Site icon Vistara News

ಗದಗ ಲೇಔಟ್‌ ನಷ್ಟ | ಅಭಿವೃದ್ಧಿ ಆಗದ ಬಡಾವಣೆಗಳಿಗೆ ಸಕ್ರಮ ದಾಖಲೆ ನೀಡುವುದರಲ್ಲಿ ʻಗುಡಾʼ ಸದಾ ಮುಂದು

Gadaga GUDA

ಶಿವಾನಂದ ಹಿರೇಮಠ ವಿಸ್ತಾರ ನ್ಯೂಸ್ ಗದಗ
ಅಭಿವೃದ್ಧಿಗೊಳ್ಳದ ಲೇಔಟ್ ಗಳ ದಾಖಲೆಗಳನ್ನು ಸಕ್ರಮಗೊಳಿಸುವುದರಲ್ಲಿ ಗದಗ ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ ಬಲು ನಿಪುಣ. ಇಲ್ಲಿ ಅಕ್ರಮದ ಆಳ ತುಂಬಾ ದೊಡ್ಡದು.

ಗದಗ ನಗರ ಒಂದರಲ್ಲೇ ಅಭಿವೃದ್ಧಿ ಆಗದ 554 ಲೇಔಟ್ ಗಳಿಗೆ ಮತ್ತು ಅಲ್ಲಿನ ನಿವೇಶನಗಳಿಗೆ ಸ್ಥಳೀಯ ನಗರಸಭೆ ಮತ್ತು ನಗರಾಭಿವೃದ್ಧಿ ಇಲಾಖೆ ಸಕ್ರಮ ದಾಖಲೆ ಸೃಷ್ಟಿ ಮಾಡಿಕೊಟ್ಟಿರುವುದು ಎಲ್ಲರೂ ಹುಬ್ಬೇರುವಂತೆ ಮಾಡಿದೆ. ದಾಖಲೆ ಆಧಾರದ ಮೇಲೆ ನಿವೇಶನ ಖರೀದಿಸಿದ ಮಧ್ಯಮ, ಬಡ ವರ್ಗದ ಜನ ದಿನನಿತ್ಯ ಪರಿತಪಿಸುವಂತಾಗಿದೆ.

ಅಭಿವೃದ್ಧಿಯಾಗದ ಲೇಔಟ್ ಗಳಿಗೆ ಅಂತಿಮ ಅನುಮೋದನೆ ನೀಡಿರುವ ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಲೇಔಟ್‌ ಮಾಲೀಕರೇ ಇಲ್ಲಿ ಆರೋಪಿಗಳು. ಗದಗ ನಗರದಲ್ಲಿ ಪ್ರಸ್ತುತ 738 ಲೇಔಟ್ ಗಳಿವೆ. ಅದರಲ್ಲಿ 184 ಲೇಔಟ್ ಗಳು ಮಾತ್ರ ಸಂಪೂರ್ಣ ಅಭಿವೃದ್ಧಿಗೊಂಡಿವೆ. ಅಭಿವೃದ್ಧಿ ಆಗದ 554 ಲೇಔಟ್ ಗಳಿಗೆ ನಿಯಮದ ಪ್ರಕಾರ ಅನುಮೋದನೆ ಸಿಗುವಂತಿಲ್ಲ. ಆಯಾ ಕಾಲಘಟ್ಟದಲ್ಲಿ ನಗರಾಭಿವೃದ್ಧಿ, ನಗರಸಭೆ ಅಧಿಕಾರಿಗಳು ಲೇಔಟ್ ಮಾಲೀಕರ ಜತೆ ಒಳ ಒಪ್ಪಂದದ ಮೂಲಕ ಅನುಮೋದನೆ ನೀಡಿದ್ದಾರೆ ಎಂಬುದು ಲೇಔಟ್ ಗಳ ಇಂದಿನ ಸ್ಥಿತಿ ನೋಡಿದರೆ ಸಾಭಿತಾಗುತ್ತದೆ.

ಸ್ಥಳೀಯ ಜನಪ್ರತಿನಿಧಿಗಳಿಗೆ ಆಡಳಿತ ವ್ಯವಸ್ಥೆ ಮೇಲೆ ನಿಯಂತ್ರಣ ಇಲ್ಲ. ಜನಪ್ರತಿನಿಧಿಗಳೂ ವ್ಯವಸ್ಥೆ ಜತೆಗೆ ಹೊಂದಾಣಿಕೆ ಆಗಿದ್ದರ ಪರಿಣಾಮದಿಂದಲೂ ಕೂಡ ಲೇಔಟ್ ಅಭಿವೃದ್ಧಿಗೊಳ್ಳದೇ ಅಕ್ರಮ ದಾಖಲೆಗಳು ಸೃಷ್ಟಿ ಆಗುತ್ತಲೇ ಇವೆ ಮತ್ತು ಅಂತಹ ದಾಖಲೆಗಳ ಮೂಲಕವೇ ಸೈಟ್ ಮಾರಾಟ ಆಗುತ್ತಿವೆ.

ಹರಾಜು ಏಕಿಲ್ಲ?
ಪ್ರಾಧಿಕಾರದ ನಿಯಮದಂತೆ ‘ಲೇಔಟ್ ಅಭಿವೃದ್ಧಿ ಪಡಿಸಲು ಅನುಮೋದನೆ ಪಡೆಯಲು ಇಂತಿಷ್ಟು ಪ್ರಮಾಣದ ನಿವೇಶನಗಳನ್ನು ಪ್ರಾಧಿಕಾರಕ್ಕೆ ಪ್ಲೆಡ್ಜ್ (ಹಕ್ಕು ಬದಲಾವಣೆ) ಮಾಡಬೇಕು. ವಿದ್ಯುತ್, ಒಳಚರಂಡಿ, ರಸ್ತೆ, ಪಾರ್ಕ್, ಮೂಲಭೂತ ಸೌಕರ್ಯಗಳ ಸೌಲಭ್ಯಗಳೊಂದಿಗೆ ಸಂಪೂರ್ಣ ಅಭಿವೃದ್ಧಿಪಡಿಸಿ ಪ್ರಾಧಿಕಾರದಿಂದ ಅಂತಿಮ ಅನುಮೋದನೆ ಪಡೆಯಬೇಕಿದೆ. ಅಭಿವೃದ್ಧಿಗೊಂಡ ಲೇಔಟ್ ವೀಕ್ಷಣೆಗಾಗಿ ಪ್ರಾಧಿಕಾರದ ಅಧ್ಯಕ್ಷರು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು. ಒಂದು ವೇಳೆ ಲೇಔಟ್ ಮಾಲೀಕರು ಅಭಿವೃದ್ಧಿ ಪಡಿಸದೇ ನಕಲಿ ದಾಖಲೆ ಸೃಷ್ಟಿಸಿದ್ದೇ ಆದಲ್ಲಿ ಪ್ರಾಧಿಕಾರಕ್ಕೆ ಪ್ಲೆಡ್ಜ್ ಮಾಡಿದ ನಿವೇಶನಗಳನ್ನು ಪ್ರಾಧಿಕಾರವೇ ಹರಾಜು ಮಾಡಿ ಬಂದಂತಹ ಹಣದಲ್ಲಿ ಆಯಾ ಲೇಔಟ್ ಗಳ ಅಭಿವೃದ್ಧಿ ಮಾಡಬೇಕು. ಹೀಗಿದ್ದರೂ ಕೂಡ ಅಭಿವೃದ್ಧಿಯಾಗದ ಲೇಔಟ್ ಗಳಿಗೂ ಪ್ರಾಧಿಕಾರ ಅಂತಿಮ ಅನುಮೋದನೆ ನೀಡಿ ಪ್ಲೆಡ್ಜ್ ಮಾಡಿಕೊಂಡಿದ್ದ ನಿವೇಶನಗಳನ್ನೂ ಲೇಔಟ್ ಮಾಲೀಕರಿಗೆ ಹಕ್ಕು ಬದಲಾಯಿಸಿ ಬಿಟ್ಟುಕೊಟ್ಟಿದೆ. ಹೀಗಾಗಿ 554 ಲೇಔಟ್ ಗಳು ಅಭಿವೃದ್ಧಿ ಆಗದೇ ಉಳಿದಿವೆ. ನಿವೇಶನ ಖರೀದಿಸಿದ ಮಾಲೀಕರು ಈ ಬಗ್ಗೆ ಯಾರನ್ನು ಪ್ರಶ್ನಿಸಬೇಕು ಎಂಬ ಗೊಂದಲದಲ್ಲಿ ಇದ್ದಾರೆ. ಅಧಿಕಾರಿಗಳು ಮತ್ತು ಮಾಲೀಕರು ಈ ಅಕ್ರಮದಲ್ಲಿ ಭಾಗಿ ಆಗಿರುವುದು ಸಾಬೀತಾಗಿದೆ.

ಹೆಸರಿಗಷ್ಟೇ ಲೇಔಟ್ ಮಾಲೀಕರಿಗೆ ನೋಟೀಸ್
ಲೇಔಟ್ ಅಭಿವೃದ್ಧಿ ಪಡಿಸದೇ ಇರುವ 184 ಲೇಔಟ್ ಮಾಲೀಕರಿಗೆ ನೋಟೀಸ್ ನೀಡಲಾಗಿದ್ದರೂ ಮುಂದುವರಿದು ಕಠಿಯ ಕ್ರಮ ಏಕಿಲ್ಲ ಎಂಬದು ಸಾರ್ವಜನಿಕರ ಪ್ರಶ್ನೆ. ಇನ್ನೂ ಲೇಔಟ್ ಅಭಿವೃದ್ಧಿ ಪಡಿಸದೇ ಇರುವ ಮಾಲೀಕರಿಗೆ ಪ್ಲೆಡ್ಜ್ ನಿವೇಶನಗಳನ್ನು ಪ್ರಾಧಿಕಾರ ಬಿಡುಗಡೆ ಮಾಡಿದ್ದರಿಂದ ನೋಟೀಸ್ ನೀಡಿದರೂ ಪ್ರಯೋಜಕ್ಕೆ ಬಾರದಾಗಿದೆ.

ಪ್ರಾಧಿಕಾರ ಹೇಳುವುದೇನು?
ಲೇಔಟ್ ನಿರ್ಮಾಣಕ್ಕೆ 2005 ರ ವರೆಗೂ ಕಠಿಣ ನಿಯಮ ಇರದ ಕಾರಣ ನಗರದಲ್ಲಿ ಬೇಕಾಬಿಟ್ಟಿ ಲೇಔಟ್ ನಿರ್ಮಾಣಗೊಂಡಿರುವುದು ಸತ್ಯ. ಆನಂತರವೂ ಹಲವು ಬಡಾವಣೆಗಳ ಸ್ಥಿತಿಯೂ ಹೀಗೆ ಆಗಿದ್ದು, ಹಲವರಿಗೆ ಎರೆಡೆರಡೂ ಬಾರಿ ನೋಟೀಸ್ ನೀಡಲಾಗಿದೆ. ಅದರಲ್ಲಿ ಕೆಲವರು ಅಭಿವೃದ್ಧಿ ಪಡಿಸಲು ಮುಂದೆ ಬಂದಿದ್ದಾರೆ ಎನ್ನುತ್ತಾರೆ ಗದಗ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಮೇಶ್ ವಟಕಲ್.

ಇದನ್ನೂ ಓದಿ | ಗದಗ ನಗರಾಭಿವೃದ್ಧಿ ಪ್ರಾಧಿಕಾರ ಎಡವಟ್ಟು: 24 ವರ್ಷ ಹಿಂದಿನ ನಿವೇಶನ ಹಂಚಿಕೆ ಪ್ರಕರಣ, 25 ಲಕ್ಷಕ್ಕೆ 40 ಲಕ್ಷ ಬಡ್ಡಿ!

Exit mobile version