Site icon Vistara News

CM Siddaramaiah: ರೈತರು, ರಾಜ್ಯಕ್ಕೆ ಕೇಂದ್ರ ಪಂಗನಾಮ; ತಿಂಡಿ ತಿನ್ನುತ್ತಲೇ ಬಜೆಟ್‌ ಬಗ್ಗೆ ಸಿದ್ದರಾಮಯ್ಯ ಆಕ್ರೋಶ

CM Siddaramaiah

Union Budget 2024: This Is Disappointing Budget From Centre, Says Karnataka CM Siddaramaiah

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಬಜೆಟ್‌ (Union Budget 2024) ಮಂಡನೆ ಮಾಡಿದ್ದು, ಬಜೆಟ್‌ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ. ಇದರ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಸುದ್ದಿಗೋಷ್ಠಿ ನಡೆಸಿ, ಕೇಂದ್ರದ ಬಜೆಟ್‌ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಆಂಧ್ರಪ್ರದೇಶ ಹಾಗೂ ಬಿಹಾರ ಹೊರತುಪಡಿಸಿ ಬೇರೆ ರಾಜ್ಯಗಳಿಗೆ ಬಜೆಟ್‌ನಿಂದ ಯಾವುದೇ ಅನುಕೂಲ ಆಗಿಲ್ಲ. ಕರ್ನಾಟಕಕ್ಕಂತೂ ಭಾರಿ ಅನ್ಯಾಯವಾಗಿದೆ” ಎಂಬುದಾಗಿ ಹೇಳಿದರು. ಸುದ್ದಿಗೋಷ್ಠಿ ನಡೆಸುವಾಗ ಅವರು ತಿಂಡಿ ತಿನ್ನುತ್ತಲೇ ಸುದ್ದಿಗಾರರೊಂದಿಗೆ ಮಾತನಾಡಿದರು. ಕೊನೆಗೆ ಸುದ್ದಿಗಾರರಿಗೂ ತಿಂಡಿ ತಿನ್ನಿ ಎಂದರು.

“ಕೇಂದ್ರದ ಬಜೆಟ್‌ನಿಂದ ಕರ್ನಾಟಕಕ್ಕೆ ಯಾವುದೇ ರೀತಿಯಿಂದ ಅನುಕೂಲವಾಗಿಲ್ಲ. ಕೈಗಾರಿಕೆ, ರೈಲ್ವೆ ಸೇರಿ ಯಾವುದೇ ಕ್ಷೇತ್ರಗಳಿಗೂ ಹೆಚ್ಚಿನ ಅನುದಾನ ಕೊಟ್ಟಿಲ್ಲ. ರಾಯಚೂರಿನಲ್ಲಿ ಒಂದು ಏಮ್ಸ್‌ ನಿರ್ಮಿಸಿ ಎಂದು ಬಹಳ ವರ್ಷಗಳಿಂದ ಕೇಳುತ್ತಿದ್ದೇವೆ. ಆದರೆ, ಬಜೆಟ್‌ನಲ್ಲಿ ಕರ್ನಾಟಕಕ್ಕೆ ಏನೂ ಕೊಟ್ಟಿಲ್ಲ. ಒಟ್ಟಿನಲ್ಲಿ ಈ ಬಜೆಟ್‌ ನಿರಾಶಾದಾಯಕ, ನೀರಸವಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ರೈತರಿಗೆ ಭಾರಿ ಅನ್ಯಾಯವಾಗಿದೆ. ಅವರಿಗೆ ಕೇಂದ್ರ ಸರ್ಕಾರ ಪಂಗನಾಮ ಹಾಕಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂಪಾಯಿ ಕೊಡುತ್ತೇವೆ ಎಂಬುದಾಗಿ ನಿರ್ಮಲಾ ಸೀತಾರಾಮನ್‌ ಅವರು ಹೇಳಿದ್ದರು. ಈ ಬಜೆಟ್‌ನಲ್ಲಾದರೂ ನಮಗೆ 5,300 ಕೋಟಿ ರೂ. ಕೊಡಿ ಎಂಬುದಾಗಿ ಮನವಿ ಮಾಡಿದ್ದೆವು. ಮೇಕೆದಾಟು, ಮಹದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆ, ಬೆಂಗಳೂರು ನಗರಾಭಿವೃದ್ಧಿ ಯೋಜನೆ, 15ನೇ ಹಣಕಾಸು ಆಯೋಗದ ಶಿಫಾರಸುಗಳ ಜಾರಿ ಸೇರಿ ಹಲವು ಬೇಡಿಕೆಗಳನ್ನು ಇಡಲಾಗಿತ್ತು. ಒಟ್ಟು 11,495 ಕೋಟಿ ರೂ. ಕೊಡಿ ಎಂದು ಕೇಳಿದ್ದೆವು. ಆದರೆ, ಕೇಂದ್ರ ಸರ್ಕಾರವು ಯಾವುದೇ ರೀತಿಯ ಹಣ ಬಿಡುಗಡೆ ಮಾಡಿಲ್ಲ” ಎಂದು ಹೇಳಿದರು.

ಬಿಹಾರ, ಆಂಧ್ರಕ್ಕೆ ಮಾತ್ರ ಬಜೆಟ್‌ನಿಂದ ಅನುಕೂಲ

“ಬಿಹಾರ ಹಾಗೂ ಆಂಧ್ರಪ್ರದೇಶವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಬಜೆಟ್‌ ಮಂಡಿಸಿದೆ. ಆದರೆ, ಕರ್ನಾಟಕಕ್ಕೆ ಬಜೆಟ್‌ನಿಂದ ಯಾವುದೇ ಪ್ರಯೋಜನವಾಗಿಲ್ಲ. ನಿರ್ಮಲಾ ಸೀತಾರಾಮನ್‌ ಅವರು ಕರೆದ ಸಭೆಯಲ್ಲಿ ನಾವು ನೀಡಿದ ಬೇಡಿಕೆಗಳನ್ನು ಈಡೇರಿಸಿಲ್ಲ. ಬಜೆಟ್‌ಗೂ ಮುನ್ನ ಅವರೇ ಕರೆದ ಸಭೆಯಲ್ಲಿ ಕರ್ನಾಟಕಕ್ಕೆ ಏನು ಬೇಕು, ಬೇಡಿಕೆಗಳು ಏನು ಎಂಬುದನ್ನು ತಿಳಿಸಿದ್ದೆವು. ಆದರೆ, ಒಂದೇ ಒಂದು ಬೇಡಿಕೆಯನ್ನು ಅವರು ಈಡೇರಿಸಿಲ್ಲ” ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

“ಬಿಜೆಪಿಗೆ ಕೇಂದ್ರದಲ್ಲಿ ಅಧಿಕಾರ ಕಳೆದುಕೊಳ್ಳುವ ಭೀತಿ ಇದೆ. ರಾಜಕೀಯ ಅಸ್ತಿತ್ವಕ್ಕಾಗಿ ಅದು ಹೋರಾಡುತ್ತಿದೆ. ಇದೇ ಕಾರಣಕ್ಕಾಗಿ, ಹೆಚ್ಚಿನ ಯೋಜನೆ, ಹಣವನ್ನು ಆಂಧ್ರಪ್ರದೇಶ ಹಾಗೂ ಬಿಹಾರಕ್ಕೆ ನೀಡಲಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಇಂತಹ ನಡೆ ಅನುಸರಿಸುವುದು ಮಾರಕವಾಗಿದೆ. ನಮಗೆ ಕೇಂದ್ರ ಸರ್ಕಾರದ ಬಜೆಟ್‌ ಮೇಲೆ ವಿಶ್ವಾಸವೇ ಹೊರಟು ಹೋಗಿದೆ” ಎಂದು ಹೇಳಿದರು.

ಇದನ್ನೂ ಓದಿ: Union Budget 2024 : ಬಜೆಟ್​ನಲ್ಲಿ ದೊಡ್ಡ ಮೊತ್ತ ಮೀಸಲಾಗಿರುವುದು ಸಾಲದ ಬಡ್ಡಿ ಕಟ್ಟಲು!

Exit mobile version