Site icon Vistara News

Union Budget 2024: ಪ್ರಧಾನಿ ಮೋದಿ ಕುರ್ಚಿ ಉಳಿಸೋಕೆ ಆಂಧ್ರ, ಬಿಹಾರಕ್ಕೆ ವಿಶೇಷ ಅನುದಾನ: ಸಿಎಂ ಕಿಡಿ

CM Siddaramaiah

ಬೆಂಗಳೂರು: ಕೇಂದ್ರ ಬಜೆಟ್‌ನಲ್ಲಿ (Union Budget 2024) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯಕ್ಕೆ ಚೊಂಬು ಕೊಟ್ಟಿದ್ದಾರೆ. ಪ್ರಧಾನ ಮಂತ್ರಿಗಳ ಕುರ್ಚಿ ಉಳಿಸೋಕೆ ಆಂಧ್ರ ಮತ್ತು ಬಿಹಾರಕ್ಕೆ ವಿಶೇಷ ಅನುದಾನ ಕೊಟ್ಟಿದ್ದಾರೆ. ಕರ್ನಾಟಕದಿಂದ ಆರಿಸಿ ಹೋಗಿರುವ ನಿರ್ಮಲಾ ಸೀತಾರಾಮನ್ ರಾಜ್ಯದ ನಿರೀಕ್ಷೆ ಸುಳ್ಳು ಮಾಡಿ ಅನ್ಯಾಯ ಎಸಗಿದ್ದಾರೆ. ರಾಜ್ಯದಿಂದ ನಾವು ಇಟ್ಟ ಬೇಡಿಕೆಗಳು, ಅವರೇ ಕೊಟ್ಟ ಭರವಸೆಗಳು ಎರಡನ್ನೂ ಈಡೇರಿಸಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಕೇಂದ್ರ ಬಜೆಟ್ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕಕ್ಕೆ ನಾವು 5000 ಕೋಟಿ ಕೊಟ್ಡಿದ್ದೇವೆ. ಇದಕ್ಕೆ ಹೊಂದಾಣಿಕೆ ಅನುದಾನ ಕೇಳಿದ್ದೆವು. ಇದನ್ನೂ ಕೊಡಲಿಲ್ಲ. ಈ ಬಜೆಟ್‌ನಲ್ಲಿ ರೈತರಿಗೆ ದೊಡ್ಡ ಅನ್ಯಾಯ ಮಾಡಿದ್ದಾರೆ. ರೈತರು 5 ವರ್ಷಗಳಿಂದ MSP ಗೆ ಕಾಯ್ದೆ ಮಾಡಬೇಕು ಎನ್ನುವ ಡಿಮ್ಯಾಂಡ್ ಇಟ್ಟಿದ್ದರು. ಈ ಬಗ್ಗೆ ಬಜೆಟ್ ನಲ್ಲಿ ಚಕಾರವನ್ನೇ ಎತ್ತಿಲ್ಲ ಎಂದು ಟೀಕಿಸಿದರು.

ಶಿಕ್ಷಣಕ್ಕೆ ಫೆಬ್ರವರಿ ಬಜೆಟ್‌ನಲ್ಲಿ 1.21 ಲಕ್ಷ ಕೋಟಿ ಕೊಟ್ಟು, ಈಗ ಇದನ್ನು 1.25 ಮಾಡಿದ್ದಾರೆ ಅಷ್ಟೆ. ಐಟಿ ಮತ್ತು ಸಂವಹನ ಕ್ಷೇತ್ರಕ್ಕೆ ಫೆಬ್ರವರಿಯಲ್ಲಿ 1.37 ಲಕ್ಷ ಕೋಟಿ ಇತ್ತು. ಈಗ ಇದನ್ನು 1.16 ಲಕ್ಷ ಕೋಟಿಗೆ ಇಳಿಸಿದ್ದಾರೆ. ಐದು ಜನ‌ ಕೇಂದ್ರ ಸಚಿವರು ರಾಜ್ಯದವರು. ಈ‌ ಐದೂ ಮಂದಿ ರಾಜ್ಯಕ್ಕೆ ಅನುಕೂಲ ಮಾಡಿಸುವಲ್ಲಿ ವಿಫಲರಾಗಿದ್ದಾರೆ. ಶಿಕ್ಷಣ, ಆರೋಗ್ಯ, ರಕ್ಷಣಾ ಕ್ಷೇತ್ರಗಳಿಗೆ ಫೆಬ್ರವರಿಗಿಂತ ಗಣನೀಯವಾಗಿ ಅನುದಾನಗಳನ್ನು ಕಡಿತಗೊಳಿಸಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ |Union Budget 2024 : ಕೇಂದ್ರ ಬಜೆಟ್​ನಲ್ಲಿ ಕರ್ನಾಟಕಕ್ಕೆ ‘ಚೊಂಬು’ ಎಂದ ಡಿಸಿಎಂ ಡಿ.ಕೆ. ಶಿವಕುಮಾರ್​

ಫೆರಿಫೆರಲ್ ರಿಂಗ್ ರಸ್ತೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಗೆ ನಿರ್ಮಲಾ ಸೀತರಾಮನ್ ಅವರು ತಾವೇ ಈ ಹಿಂದೆ ಘೋಷಿಸಿದ್ದ ಅನುದಾನವನ್ನೂ ನೀಡಿಲ್ಲ. ಎಸ್‌ಸಿ, ಎಸ್‌ಟಿ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಅನುದಾನದಲ್ಲೂ ಗಣನೀಯವಾಗಿ ಕಡಿತಗೊಳಿಸಿರುವುದು ಈ ಸಮುದಾಯಗಳಿಗೆ ಎಸಗಿರುವ ದ್ರೋಹ. ಮೋದಿ ಸರ್ಕಾರ ಮತ್ತು ಈ ಸರ್ಕಾರದ ಬಜೆಟ್ ಮೇಲೆ ಯಾವ ಭರವಸೆಗಳೂ ಇಲ್ಲ. ಹಿಂದಿನ ಬಜೆಟ್‌ನಲ್ಲಿ ಅವರೇ ಘೋಷಿಸಿದ್ದನ್ನೇ ಇವತ್ತಿನವರೆಗೂ ಜಾರಿ ಮಾಡಿಯೇ ಇಲ್ಲ. ಹೀಗಾಗಿ ಈ ಬಾರಿ ಕೈಗಾರಿಕಾ ಕಾರಿಡಾರ್ ಬಗ್ಗೆ ಪ್ರಸ್ತಾಪಿಸಿರುವುದು ಕೇವಲ ಘೋಷಣೆಯಾಗಿ ಮಾತ್ರ ಉಳಿಯಲಿದೆ ಎಂದು ತಿಳಿಸಿದರು.

ಬಜೆಟ್ ಪೂರ್ವ ಸಭೆಗೆ ನಿರ್ಮಲಾ ಸೀತರಾಮನ್ ಅವರು ನಮಗೂ ಆಹ್ವಾನಿಸಿದ್ದರು. ಈಗ ನೋಡಿದರೆ ಯಾವ ಸಾರ್ಥಕತೆಗೆ ಕರೆದದ್ದು ಅನ್ನಿಸುತ್ತಿದೆ. ದಕ್ಷಿಣ ಭಾರತದಲ್ಲಿ ಆಂಧ್ರ ಹೊರತುಪಡಿಸಿ ಉಳಿದ ಯಾವ ರಾಜ್ಯಗಳಿಗೂ ಏನೂ ಸಿಕ್ಕಿಲ್ಲ ಎಂದು ಕಿಡಿಕಾರಿದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಬಜೆಟ್‌ (Union Budget 2024) ಮಂಡನೆ ಮಾಡಿದ್ದು, ಬಜೆಟ್‌ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ. ಇದರ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಸುದ್ದಿಗೋಷ್ಠಿ ನಡೆಸಿ, ಕೇಂದ್ರದ ಬಜೆಟ್‌ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಆಂಧ್ರಪ್ರದೇಶ ಹಾಗೂ ಬಿಹಾರ ಹೊರತುಪಡಿಸಿ ಬೇರೆ ರಾಜ್ಯಗಳಿಗೆ ಬಜೆಟ್‌ನಿಂದ ಯಾವುದೇ ಅನುಕೂಲ ಆಗಿಲ್ಲ. ಕರ್ನಾಟಕಕ್ಕಂತೂ ಭಾರಿ ಅನ್ಯಾಯವಾಗಿದೆ” ಎಂಬುದಾಗಿ ಹೇಳಿದರು. ಸುದ್ದಿಗೋಷ್ಠಿ ನಡೆಸುವಾಗ ಅವರು ತಿಂಡಿ ತಿನ್ನುತ್ತಲೇ ಸುದ್ದಿಗಾರರೊಂದಿಗೆ ಮಾತನಾಡಿದರು. ಕೊನೆಗೆ ಸುದ್ದಿಗಾರರಿಗೂ ತಿಂಡಿ ತಿನ್ನಿ ಎಂದರು.

ಇದನ್ನೂ ಓದಿ | Union Budget 2024: ಬಜೆಟ್‌ನಲ್ಲಿ ಬಿಹಾರ, ಆಂಧ್ರಪ್ರದೇಶಕ್ಕೆ ಬಂಪರ್‌ ಕೊಡುಗೆ: ಇಲ್ಲಿದೆ ನಗೆಯುಕ್ಕಿಸುವ ಮೀಮ್ಸ್‌

ಕೇಂದ್ರದ ಬಜೆಟ್‌ನಿಂದ ಕರ್ನಾಟಕಕ್ಕೆ ಯಾವುದೇ ರೀತಿಯಿಂದ ಅನುಕೂಲವಾಗಿಲ್ಲ. ಕೈಗಾರಿಕೆ, ರೈಲ್ವೆ ಸೇರಿ ಯಾವುದೇ ಕ್ಷೇತ್ರಗಳಿಗೂ ಹೆಚ್ಚಿನ ಅನುದಾನ ಕೊಟ್ಟಿಲ್ಲ. ರಾಯಚೂರಿನಲ್ಲಿ ಒಂದು ಏಮ್ಸ್‌ ನಿರ್ಮಿಸಿ ಎಂದು ಬಹಳ ವರ್ಷಗಳಿಂದ ಕೇಳುತ್ತಿದ್ದೇವೆ. ಆದರೆ, ಬಜೆಟ್‌ನಲ್ಲಿ ಕರ್ನಾಟಕಕ್ಕೆ ಏನೂ ಕೊಟ್ಟಿಲ್ಲ. ಒಟ್ಟಿನಲ್ಲಿ ಈ ಬಜೆಟ್‌ ನಿರಾಶಾದಾಯಕ, ನೀರಸವಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ರೈತರಿಗೆ ಭಾರಿ ಅನ್ಯಾಯವಾಗಿದೆ. ಅವರಿಗೆ ಕೇಂದ್ರ ಸರ್ಕಾರ ಪಂಗನಾಮ ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Exit mobile version