ಹುಬ್ಬಳ್ಳಿ: ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿಗೆ, ವಿದೇಶಾಂಗ ಸಚಿವರಿಗೆ ಪತ್ರ ಬರೆದು ರಾಜಕಾರಣ ಮಾಡಿದರೆ ಪಾಸ್‌ಪೋರ್ಟ್ ರದ್ದು ಆಗಲ್ಲ. ರದ್ದು ಮಾಡಲು ಪೊಲೀಸ್ ಇಲಾಖೆಯಿಂದ ಸೂಕ್ತ ಮನವಿ ಮಾಡಬೇಕಾಗುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದರು.
ಹುಬ್ಬಳ್ಳಿಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ರಾಜಕಾರಣ ಮಾಡಲೆಂದು ಪತ್ರ ಬರೆದರೆ ಸಾಲದು. ಪೊಲೀಸ್ ಇಲಾಖೆ ಅಧಿಕೃತ ಮಾಹಿತಿ ನೀಡಬೇಕು. ಇಲ್ಲವೇ ಕೋರ್ಟ್ ಆದೇಶ ಇರಬೇಕು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು.
ಎಸ್‌ಐಟಿ ಈಗ ಮಾಹಿತಿ ನೀಡಿದೆ
ಪ್ರಜ್ವಲ್ ರೇವಣ್ಣ ಪ್ರಕರಣ ಸಂಬಂಧ ಎಸ್‌ಐಟಿ ಈಗ ಕೇಂದ್ರಕ್ಕೆ ಮಾಹಿತಿ ನೀಡಿದೆ. ಪ್ರಕರಣ ಬೆಳಕಿಗೆ ಬಂದು ಒಂದು ತಿಂಗಳ ಬಳಿಕ ಮೇ 21ರಂದು ಕೇಂದ್ರಕ್ಕೆ ಅಧಿಕೃತ ಮಾಹಿತಿ ನೀಡಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: Uttara Kannada News: ಕಾರವಾರ ನಗರಸಭೆ ತೆರಿಗೆ ಸಂಗ್ರಹಕ್ಕೆ ವೇಗ: ಡಿಸಿ
ಕೇಂದ್ರದಿಂದ ಅತ್ಯಂತ ತ್ವರಿತ ಕ್ರಮ
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕೇಂದ್ರ ಅತ್ಯಂತ ತ್ವರಿತ ಕ್ರಮ ಕೈಗೊಂಡಿದೆ. ರಾಜ್ಯ ಸರ್ಕಾರ ಕೇಂದ್ರಕ್ಕೆ ಮಾಹಿತಿ ನೀಡಿದ ಮೇಲೆ 10 ದಿನಗಳ ಸಮಯ ಇರುತ್ತದೆ. ಅದರಂತೆ ಮೇ 21ಕ್ಕೆ ಎಸ್‌ಐಟಿ ಮಾಹಿತಿ ನೀಡುತ್ತಲೇ ಮುಂದಿನ ಕ್ರಮ ಕೈಗೊಂಡಿದೆ. ಮೇ 25ಕ್ಕೆ ಅಂದರೆ ಎರಡೇ ದಿನದಲ್ಲಿ ಆಗಲೇ ಕೇಂದ್ರ ಸರ್ಕಾರ ನೋಟಿಸ್ ಕೊಟ್ಟಿದೆ. ಕಾನೂನು ಪ್ರಕಾರ ಇನ್ನು 8 ದಿನದಲ್ಲಿ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಜೋಶಿ ಸ್ಪಷ್ಟಪಡಿಸಿದರು.
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ರಾಜಕಾರಣ ಮಾಡುವುದಕ್ಕಿಂತ ಹೆಚ್ಚಾಗಿ ಗಂಭೀರವಾಗಿ ಪರಿಗಣಿಸಬೇಕು. ವಿದೇಶಕ್ಕೆ ಹಾರಿರುವ ಪ್ರಜ್ವಲ್‌ರನ್ನು ಹಿಡಿದು ಕರೆ ತಂದು ಶಿಕ್ಷೆಗೆ ಗುರಿಪಡಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಸಿಎಂ ಪತ್ರ ಬರೆದು ರಾಜಕಾರಣ ಮಾಡೋದಲ್ಲ
ಪಾಸ್‌ಪೋರ್ಟ್ ರದ್ದುಪಡಿಸುವ ವಿಚಾರದಲ್ಲಿ ಮುಖ್ಯಮಂತ್ರಿಯೇ ಅಲ್ಲ ಯಾರೂ ಪ್ರಧಾನಿಗೆ, ವಿದೇಶಾಂಗ ಸಚಿವರಿಗೆ ಪತ್ರ ಬರೆದು ರಾಜಕಾರಣ ಮಾಡೋದು ಅಲ್ಲ. ಕಾನೂನು ಪ್ರಕಾರ ಸಂಬಂಧಪಟ್ಟ ಪೊಲೀಸ್ ಇಲಾಖೆ ನೋಟಿಸ್ ನೀಡಬೇಕು. ಪ್ರಜ್ವಲ್ ತನಿಖೆಗೆ ಲಭ್ಯವಾಗುತ್ತಿಲ್ಲ ಎಂದು ಎಫ್‌ಐಆರ್ ಸಮೇತ ಕೇಂದ್ರಕ್ಕೆ ಅಧಿಕೃತ, ನಿರ್ಧಿಷ್ಟ ಮಾಹಿತಿ ನೀಡಬೇಕು ಅಥವಾ ಕೋರ್ಟ್ ಆದೇಶ ಹೊರಡಿಸಬೇಕು. ಇದು ವಕೀಲಿಕಿ ಮಾಡಿದ ಸಿಎಂಗೆ ಗೊತ್ತಿಲ್ಲವೆ ಎಂದು ಜೋಶಿ ಪ್ರಶ್ನಿಸಿದರು.
ವಿದೇಶಕ್ಕೆ ಹಾರಲು ಬಿಟ್ಟಿದ್ದೇ ರಾಜ್ಯ ಸರ್ಕಾರ
ಪ್ರಜ್ವಲ್ ರೇವಣ್ಣ ಅವರನ್ನು ವಿದೇಶಕ್ಕೆ ಹಾರಲು ಬಿಟ್ಟಿದ್ದೇ ರಾಜ್ಯ ಸರ್ಕಾರ. ಈಗ ದುರುದ್ದೇಶದಿಂದ ಕೇಂದ್ರದತ್ತ ಬೆರಳು ತೋರಿಸುತ್ತಿದೆ ಎಂದು ಜೋಶಿ ಆರೋಪಿಸಿದರು.
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಏಪ್ರಿಲ್ 21ರಂದೇ ಬೆಳಕಿಗೆ ಬಂದಿದೆ. ಪ್ರಜ್ವಲ್ ಏಪ್ರಿಲ್ 28ಕ್ಕೆ ವಿದೇಶಕ್ಕೆ ಹಾರಿದ್ದಾರೆ. ಅಷ್ಟು ದಿನ ರಾಜ್ಯ ಸರ್ಕಾರ ಏಕೆ ಸುಮ್ಮನಿತ್ತು? ಆಗಲೇ ಏಕೆ ಬಂಧಿಸಲಿಲ್ಲ? ಈ ಪ್ರಶ್ನೆಗಳಿಗೆ ಇನ್ನುವರೆಗೂ ಸಿಎಂ ಬಳಿ ಉತ್ತರವಿಲ್ಲ ಎಂದು ಜೋಶಿ ಹೇಳಿದರು.
ಕೇಂದ್ರ ರೆಡ್ ಅಲರ್ಟ್ ಘೋಷಿಸುತ್ತಿತ್ತು
ಏಪ್ರಿಲ್ 21, 22ರಂದೇ ರಾಜ್ಯ ಸರ್ಕಾರ ಭಾರತ ಸರ್ಕಾರಕ್ಕೆ ಅಧಿಕೃತ ಮಾಹಿತಿ ಕೊಟ್ಟಿದ್ದರೆ, ಕೇಂದ್ರ ಅಂದೇ ಎಲ್ಲಾ ವಿಮಾನ ನಿಲ್ದಾಣಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡುತ್ತಿತ್ತು. ಪ್ರಜ್ವಲ್ ವಿದೇಶಕ್ಕೆ ಹಾರಲು ಅವಕಾಶ ಕೊಡುತ್ತಿರಲಿಲ್ಲ. ಆದರೆ, ಪ್ರಕರಣ ಬೆಳಕಿಗೆ ಬಂದು ಒಂದು ತಿಂಗಳ ಬಳಿಕ ಕೇಂದ್ರಕ್ಕೆ ಅಧಿಕೃತ ಮಾಹಿತಿ ನೀಡಿದ್ದಾರೆ ಎಂದು ಪ್ರಲ್ಹಾದ ಜೋಶಿ ತಿಳಿಸಿದರು.
ಇದನ್ನೂ ಓದಿ: Fire Accident: ಗೇಮಿಂಗ್ ಜೋನ್‌ನಲ್ಲಿ ಅಗ್ನಿ ದುರಂತ; ಮಹಿಳೆಯರು, ಮಕ್ಕಳು ಸೇರಿ 24 ಮಂದಿ ದಾರುಣ ಸಾವು
ಪ್ರಜ್ವಲ್ ರೇವಣ್ಣ ಪ್ರಕರಣ ಗಂಭೀರವಾಗಿದ್ದರೂ ರಾಜ್ಯ ಸರ್ಕಾರ ಅದರಲ್ಲಿ ರಾಜಕಾರಣ ಮಾಡುತ್ತಿದೆ. ಆದರೆ, ಕೇಂದ್ರ ಸರ್ಕಾರ ಕಾನೂನು ಕ್ರಮವನ್ನು ಅನುಸರಿಸುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.