ಬೆಂಗಳೂರು: ಕೇಂದ್ರ ಗೃಹ ಸಚಿವರ ಪದಕಕ್ಕೆ ಈ ಬಾರಿ 140 ಪೊಲೀಸ್ ಅಧಿಕಾರಿಗಳು ಆಯ್ಕೆಯಾಗಿದ್ದು, ಈ ಪೈಕಿ ಕರ್ನಾಟಕದ ಐವರು ಪೊಲೀಸ್ ಅಧಿಕಾರಿಗಳಿಗೆ ಪದಕ ದೊರೆತಿದೆ. ಅಪರಾಧ ಪ್ರಕರಣಗಳ ಅತ್ಯುತ್ತಮ ತನಿಖೆಗಾಗಿ ಪ್ರತಿ ವರ್ಷ ಕೇಂದ್ರ ಗೃಹ ಇಲಾಖೆಯಿಂದ ಪದಕ (Police Medal) ನೀಡಲಾಗುತ್ತದೆ.
ದೇಶಾದ್ಯಂತ 140 ಮಂದಿ ಅತ್ಯುತ್ತಮ ಅಧಿಕಾರಿಗಳನ್ನು 2023ನೇ ಸಾಲಿನ ಪದಕಕ್ಕೆ ಆಯ್ಕೆ ಮಾಡಲಾಗಿದ್ದು, ಇದರಲ್ಲಿ ಸಿಬಿಐನ 15, ರಾಷ್ಟ್ರೀಯ ತನಿಖಾ ದಳ (ಎನ್‌ಐಎ) 12, ಉತ್ತರ ಪ್ರದೇಶದ 10, ಕೇರಳ ಮತ್ತು ರಾಜಸ್ಥಾನದ ತಲಾ 9 ಪೊಲೀಸರು ಸೇರಿದಂತೆ ಒಟ್ಟು 140 ಪೊಲೀಸರು ಇದ್ದಾರೆ. ಇದರಲ್ಲಿ 22 ಮಹಿಳೆಯರು ಇರುವುದು ವಿಶೇಷವಾಗಿದೆ.
ಪ್ರತಿ ವರ್ಷ ಕೇಂದ್ರ ಗೃಹ ಇಲಾಖೆಯು ಕ್ಲಿಷ್ಟಕರ ಪ್ರಕರಣಗಳನ್ನು ಭೇದಿಸಿದ ಅಧಿಕಾರಿಗಳಿಗೆ ಈ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಅಪರಾಧದ ತನಿಖೆಯ ಉನ್ನತ ವೃತ್ತಿಪರ ಮಾನದಂಡಗಳನ್ನು ಉತ್ತೇಜಿಸುವ ಹಾಗೂ ತನಿಖೆಯಲ್ಲಿ ಉತ್ಕೃಷ್ಟತೆಯನ್ನು ಗುರುತಿಸುವ ಉದ್ದೇಶದಿಂದ 2018ರಲ್ಲಿ ಈ ಪದಕವನ್ನು ಸ್ಥಾಪಿಸಲಾಯಿತು. ಪ್ರತಿ ವರ್ಷ ಆ.12 ರಂದು ಪ್ರಶಸ್ತಿ ಪಡೆದವರ ಹೆಸರುಗಳನ್ನು ಘೋಷಣೆ ಮಾಡಲಾಗುತ್ತದೆ.
ಇದನ್ನೂ ಓದಿ | Independence Day 2023 : ಭಾರತದ ಹೆಮ್ಮೆಯಿದು ತ್ರಿವರ್ಣ; ನಮ್ಮ ಧ್ವಜದ ಕುರಿತ ಈ ಸಂಗತಿಗಳು ತಿಳಿದಿರಲಿ…
ಆಯ್ಕೆಯಾದ ರಾಜ್ಯದ ಪೊಲೀಸರು
ಡಿವೈಎಸ್‌ಪಿ ಶಂಕರ್ ಎಂ.ರಾಗಿ, ತಾವರೆಕೆರೆ ಠಾಣೆ ಇನ್ಸ್‌ಪೆಕ್ಟರ್ ರಾಮಪ್ಪ ಗುತ್ತೇದಾರ್, ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆ ಇನ್ಸ್‌ಪೆಕ್ಟರ್ ಶಿವಸ್ವಾಮಿ ಸಿ.ಬಿ, ಶಿವಮೊಗ್ಗದ ವಿನೋಬಾನಗರ ಠಾಣೆಯ ಇನ್ಸ್‌ಪೆಕ್ಟರ್ ರುದ್ರೇಗೌಡ ಆರ್.ಪಾಟೀಲ್, ಬೆಂಗಳೂರಿನ ಆರ್‌ಎಂಸಿ ವಾರ್ಡ್ ಠಾಣೆಯ ಇನ್ಸ್‌ಪೆಕ್ಟರ್ ಪಿ.ಸುರೇಶ್ ಅವರು ಕೇಂದ್ರ ಗೃಹ ಸಚಿವರ ಪದಕಕ್ಕೆ ಆಯ್ಕೆಯಾಗಿದ್ದಾರೆ.