ಹುಬ್ಬಳ್ಳಿ: ನಟ ದರ್ಶನ್ ವಿಚಾರವಾಗಿ ಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಗೆ ಪತ್ರ ಬರೆಯುವುದಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ತಿಳಿಸಿದರು. ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ನಟ ದರ್ಶನ್ ಪ್ರಕರಣದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಜೈಲಿನಲ್ಲಿ ಇರುವ ಕೊಲೆ ಆರೋಪಿ ದರ್ಶನ್‌ಗೆ ರಾಜಾತಿಥ್ಯ ನೀಡುತ್ತಿರುವ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಸಚಿವರು, ದರ್ಶನ್ ಪ್ರಕರಣದಲ್ಲಿ ರಾಜ್ಯ ಸರ್ಕಾರಕ್ಕೆ ಗಂಭೀರತೆಯೇ ಇಲ್ಲವೆಂದು ಕಿಡಿ ಕಾರಿದರು.
ದರ್ಶನ್‌ಗೆ ಜೈಲಲ್ಲಿ ರಾಜಾತಿಥ್ಯ ನೀಡಿದ ಹಿನ್ನೆಲೆಯಲ್ಲಿ ಈಗ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿದ್ದಾರೆ. ಇಷ್ಟು ದಿನ ಸರ್ಕಾರ ಏನು ಕತ್ತೆ ಕಾಯುತ್ತಿತ್ತಾ? ಎಂದು ಪ್ರಶ್ನಿಸಿದ ಜೋಶಿ, ಇದರಲ್ಲಿ ಕೆಲವು ರಾಜಕಾರಣಿಗಳ ಹಸ್ತಕ್ಷೇಪವೂ ಇದೆ ಎಂದು ಆರೋಪಿಸಿದರು.
ಇದನ್ನೂ ಓದಿ: Google Map: ಗೂಗಲ್ ಮ್ಯಾಪ್‌ನಲ್ಲಿ ಕೇಳುವ ಧ್ವನಿ ಯಾರದಿರಬಹುದೆಂದು ಎಂದಾದರೂ ಯೋಚಿಸಿದ್ದೀರಾ?
ದರ್ಶನ್ ಪ್ರಕರಣದಲ್ಲಿ ಸಾಕ್ಷಿ ನಾಶ ಮಾಡಲು ಪ್ಲ್ಯಾನ್ ಮಾಡಿದಂತಿದೆ. ಇದನ್ನೆಲ್ಲ ನೋಡಿದರೆ ಸರ್ಕಾರವೇ ದರ್ಶನ್ ರಕ್ಷಣೆಗೆ ನಿಂತಂತಿದೆ ಎಂದು ಅನಿಸುತ್ತದೆ. ಸರ್ಕಾರ ಏನೋ ಸಂಚು ಮಾಡುತ್ತಿದೆ ಎಂದು ಸಚಿವ ಪ್ರಲ್ಹಾದ್ ಜೋಶಿ ಶಂಕೆ ವ್ಯಕ್ತಪಡಿಸಿದರು.