Site icon Vistara News

Pralhad joshi: ಕಾಂಗ್ರೆಸಿಗರಿಗೆ ರಾಮನ ಹೆಸರೆಂದರೆ ಅಲರ್ಜಿ; ಪ್ರಲ್ಹಾದ್‌ ಜೋಶಿ ವಾಗ್ದಾಳಿ

Union Minister Pralhad Joshi slams the state Congress government

ಚಿತ್ರದುರ್ಗ: ಕಾಂಗ್ರೆಸ್ಸಿಗೆ ರಾಮನ ಹೆಸರೆಂದರೆ ಅಲರ್ಜಿ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad joshi) ವಾಗ್ದಾಳಿ ಮಾಡಿದರು.

ಚಿತ್ರದುರ್ಗದ ಭೋವಿ ಗುರುಪೀಠದಲ್ಲಿ ಶನಿವಾರ ಆಯೋಜಿಸಿದ್ದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ದೀಕ್ಷಾ ರಜತ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಮನಗರ ಜಿಲ್ಲೆ ಮರುನಾಮಕಾರಣ ವಿಚಾರದ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಕಾಂಗ್ರೆಸ್‌ನವರಿಗೆ ರಾಮನ ಹೆಸರು ಕೇಳಿದರೆ ಅಲರ್ಜಿ ಆಗಲಿದೆ ಎಂದ ಅವರು, ರಾಮನ ವಿಷಯ ಬಂದಾಗ ಈ ರೀತಿಯ ಕೆಲಸಗಳಿಗೆ ಕೈ ಹಾಕುತ್ತಾರೆ. ಮುಂದಿನ ದಿನಗಳಲ್ಲಿ ಇದಕ್ಕೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಸರ್ಕಾರದ ಬೆದರಿಕೆ ತಂತ್ರ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ, ತನ್ನ ಹಗರಣಗಳನ್ನು ಮುಚ್ಚಿಹಾಕಿಕೊಳ್ಳಲು ಬೆದರಿಕೆ ತಂತ್ರ ಅನುಸರಿಸುತ್ತಿದೆ. ಕಾಂಗ್ರೆಸ್ ಸರ್ಕಾರದಲ್ಲಿನ ಸಚಿವರ ಒಂದೊಂದೇ ಹಗರಣಗಳು ಬಯಲಿಗೆ ಬರುತ್ತಲೇ, ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರದ ಹಗರಣಗಳನ್ನು ಬಯಲಿಗೆಳೆಯುತ್ತೇವೆ ಎಂದು ಬೆದರಿಕೆ ತಂತ್ರ ಹೆಣೆಯುತ್ತಿದ್ದಾರೆ ಎಂದರು.

ಇದನ್ನೂ ಓದಿ: Chenab Bridge: ಐಫೆಲ್ ಟವರ್‌ಗಿಂತ ಎತ್ತರದ ಚೆನಾಬ್ ಸೇತುವೆ ಆಗಸ್ಟ್ 15ರಂದು ಉದ್ಘಾಟನೆಗೆ ಸಜ್ಜು!

ಹಿಂದಿನ ಸರ್ಕಾರದ ಹಗರಣಗಳ ತನಿಖೆ ಮಾಡುತ್ತೇವೆ ಎಂದು ಬೆದರಿಸುವ ಕೆಲಸ ಮಾಡಲಾಗುತ್ತಿದೆ. ಹಾಗಾದರೆ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ವರ್ಷವಾದರೂ ಬಿಜೆಪಿ ಸರ್ಕಾರದ ಹಗರಣಗಳ ಬಗ್ಗೆ ಈವರೆಗೆ ಏಕೆ ತನಿಖೆ ಕೈಗೊಂಡಿಲ್ಲ? ಎಂದು ಜೋಶಿ ಪ್ರಶ್ನಿಸಿದರು.

ಎಫ್‌ಐಆರ್ ಹಾಕಿಲ್ಲವೇಕೆ?

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಇದುವರೆಗೂ ನಾಗೇಂದ್ರ ಮತ್ತು ದದ್ದಲ್ ಮೇಲೆ ಎಫ್‌ಐಆರ್ ಹಾಕಿಲ್ಲವೇಕೆ? ಯಾವ ಕಾರಣಕ್ಕೆ ಬಿಟ್ಟಿದ್ದೀರಿ ಎಂಬುದನ್ನು ಮೊದಲು ಬಹಿರಂಗಪಡಿಸಿ ಎಂದು ಸಚಿವ ಪ್ರಲ್ಹಾದ್‌ ಜೋಶಿ ಸವಾಲು ಹಾಕಿದರು.

ಸಚಿವರ ಮೌಖಿಕ ಆದೇಶದ ಮೇರೆಗೆ ವಾಲ್ಮೀಕಿ ನಿಗಮದ ಹಣ ವರ್ಗಾವಣೆ ಮಾಡಲಾಗಿದೆ ಎಂದು ಚಂದ್ರಶೇಖರ ಡೆತ್ ನೋಟ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಹಾಗಿದ್ದರು ಭ್ರಷ್ಟಾಚಾರಿಗಳ ರಕ್ಷಣೆಗೆ ನಿಂತಂತಿದೆ ಈ ಸರ್ಕಾರ ಎಂದು ಆರೋಪಿಸಿದ ಅವರು, ವಾಲ್ಮೀಕಿ ನಿಗಮದ ಹಣವನ್ನು ಬಳ್ಳಾರಿ ಮತ್ತು ತೆಲಂಗಾಣದ ಚುನಾವಣೆಗೆ ಖರ್ಚು ಮಾಡಲಾಗಿದೆ ಎಂದು ಪ್ರಲ್ಹಾದ್‌ ಜೋಶಿ ದೂರಿದರು.

ಇದನ್ನೂ ಓದಿ: HD Kumaraswamy: ಪರಿಹಾರ ಕಾರ್ಯದಲ್ಲಿ ರಾಜಕಾರಣ ಮಾಡಬಾರದು; ಕುಮಾರಸ್ವಾಮಿ ಸಲಹೆ

ಸಿಬಿಐಗೆ ವಹಿಸಲಿ

ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇರ ಪಾತ್ರ ವಹಿಸಿದ್ದಾರೆ. ಹಾಗಾಗಿ ಈ ಹಗರಣವನ್ನು ಸಿಬಿಐಗೆ ವಹಿಸಬೇಕು ಎಂದು ಸಚಿವರು ಒತ್ತಾಯಿಸಿದರು.

ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರ ಸಮಾಜಮುಖಿ ಹಾಗೂ ಸಂಘಟನಾತ್ಮಕ ಕಾರ್ಯವೈಖರಿ ಭೋವಿ ಜನಾಂಗದ ಅಭಿವೃದ್ಧಿಗೆ ಸದಾ ಪೂರಕವಾಗಿವೆ ಎಂದು ಹೇಳಿದರು.

ಭೋವಿ ಗುರುಪೀಠ ಮಾನವೀಯ ಗುಣ ಹೊಂದಿರುವಂತ, ಅಕ್ಷರವಂಚಿತ ಸಮಾಜಕ್ಕೆ ಜ್ಞಾನದ ಧಾರೆಯೆರೆಯುವ ಮಹತ್ಕಾರ್ಯ ಮಾಡುತ್ತಾ ಬಂದಿದೆ ಎಂದು ಸಚಿವರು ಬಣ್ಣಿಸಿದರು.

ಶ್ರೀ ಬಾಲಿಕೆ ಅಪ್ಪಗಳು, ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು. ವಾಲ್ಮೀಕಿ ಸ್ವಾಮೀಜಿ, ಹರಿಹರ ಪಂಚಮಸಾಲಿ ಸ್ವಾಮೀಜಿ, ಗುಳ್ಳೇದಗುಡ್ಡದ ಸ್ವಾಮೀಜಿ ಉಪಸ್ಥಿತರಿದ್ದರು.

ಇದನ್ನೂ ಓದಿ: Health Tips Kannada: ಮಳೆಗಾಲದಲ್ಲಿ ಹಾಗಲಕಾಯಿ ತಿಂದರೆ ಪ್ರಯೋಜನಗಳು ಎಷ್ಟೊಂದು!

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಸಂಸದ ಮಲ್ಲೇಶ ಬಾಬು, ಮಾಜಿ ಸಚಿವ ಅರವಿಂದ ಲಿಂಬಾವಳಿ, ಶಿವರಾಜ ತಂಗಡಗಿ, ಮಾನಪ್ಪ ವಜ್ಜಲ, ಚಂದ್ರಪ್ಪ, ಹಾಗೂ ಪ್ರಮುಖರು ಪಾಲ್ಗೊಂಡಿದ್ದರು.

Exit mobile version