ಬೆಂಗಳೂರು: ಬಂಗಾರಪೇಟೆ-ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನ ಸೀಟೊಂದರ ಅಡಿಯಲ್ಲಿ ಹಳದಿ ಬಣ್ಣದ ಪ್ಲಾಸ್ಟಿಕ್ ಚೀಲವೊಂದರಲ್ಲಿ ಅಪರಿಚಿತ ಮಹಿಳೆಯೊಬ್ಬರ ಶವ (Unidentified body found) ಪತ್ತೆಯಾಗಿದೆ. ಮಂಗಳವಾರ ರಾತ್ರಿ ಈ ಪ್ರಕರಣ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೊಲೆ ಮಾಡಿರುವ ಪಾತಕಿಗಳು ರೈಲಿನೊಳಗೆ ಶವವನ್ನು ಬಿಟ್ಟುಹೋಗಿದ್ದಾರೆ.
ಕೆಜಿಎಫ್‌ನಿಂದ ಬೆಂಗಳೂರಿನ ಕಡೆಗೆ ಬರುತ್ತಿದ್ದ ರೈಲಿನಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಮೃತದೇಹಕ್ಕೆ ಬೆಡ್‌ಶೀಟ್ ಹೊದಿಸಲಾಗಿತ್ತು. ಅಲ್ಲದೆ, ಅನುಮಾನ ಬಾರದಿರಲಿ ಎಂದು ಬಟ್ಟೆಗಳ ನಡುವೆ ಮೃತದೇಹವನ್ನು ತುರುಕಲಾಗಿತ್ತು. ಬಳಿಕ ಹಳದಿ ಬಣ್ಣದ ಪ್ಲಾಸ್ಟಿಕ್ ಚೀಲದೊಳಗೆ ಹಾಕಿ ಯಾರಿಗೂ ತಿಳಿಯದಂತೆ ರೈಲಿನ ಸೀಟಿನೊಳಗೆ ಇಟ್ಟು ಕೊಲೆಗಡುಕರು ಪರಾರಿಯಾಗಿದ್ದಾರೆ.
ರಾತ್ರಿ 11 ಗಂಟೆಗೆ ರೈಲು ಬೆಂಗಳೂರಿನ ಸರ್.ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್‌ಎಂವಿಟಿ)ಗೆ ಬಂದಾಗ ರೈಲ್ವೇ ಹವಾನಿಯಂತ್ರಣ ಮೆಕ್ಯಾನಿಕ್ ಇದನ್ನು ಗುರುತಿಸಿದ್ದಾರೆ. ರೈಲಿನಿಂದ ಪ್ರಯಾಣಿಕರೆಲ್ಲರೂ ಇಳಿದರೂ ಒಂದು ಸೀಟ್‌ನ ಕೆಳಬದಿಯಲ್ಲಿ ಇರುವ ಚೀಲವನ್ನು ಮಾತ್ರ ಯಾರೂ ತೆಗೆದುಕೊಂಡು ಹೋಗಿರಲಿಲ್ಲ. ಹೀಗಾಗಿ ಅನುಮಾನ ಮೂಡಿದ್ದು, ರೈಲ್ವೆ ಪೊಲೀಸರಿಗೆ ವಿಷಯ ಮುಟ್ಟಿಸಲಾಗಿದೆ. ರೈಲ್ವೆ ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ವಿಷಯ ಬೆಳಕಿಗೆ ಬಂದಿದೆ. ಪ್ರಕರಣ ದಾಖಲು ಮಾಡಿಕೊಂಡಿರುವ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು, ಮೃತ ಮಹಿಳೆಯ ಗುರುತು ಪತ್ತೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ | ಶರತ್ ಬಚ್ಚೇಗೌಡಗೆ ಕಾಂಗ್ರೆಸ್ ಟಿಕೆಟ್ ಬೇಡ: ಮೂಲ ಕಾಂಗ್ರೆಸಿಗರ ಸಭೆಯಲ್ಲಿ ಒತ್ತಾಯ, ಜಟಾಪಟಿ
ಸುಮಾರು 35 ವರ್ಷ ವಯಸ್ಸಿನ ಮಹಿಳೆಯ ಎಂದು ಅಂದಾಜಿಸಲಾಗಿದ್ದು, ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಡಿಸೆಂಬರ್ 6 ರಂದು ರಾತ್ರಿ 8.40ರ ಸುಮಾರಿಗೆ ಕೋಲಾರದ ರೈ ನಿಲ್ದಾಣದಲ್ಲಿ ರೈಲು ಹತ್ತಿದವರು ಈ ಬ್ಯಾಗ್ ಅನ್ನು ಇಟ್ಟಿರುವುದನ್ನು ಗಮನಿಸಿರುವುದಾಗಿ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಈಗ ಪ್ರಕರಣದ ದಾಖಲು ಮಾಡಿಕೊಂಡಿರುವ ರೈಲ್ವೆ ಪೊಲೀಸರು, ಬಂಗಾರಪೇಟೆ-ಬೆಂಗಳೂರು ಮಾರ್ಗದ ರೈಲು ನಿಲ್ದಾಣಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಪತ್ತೆ ಹಚ್ಚಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
ಇದನ್ನೂ ಓದಿ | Anjanadri Hill | ಧರ್ಮ ಸಹಿಷ್ಣುತೆಗೆ ಸಾಕ್ಷಿಯಾದ ಅಂಜನಾದ್ರಿ; ಮುಸ್ಲಿಂ ಕುಟುಂಬದಿಂದ ಹನುಮನಿಗೆ ವಿಶೇಷ ಪೂಜೆ