ಕೋಲಾರ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಜತೆ ಜೆಡಿಎಸ್ ಮೈತ್ರಿ (BJP-JDS Alliance) ಮಾಡಿಕೊಂಡಿರುವುದಕ್ಕೆ ಜೆಡಿಎಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಪ್ರಮುಖ ಅಲ್ಪಸಂಖ್ಯಾತ ನಾಯಕರು ದಳಕ್ಕೆ ರಾಜೀನಾಮೆ ನೀಡುತ್ತಿರುವುದು ಜೆಡಿಎಸ್‌ಗೆ ಸಂಕಷ್ಟ ತಂದಿದೆ. ಪಕ್ಷದ ಹಿರಿಯ ಉಪಾಧ್ಯಕ್ಷ ಸೈಯದ್ ಷಪಿವುಲ್ಲಾ ರಾಜೀನಾಮೆ ನೀಡಿದ ಬೆನ್ನಲ್ಲೇ ಜೆಡಿಎಸ್‌ನ ಮತ್ತೊಬ್ಬ ಹಿರಿಯ ಉಪಾಧ್ಯಕ್ಷ ಜಮೀರ್ ಅಹಮದ್ ಕೂಡ ರಾಜೀನಾಮೆ ಸಲ್ಲಿಸಿದ್ದಾರೆ.
ಕೋಲಾರದ ಅಂಜುಮನ್ ಎ ಇಸ್ಲಾಮಿಯಾ ಅಧ್ಯಕ್ಷರು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಅವರ ಆಪ್ತರು ಆದ ಜಮೀರ್ ಅಹಮದ್ ಪ್ರತಿಕ್ರಿಯಿಸಿ, ಕೋಮುವಾದಿ ಪಕ್ಷ ಬಿಜೆಪಿಗೆ ಜೆಡಿಎಸ್ ಪಕ್ಷ ಬೆಂಬಲ ಘೋಷಿಸಿರುವುದು ಬೇಸರ ತಂದಿದೆ. ಯಾವುದೇ ಕಾರಣಕ್ಕೂ ನಾವು ಬಿಜೆಪಿಗೆ ಬೆಂಬಲ ನೀಡುವುದಿಲ್ಲ. ಅಲ್ಪಸಂಖ್ಯಾತ ಮುಖಂಡರನ್ನು ಒಂದು ಮಾತು ಸಹ ಕೇಳದೆ ಮೈತ್ರಿ ನಿರ್ಧಾರ ಮಾಡಿದ್ದಾರೆ. ಈ ವಿಚಾರದಲ್ಲಿ ಬೇಸರವಾಗಿದೆ. ನಾನು ಮೊದಲು ಕಾಂಗ್ರೆಸ್ ಪಕ್ಷದಲ್ಲಿದ್ದೇ, ಮುಂದೆ ನೋಡೋಣ ಎಂದು ಕಾಂಗ್ರೆಸ್ ಸೇರುವ ಬಗ್ಗೆ ಪರೋಕ್ಷವಾಗಿ ಒಲವು ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಮಾಜಿ ಸಚಿವ ಎನ್.ಎಣ.ನಬಿ, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿಯಾಗಿದ್ದ ಮೊಹಿದ್ ಅಲ್ತಾಪ್, ಯುವ ಘಟಕದ ಅಧ್ಯಕ್ಷ ಎನ್.ಎಂ.ನೂರ್ , ಅಲ್ಪ ಸಂಖ್ಯಾತ ವಿಭಾಗದ ಮಾಜಿ ಅಧ್ಯಕ್ಷ ನಾಸಿರ್ ಹುಸೇನ್ ಉಸ್ತಾದ್ ಸೇರಿ ಹಲವರು ಪಕ್ಷ ತೊರೆಯುವ ತೀರ್ಮಾನ ಮಾಡಿದ್ದಾರೆ.
ಇದನ್ನೂ ಓದಿ | HD Kumaraswamy : 6ನೇ ಗ್ಯಾರಂಟಿಯಾಗಿ ಮದ್ಯಭಾಗ್ಯ; ಎಚ್.ಡಿ. ಕುಮಾರಸ್ವಾಮಿ ಕಿಡಿ
ಇವರಷ್ಟೇ ಅಲ್ಲದೇ ಶಿವಮೊಗ್ಗ ಜೆಡಿಎಸ್ ಘಟಕದ ಅಧ್ಯಕ್ಷ ಎಂ. ಶ್ರೀಕಾಂತ್, ಯು.ಟಿ. ಆಯೇಷಾ ಫರ್ಜಾನಾ ಸೇರಿ ಹಲವು ನಾಯಕರು ಕೂಡ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಶ್ರೀಕಾಂತ್ ಜತೆಗೆ ಜೆಡಿಎಸ್ ಕಾರ್ಪೊರೇಟರ್‌ಗಳು, ಮುಖಂಡರು, ನಾಯಕರು ಸೇರಿ ಅಪಾರ ಸಂಖ್ಯೆಯ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.