ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಎರಡನೇ ಬಾರಿ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅವರು ಮಂಗಳವಾರ ಅಧಿಕಾರ ವಹಿಸಿಕೊಂಡರು.
ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಹಾಗೂ ನವೀಕೃತ ಇಂಧನ ಖಾತೆ ಹೊಣೆ ಹೊತ್ತಿರುವ ಜೋಶಿ ಮಂಗಳವಾರ ಆಯಾ ಖಾತೆಗಳ ಹಿಂದಿನ ಸಚಿವರುಗಳಿಂದ ಅಧಿಕಾರ ಸ್ವೀಕರಿಸಿದರು.
ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ಜೂ. 29ರಂದು ನಿವೃತ್ತ ನ್ಯಾ. ಚಂದ್ರಶೇಖರಯ್ಯಗೆ ಅಭಿನಂದನೆ
ಮೊದಲು ಶ್ರೀಪಾದ ನಾಯಕ್ ಅವರಿಂದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಅಧಿಕಾರ ವಹಿಸಿಕೊಂಡರು.
ಇಂಧನದಲ್ಲಿ ಸ್ವಾವಲಂಬನೆ
2047ರ ವೇಳೆಗೆ ಭಾರತ ಇಂಧನ ಸ್ವಾವಲಂಬನೆ ಸಾಧಿಸುವುದೇ ನಮ್ಮ ಸಂಕಲ್ಪವಾಗಿದೆ ಎಂದು ತಿಳಿಸಿದ ಸಚಿವ ಪ್ರಲ್ಹಾದ್ ಜೋಶಿ, ಹೊಸ ಮತ್ತು ನವೀಕರಿಸಬಹುದಾದ ಇಂಧನದಲ್ಲಿ ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ರೂಪಿಸುವ ದೃಷ್ಟಿಯೊಂದಿಗೆ ಹೊಸ ಹೊಸ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಹಾಕಿಕೊಂಡು ಮುಂದುವರಿಯುತ್ತೇವೆ ಎಂದು ಜೋಶಿ ಹೇಳಿದರು.
ಇನ್ನು, ಪಿಯೂಷ್ ಗೋಯಲ್ ಅವರಿಂದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆ ಅಧಿಕಾರ ವಹಿಸಿಕೊಂಡರು.
ಇದನ್ನೂ ಓದಿ: Paris Olympics 2024: ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಕನ್ನಡಿಗ ಬೋಪಣ್ಣ, ಸುಮಿತ್ ನಾಗಲ್
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತದ ಜನರಿಗೆ ಆಹಾರ ಭದ್ರತೆ ಖಾತರಿಪಡಿಸಲು ಬದ್ಧರಾಗಿದ್ದೇವೆ ಮತ್ತು ದೇಶದಲ್ಲಿ ನೈಸರ್ಗಿಕ ಕೃಷಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಮತ್ತಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.
ಕಚೇರಿ ಪೂಜೆ, ಕುಟುಂಬ ಭಾಗಿ
ಕೇಂದ್ರ ಸಚಿವರಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಹೊಸ ಖಾತೆಗಳ ಜವಾಬ್ದಾರಿ ಹೊತ್ತಿರುವ ಸಚಿವ ಪ್ರಲ್ಹಾದ್ ಜೋಶಿ, ಮಂಗಳವಾರ ಕಚೇರಿಯಲ್ಲಿ ತಮ್ಮ ಕುಟುಂಬ ಮತ್ತು ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ಲಕ್ಷ್ಮಿ ಪೂಜೆ ನೆರವೇರಿಸುವ ಮೂಲಕ ಕಾರ್ಯಾರಂಭ ಮಾಡಿದರು.
ಪತ್ನಿ ಜ್ಯೋತಿ ಜೋಶಿ ಮತ್ತು ಮಕ್ಕಳು, ಪ್ರಲ್ಹಾದ್ ಜೋಶಿ ಅವರ ನೂತನ ಕಚೇರಿಯಲ್ಲಿ ಲಕ್ಷ್ಮಿ ಪೂಜೆ ಸಲ್ಲಿಸಿ, ಸಚಿವರಿಗೆ ಶುಭ ಹಾರೈಸಿದರು.
ಇದನ್ನೂ ಓದಿ: Gold Rate Today: ಚಿನ್ನದ ದರದಲ್ಲಿ ತುಸು ಇಳಿಕೆ; ಇಷ್ಟಿದೆ ಇಂದಿನ ಬೆಲೆ
ಉನ್ನತ ಅಧಿಕಾರಿಗಳ ಸಭೆ
ನೂತನ ಖಾತೆಗಳ ಅಧಿಕಾರ ವಹಿಸಿಕೊಂಡ ಬಳಿಕ ಸಚಿವ ಪ್ರಲ್ಹಾದ್ ಜೋಶಿ, ಆಯಾ ಇಲಾಖೆಗಳ ಉನ್ನತ ಅಧಿಕಾರಿಗಳೊಂದಿಗೆ ಪ್ರಪ್ರಥಮವಾಗಿ ಔಪಚಾರಿಕ ಸಭೆ ನಡೆಸಿದರು. ಇದೇ ವೇಳೆ ಅಧಿಕಾರಿ ವರ್ಗ ಸಚಿವರನ್ನು ಅಭಿನಂದಿಸಿ, ಆದರದ ಸ್ವಾಗತ ಕೋರಿದರು.