Site icon Vistara News

Uniform civil code | ರಾಜ್ಯದಲ್ಲೂ ಸಮಾನ ನಾಗರಿಕ ಸಂಹಿತೆ ಜಾರಿಗೆ ಚಿಂತನೆ ಎಂದ ಸಿಎಂ ಬಸವರಾಜ ಬೊಮ್ಮಾಯಿ

CM Basavaraja Bommai

ಶಿವಮೊಗ್ಗ: ರಾಜ್ಯದಲ್ಲಿ ಏಕರೂಪದ ನಾಗರಿಕ ಸಂಹಿತೆ ಜಾರಿಗೆ ತರುವ ಸಂಬಂಧ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ. ಈ ಬಗ್ಗೆ ಶೀಘ್ರವೇ ದೃಢ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಶುಕ್ರವಾರ ಶಿವಮೊಗ್ಗದ ಕಿಮ್ಮನೆ ಗಾಲ್ಫ್​ ರೆಸಾರ್ಟ್​​ನಲ್ಲಿ ರಾಜ್ಯ ಬಿಜೆಪಿ ವತಿಯಿಂದ ಆಯೋಜಿಸಿದ್ದ ಪ್ರಶಿಕ್ಷಣ ವರ್ಗದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇದೀಗ ಎಲ್ಲ ಕಡೆಗಳಲ್ಲಿಯೂ ಏಕರೂಪ ನಾಗರಿಕ ಸಂಹಿತೆ ಕುರಿತು ಚರ್ಚೆಯಾಗುತ್ತಿದೆ. ನಮ್ಮ ಸರ್ಕಾರ ಕೂಡ ಈ ವಿಷಯವನ್ನ ಗಂಭೀರವಾಗಿ ಪರಿಗಣಿಸಿದೆ ಎಂದರು.

ಏಕರೂಪ ನಾಗರಿಕ ಸಂಹಿತೆ ಎಲ್ಲ ಸಮಾಜ ಮತ್ತು ಧರ್ಮದವರಲ್ಲಿ ಸಮಾನತೆ ತರುತ್ತದೆ. ಈಗಾಗಲೇ ಉತ್ತರಾಖಂಡ್, ಹಿಮಾಚಲ ಪ್ರದೇಶ ಹಾಗೂ ಗುಜರಾತ್​ ಸರ್ಕಾರಗಳು ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನಿಟ್ಟಿವೆ. ಇನ್ನೊಂದೆಡೆ, ಕೇಂದ್ರ ಗೃಹ ಸಚಿವ ಅಮಿತ್​ ಶಾ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

ಇದೇ ದಾರಿಯಲ್ಲಿ ಕರ್ನಾಟಕ ಸರಕಾರವೂ ಸಾಗುವ ಮುನ್ಸೂಚನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ನೀಡಿದ್ದಾರೆ. ಬಿಜೆಪಿ ಕಳೆದ ಹಲವು ವರ್ಷಗಳಿಂದ ಬಿಜೆಪಿ ಸಮಾನ ನಾಗರಿಕ ಸಂಹಿತೆ ಜಾರಿಯ ಬಗ್ಗೆ ಉತ್ಸಾಹವನ್ನು ತೋರಿಸಿದೆ. ೨೦೧೯ ಮತ್ತು ೨೦೨೦ರಲ್ಲಿ ಸಂಸತ್ತಿನಲ್ಲೂ ಮಂಡಿಸಿ ಬಳಿಕ ಕಾರಣಾಂತರಗಳಿಂದ ಹಿಂದೆ ಸರಿದಿತ್ತು.

ಬೊಮ್ಮಾಯಿ ಅವರು ಪ್ರಶಿಕ್ಷಣ ವರ್ಗದಲ್ಲಿ ಆಡಿದ ಮಾತು ನಿಜಕ್ಕೂ ಸರಕಾರದ ನಿರ್ಧಾರವೇ ಅಥವಾ ಚುನಾವಣೆಯ ಹಿನ್ನೆಲೆಯಲ್ಲಿ ಆಡಿದ ಬೀಸು ಹೇಳಿಕೆಯೇ ಎನ್ನುವುದು ಸ್ಪಷ್ಟವಾಗಿಲ್ಲ. ಅವರು ಒಂದು ಹೇಳಿಕೆಯನ್ನು ಹರಿಯಬಿಡುವ ಮೂಲಕ ಚರ್ಚೆಯನ್ನು ಹುಟ್ಟುಹಾಕುವ ಉದ್ದೇಶವನ್ನು ಹೊಂದಿದ್ದಾರೆ ಎಂಬಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ.

ಸಂಘಟನೆ ಬಲಪಡಿಸಲು ಸೂಚನೆ
ಬಿಜೆಪಿ ಸರ್ಕಾರದ ಕೆಲಸದ ರಿಪೋರ್ಟ್ ಕಾರ್ಡ್ ಹಾಗೂ ಮುಂದಿನ ಗುರಿಗಳನ್ನು ಇಟ್ಟುಕೊಂಡು ಜನರ ಬಳಿ ಹೋಗುವ ಸಕಾಲ ಬಂದಿದೆ. ಸಂಘಟನೆಯನ್ನು ಗಟ್ಟಿಗೊಳಿಸಿ, ಬೂತ್ ಮಟ್ಟ, ಮಂಡಲ, ಜಿಲ್ಲಾ ಮತ್ತು ರಾಜ್ಯಮಟ್ಟದ ಸಂಘಟನೆ ಬಲಪಡಿಸಿ, ಚುನಾವಣಾ ಸಮರಕ್ಕೆ ಸಿದ್ಧರಾಗಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಬಸವರಾಜ ಬೊಮ್ಮಾಯಿ ಕರೆ ನೀಡಿದರು.

ಆದರ್ಶಗಳು, ಸಾಮಾಜಿಕ ಗುರಿಗಳಿಂದ ಸಂಘಟನೆಯನ್ನು ಮೇಲ್ದರ್ಜೆಗೇರಿಸುವಂತಹ ಪಕ್ಷವೇ ಭಾರತೀಯ ಜನತಾ ಪಕ್ಷ. ಅತಿ ಹೆಚ್ಚು ಸಕ್ರಿಯ ಕಾರ್ಯಕರ್ತರಿರುವಂತಹ ಪಕ್ಷ. ಇದು ಜನಸೇವೆಯ ಮುಖಾಂತರ ಪಕ್ಷ ಗಳಿಸಿರುವಂತಹ ಅರ್ಹತೆಯನ್ನು ಬಿಂಬಿಸುತ್ತದೆ. ದೇಶ ಮೊದಲು, ನಂತರ ಪಕ್ಷ ಎಂಬ ಪಕ್ಷ ನಮ್ಮದು. ಮೌಲ್ಯಾಧಾರಿತ ರಾಜಕಾರಣ ಮಾಡಲು ಭಾಜಪ ಮಾತ್ರ ಸಾಧ್ಯ. ವಿಷಯಾಧಾರಿತ ಹೋರಾಟಗಳಿಗೆ ನ್ಯಾಯ ಒದಗಿಸುವ ನಾಯಕರು ಇಂದು ಕೇಂದ್ರ ಹಾಗೂ ರಾಜ್ಯಸರ್ಕಾರದಲ್ಲಿದ್ದಾರೆ. ಜನಸಾಮಾನ್ಯರು, ರೈತರು, ದುಡಿಯುವ ವರ್ಗ, ಮಹಿಳೆಯರು ಎಲ್ಲ ವರ್ಗದ ಜನರು ಭಾಜಪ ದ ಬಗ್ಗೆ ಆಶಾಭಾವನೆಯನ್ನು ಹೊಂದಿದ್ದಾರೆ. ಭಾರತವನ್ನು ಬಲಿಷ್ಟವಾಗಿಸುವ ಶಕ್ತಿ ಭಾಜಪ ಪಕ್ಷಕ್ಕೆ ಮಾತ್ರ ಇದೆ. ಭಾಜಪ ಪಕ್ಷದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಸಂವಿಧಾನದಲ್ಲಿ ಬದಲಾವಣೆ ಮಾಡಲಾಗಿದೆ ಎಂಬ ಆರೋಪ ಕೇಳಿಬರುತ್ತದೆ. ಪ್ರಧಾನಿ ಮೋದಿಯವರು ಸಂವಿಧಾನ ನನ್ನ ಧರ್ಮ ಗ್ರಂಥ ಎಂದು ಹೇಳಿದ್ದಾರೆ. ಪ್ರಜಾಪ್ರಭುತ್ವ ಒಂದು ಮಂದಿರ ಎಂಬ ಭಾವನೆಯಲ್ಲಿ ಆಡಳಿತ ನಡೆಸಲಾಗುತ್ತಿದೆ. ಡಾ.ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಆಡಳಿತದಲ್ಲಿ ಅಳವಡಿಸಿಕೊಳ್ಳಲಾಗಿದೆ. ಸಮಾನ ಅವಕಾಶ, ಪ್ರತಿಯೊಬ್ಬರು ಸ್ವಾಭಿಮಾನದ ಬದುಕು ನಡೆಸಬೇಕೆಂಬುದು ನಮ್ಮ ಪಕ್ಷದ ಗುರಿಯಾಗಿದೆ ಎಂದರು ಬೊಮ್ಮಾಯಿ.

ಮೀಸಲಾತಿ ಹೆಚ್ಚಳ ನಿರ್ಣಯ ಕ್ರಾಂತಿಕಾರಿ ಹೆಜ್ಜೆ
4 ದಶಕಗಳ ಕಾಲ ಎಸ್ ಸಿ ಎಸ್ ಟಿ ಮೀಸಲಾತಿ ಬೇಡಿಕೆ ಹೆಚ್ಚಿಸಲಿಲ್ಲ. ಮೀಸಲಾತಿ ಹೆಚ್ಚಳ ನಿರ್ಣಯ ಸರ್ಕಾರದ ಕ್ರಾಂತಿಕಾರಿ ಹೆಜ್ಜೆಯಾಗಿದೆ.ಈ ವರ್ಗಗಳಿಗೆ ಶಿಕ್ಷಣ, ಉದ್ಯೋಗ, ಸಬಲೀಕರಣವನ್ನು ರಾಜ್ಯದಲ್ಲಿ ಭಾಜಪ ಸರ್ಕಾರ ಒದಗಿಸುತ್ತಿದೆ. ಭಾಜಪ ಪಕ್ಷ ಬೂತ್ ಮಟ್ಟದಿಂದ ಗಟ್ಟಿಯಿದ್ದು, ಪಕ್ಷದ ಸಿದ್ಧಾಂತ, ವಿಚಾರಧಾರೆಗಳು, ಜನಸ್ಪಂದನೆಯೂ ಗಟ್ಟಿಯಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲಕುಮಾರ್ ಸುರಾಣ, ಮಾಜಿ ಶಾಸಕ ಶ್ರೀಕಾಂತ್ ಕುಲಕರ್ಣಿ ಮತ್ತಿತರರು ಹಾಜರಿದ್ದರು.

ಇದನ್ನೂ ಓದಿ | Incite Violence | ಯಾವ ಧರ್ಮವೂ ಹಿಂಸೆಯನ್ನು ಪ್ರಚೋದಿಸುವುದಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ

Exit mobile version