ರಾಯಚೂರು: ಕೊರ್ತಕುಂದಾ ಗ್ರಾಮದ ಹೊರವಲಯದ ಕೆರೆಯಲ್ಲಿ ಮುಳಗಿ (Drowned) ಚಿಕ್ಕಪ್ಪ ಹಾಗೂ ಮಗ ಮೃತಪಟ್ಟಿದ್ದಾರೆ. ಚಿಕ್ಕಪ್ಪ ಸಲೀಂ ಹುಸೇನಸಾಬ್ (32) ಹಾಗೂ ಅಣ್ಣನ ಮಗ ಯಾಸೀನ್ ರಫಿ (13) ಮೃತಪಟ್ಟವರು.
ನರೇಗಾ ಕೆಲಸಕ್ಕೆ ಚಿಕ್ಕಪ್ಪನ ಜತೆಯಲ್ಲಿ ಬಾಲಕ ಹೋಗಿದ್ದ. ಕೆರೆಯಲ್ಲಿ ಕುಡಿಯಲು ನೀರು ತುಂಬಿಕೊಂಡು ಬರಲು ಹೋದಾಗ ಕಾಲು ಜಾರಿ ಬಾಲಕ ಬಿದ್ದಿದ್ದಾನೆ. ಬಾಲಕ ಚೀರಾಟ, ಕಿರುಚಾಟ ಕೇಳಿ ತಕ್ಷಣವೇ ಆತನ ರಕ್ಷಣೆ ಚಿಕ್ಕಪ್ಪ ಯಾಸೀನ್ ರಫಿ ಹೋಗಿದ್ದಾರೆ. ಆದರೆ, ರಕ್ಷಣೆ ಮಾಡಲು ಸಾಧ್ಯವಾಗದೆ ಇಬ್ಬರೂ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಯಾಪಲದಿನ್ನಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ರಿಮ್ಸ್ ಆಸ್ಪತ್ರೆ ರವಾನೆ ಮಾಡಲಾಗಿದೆ. ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಯಾಪಲದಿನ್ನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕೊಲೆ ಬೆದರಿಕೆ ಪತ್ರ ಬರೆದವನಿಗೆ ಕನ್ನಡ ಕಲಿಸಲು ಮುಂದಾದ ಕುಂ. ವೀರಭದ್ರಪ್ಪ; ಏಕೆ ಈ ನಿರ್ಧಾರ?
ಅವಳಿ ಮಕ್ಕಳನ್ನೇ ಉಸಿರುಗಟ್ಟಿಸಿ ಹತ್ಯೆ ಮಾಡಿದ ತಂದೆ; ಕಾರಲ್ಲೇ ಶವ ಇಟ್ಟಿದ್ದ ಪಾಪಿ
ದಾವಣಗೆರೆ: ದಾವಣಗೆರೆ ನಗರದ ಆಂಜನೇಯ ಮಿಲ್ ಬಡಾವಣೆಯಲ್ಲಿ ವಾಸವಾಗಿದ್ದ ಕೆಮಿಕಲ್ ಎಂಜಿನಿಯರ್ ಒಬ್ಬ ತನ್ನ ಇಬ್ಬರು ಅವಳಿ ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ (Double murder) ಮಾಡಿದ್ದಾನೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಅದ್ವೈತ್ (04) ಹಾಗೂ ಅನ್ವೀತ್ (04) ಕೊಲೆಯಾದ ಮಕ್ಕಳು. ಅಮರ್ ಕಿತ್ತೂರು (35) ಮಕ್ಕಳನ್ನು ಕೊಂದ ಪಾಪಿ ತಂದೆಯಾಗಿದ್ದಾನೆ. ಪತ್ನಿ ಜಯಲಕ್ಷ್ಮಿ ತವರಿಗೆ ಹೋಗಿದ್ದರು ಎನ್ನಲಾಗಿದೆ. ಈ ವೇಳೆ ಬುಧವಾರ ರಾತ್ರಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೆರೆ ಟೋಲ್ ಗೇಟ್ ಮೂಲಕ ಮಕ್ಕಳನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದ ಅಮರ್, ಅವರ ಬಾಯಿಗೆ ಟಿಕ್ಸೋ ಟೇಪ್ ಹಚ್ಚಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಅಮರ್ ಕಿತ್ತೂರ ಮೂಲತಃ ಗೋಕಾಕದ ನಿವಾಸಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಹರಿಹರದ ಕಾರ್ಗಿಲ್ ಫ್ಯಾಕ್ಟರಿಯಲ್ಲಿ ಕೆಮಿಕಲ್ ಎಂಜಿನಿಯರ್ ಆಗಿರುವ ಅಮರ್ ಏಕೆ ಈ ಕೃತ್ಯ ಎಸಗಿದ್ದಾನೆಂಬುದು ಇನ್ನೂ ತಿಳಿದುಬಂದಿಲ್ಲ.
ಪತ್ನಿ ತವರಿಗೆ ಹೋಗಿದ್ದರು. ಆದರೆ, ಮನೆಯಲ್ಲಿ ತಾಯಿ ಇದ್ದರು. ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಕರೆದೊಯ್ದು ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ಮಕ್ಕಳ ಶವವನ್ನು ಕಾರಿನಲ್ಲಿಯೇ ಆತ ತಂದಿದ್ದ. ಮಕ್ಕಳ ಸಾವಿನ ಬಗ್ಗೆ ಸ್ಥಳೀಯರಿಗೆ ಸಂಶಯ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ತನಿಖೆ ವೇಳೆ ತಾನೇ ಮಕ್ಕಳನ್ನು ಕೊಲೆ ಮಾಡಿದ್ದಾಗಿ ಅಮರ್ ಒಪ್ಪಿಕೊಂಡಿದ್ದಾನೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಸಂಬಂಧ ಕುಟುಂಬ ಸದಸ್ಯರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ.