೆಯಲ್ಲಿ ಅನುಮತಿ ಇಲ್ಲದೇ ಕಟ್ಟಿದ್ದ ಅಂಗಡಿ-ಮುಂಗಟ್ಟ ಅನ್ನು ಪೊಲೀಸರ ಸಮ್ಮುಖದಲ್ಲಿ ತೆರವು ಮಾಡಲಾಗಿದೆ. ಕೆಲವು ಕಡೆಗಳಲ್ಲಿ ಫುಟ್ ಪಾತ್ ಅನ್ನು ಅತಿಕ್ರಮಣ ಮಾಡಿಕೊಳ್ಳಲಾಗಿತ್ತು.

ಕೋರ್ಟ್‌ ಆದೇಶದಂತೆ ಪಾಲಿಕೆಯಿಂದ ಅನಧಿಕೃತ ಅಂಗಡಿ ಮುಂಗಟ್ಟುಗಳ ತೆರವು ಕಾರ್ಯಾಚರಣೆ

ಉರುಳಲಿವೆಯೇ ಮತ್ತಷ್ಟು ಅಕ್ರಮ ಒತ್ತುವರಿ ಕಟ್ಟಡ?

ಮಳೆಗಾಲ ಆರಂಭವಾಗುವುದರ ಒಳಗೆ ರಾಜಕಾಲುವೆ ಒತ್ತುವರಿಯನ್ನೂ (Rajakaluve Encroachment) ಬಿಬಿಎಂಪಿ (BBMP) ತೆರವುಗೊಳಿಸಲಿದೆ. ಕಳೆದ ವರ್ಷ ಬೆಂಗಳೂರಿನ ಐಟಿ ಕಾರಿಡಾರ್‌ಗಳಲ್ಲಿ ಅಕ್ಷರಶಃ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಧಾರಾಕಾರ ಮಳೆಗೆ (Bengaluru Rain) ಜನವಸತಿ ಪ್ರದೇಶಗಳು ಜಲಾವೃತಗೊಂಡಿತ್ತು. ಈ ಬಾರಿಯೂ ಹೀಗಾಗದಂತೆ ನೋಡಿಕೊಳ್ಳಲು ಬಿಬಿಎಂಪಿ ಮುಂದಾಗಿದೆ.

ಮುಂಗಾರು ಪ್ರವೇಶಕ್ಕೂ ಮುನ್ನವೇ ಒತ್ತುವರಿ ತೆರವುಗೊಳಿಸಲು ಬಿಬಿಎಂಪಿ ಸನ್ನದ್ಧವಾಗಿದೆ. ಮಹಾದೇವಪುರ, ಸರ್ಜಾಪುರ, ಮಾರತ್‌ಹಳ್ಳಿ ಹಾಗೂ ಬೆಳ್ಳಂದೂರು ಮಳೆ ಹಾನಿ ಪ್ರದೇಶಗಳಾಗಿವೆ. ಅನಾಹುತಗಳು ಮತ್ತೆ ಮರುಕಳಿಸುವುದನ್ನು ತಪ್ಪಿಸಲು ಅಕ್ರಮವಾಗಿ ಒತ್ತುವರಿ ಮಾಡಿಕೊಂಡ ಸ್ಥಳಗಳನ್ನು ತೆರವು ಮಾಡಲು ಬಿಬಿಎಂಪಿ ಮುಂದಾಗಿದ್ದು, ಮುಂದಿನ ವಾರದಿಂದ ಅಖಾಡಕ್ಕೆ ಇಳಿಯಲಿದೆ.

ಪ್ರತಿ ವರ್ಷ ನೀರು ನಿಂತು ಸಮಸ್ಯೆಗೆ ಕಾರಣವಾಗುವ ಖಾಸಗಿ ಆಸ್ತಿಯನ್ನು ಖರೀದಿ ಮಾಡಲು ಬಿಬಿಎಂಪಿ ತಯಾರಿ ನಡೆಸಿದೆ. ಬೆಂಗಳೂರಿನಲ್ಲಿ ನೀರು ನಿಂತು ಸಮಸ್ಯೆ ಉಂಟು ಮಾಡುವ ಸ್ಥಳವನ್ನು ಗುರುತಿಸಲು ಮುಂದಾಗಿದೆ. ಜತೆಗೆ ಸಮಸ್ಯೆಗೆ ಕಾರಣವಾಗುವ ಖಾಸಗಿಯವರ ಆಸ್ತಿಯಾಗಿದ್ದರೂ, ಪರಿಹಾರ ನೀಡಿ ತೆರವು ಕಾರ್ಯಾಚರಣೆ ಮಾಡಲು ಮುಂದಾಗಿದೆ.

ನೂರಕ್ಕೂ ಹೆಚ್ಚು ಮಾಲೀಕರಿಂದ ಸ್ಟೇ ಆರ್ಡರ್‌

ಬಿಬಿಎಂಪಿ ಹಾಗೂ ಕಂದಾಯ ಇಲಾಖೆಯು ಈ ಹಿಂದೆ ಒತ್ತುವರಿ ಆಗಿದ್ದ ನೂರಾರು ಸ್ಥಳಗಳನ್ನು ಗುರುತಿಸಿ 200 ಸ್ಥಳಗಳಲ್ಲಿ ತೆರವು ಕೆಲಸ ಮಾಡಿತ್ತು. ತೆರವು ಕಾರ್ಯಾಚರಣೆ ಗಮನಿಸಿ ಆತಂಕಕ್ಕೊಳಗಾದ 118 ಕಟ್ಟಡ ಮಾಲೀಕರು ಸ್ಟೇ ಆರ್ಡರ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಆ ಸಂದರ್ಭದಲ್ಲಿ ಕೋರ್ಟ್‌ನಲ್ಲಿ ದಾಖಲೆಗಳನ್ನು ಸಲ್ಲಿಸದೆ ಬಿಬಿಎಂಪಿ ಹಾಗೂ ಕಂದಾಯ ಇಲಾಖೆ ತನ್ನ ಪ್ರಕ್ರಿಯೆಯನ್ನು ತಡ ಮಾಡಿತಾದರೂ, ಈಗ ತಕ್ಕ ಉತ್ತರವನ್ನು ನೀಡಲು ಸಜ್ಜಾಗಿದೆ.

ನ್ಯಾಯಾಲಯದಲ್ಲಿರುವ 118 ಪ್ರಕರಣಗಳ ಕುರಿತಾಗಿ ಸಂಕ್ಷಿಪ್ತ ಮಾಹಿತಿಯನ್ನು ಸಂಗ್ರಹಿಸಿರುವ ಬಿಬಿಎಂಪಿ ಹಾಗೂ ಕಂದಾಯ ಇಲಾಖೆ, ಈಗ ಕೋರ್ಟ್‌ಗೆ ಉತ್ತರ ನೀಡಲಿದೆ. ಸರ್ಕಾರಿ ಜಾಗದಲ್ಲಿ ಏನಾದರೂ ಕಟ್ಟಡ ಕಟ್ಟಿಕೊಂಡಿರುವುದು ಗಮನಕ್ಕೆ ಬಂದರೆ, ಯಾವುದೇ ಪರಿಹಾರವಿಲ್ಲದೇ ತೆರವು ಮಾಡುವುದಾಗಿ ತಿಳಿಸಿದೆ. ಒಂದು ವೇಳೆ ಖಾಸಗಿ ಸ್ವತ್ತಿನಲ್ಲಿ ರಾಜಕಾಲುವೆ ಹಾದುಹೋಗಿ ಅದರಿಂದ ಮಳೆ ನೀರು ನಿಲ್ಲುತ್ತಿದ್ದರೆ, ಆ ಖಾಸಗಿ ಬಿಲ್ಡಿಂಗ್‌ಗಳನ್ನೂ ಬಿಬಿಎಂಪಿ ಖರೀದಿಸಿ ನಂತರ ತೆರವು ಮಾಡಲಿದೆ. ಸದ್ಯದ ಮಟ್ಟಿಗೆ ಇಂತಹ 10 ರಿಂದ 18 ಕಟ್ಟಡಗಳನ್ನು ಖರೀದಿ ಮಾಡಿ ರಾಜಕಾಲುವೆ ಸಮಸ್ಯೆ ಸರಿಪಡಿಸಲಾಗುತ್ತದೆ ಎಂಬ ಮಾಹಿತಿ ಲಭಿಸಿದೆ.

ಇದನ್ನೂ ಓದಿ: Water Contamination : ರಾಯಚೂರಲ್ಲಿ ಮುಂದುವರಿದ ಕಲುಷಿತ ನೀರು ಸೇವನೆ ಪ್ರಕರಣ; ಮತ್ತೆ 8 ಮಂದಿ ಅಸ್ವಸ್ಥ

ಕಳೆದ ಬಾರಿ ಆದ ಸಣ್ಣಪುಟ್ಟ ಗೊಂದಲಗಳಿಂದ ಪಾಠ ಕಲಿತಿರುವ ಬಿಬಿಎಂಪಿ, ಈ ಬಾರಿ ಕಂದಾಯ ಇಲಾಖೆಯ ಮ್ಯಾಪ್‌ ಅನ್ನು ಆಧಾರವಾಗಿಟ್ಟುಕೊಂಡು ಪರಿಶೀಲನೆ ನಡೆಸಲಿದೆ. ಖಾಸಗಿ ಭೂಮಿಯಾಗಿದ್ದರೆ ಟಿಡಿಆರ್ ನೀಡಿ ಪ್ರಾಪರ್ಟಿಯನ್ನು ಸುಪರ್ದಿಗೆ ಪಡೆಯುತ್ತದೆ ಅಥವಾ ಖರೀದಿ ಮಾಡಿ ಸುಪರ್ದಿಗೆ ಪಡೆಯುತ್ತದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version