ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi), ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಸಿದ್ದಾರೆ.
ಕೇಂದ್ರ ಸರ್ಕಾರದ ಅಧೀನದಲ್ಲಿರುವ ರಾಷ್ಟ್ರೀಯ ವೈದ್ಯಕೀಯ ಮಂಡಳಿ (ಎನ್.ಎಂ.ಸಿ) ಸದಸ್ಯರನ್ನಾಗಿ ನೇಮಿಸಲು ಶಿವಮೊಗ್ಗದ ವೈದ್ಯರೊಬ್ಬರಿಂದ ಪ್ರಲ್ಹಾದ್ ಜೋಶಿ ಅವರ ಕಚೇರಿಯಲ್ಲಿ ಲಂಚ ಪಡೆಯಲಾಗಿತ್ತು ಎಂದು ಭೋಜೇಗೌಡರು ಆರೋಪಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಭೋಜೇಗೌಡರು ಹೇಳುವ ವ್ಯಕ್ತಿ ನಮ್ಮ ಕಚೇರಿಯಲ್ಲೇ ಇಲ್ಲ. ಅಷ್ಟಕ್ಕೂ ಭೋಜೇಗೌಡರು ಪ್ರದರ್ಶಿಸಿರುವ ಪತ್ರ ಡಾಕ್ಟರೊಬ್ಬರಿಗೆ ಬರೆದ ಪತ್ರ. ನಾನು ಡಾಕ್ಟರ್ ಅಲ್ಲ. ನನ್ನ ಕಚೇರಿಗೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಅಷ್ಟೊಂದು ಖಚಿತ ದಾಖಲೆ ಭೋಜೇಗೌಡರಲ್ಲಿ ಇದ್ದಿದ್ದೇ ಆದಲ್ಲಿ, ಪತ್ರದಲ್ಲಿನ ಹೆಸರು ಮತ್ತು ಉಲ್ಲೇಖಗಳನ್ನು ಮರೆಮಾಚಿದ್ದೇಕೆ ಎಂದು ಜೋಶಿ ಪ್ರಶ್ನಿಸಿದ್ದಾರೆ. ಕೆಲಸ ವಿಚಾರಗಳನ್ನ ಹೈಡ್ ಮಾಡಿರುವುದು ಏಕೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರಶ್ನಿಸಿದ್ದಾರೆ.
ತಳ ಬುಡವಿಲ್ಲದೆ, ಜನರನ್ನು ದಾರಿ ತಪ್ಪಿಸುವ ಆಪಾದನೆಯನ್ನು ಭೋಜೇಗೌಡರು ಮಾಡಿದ್ದು, ಈ ತರಹದ ಆಧಾರರಹಿತ ಆಪಾದನೆಯನ್ನು ಗಂಭೀರವಾಗಿ ಪರಿಗಣಿಸುತ್ತೇನೆ ಎಂದು ಜೋಶಿ ಹೇಳಿದ್ದಾರೆ. ಇದು ತಮ್ಮ ತೇಜೋವಧೆ ಮಾಡುವ ಹುನ್ನಾರ ಎಂದು ಜೋಶಿ ಅವರು ಹೇಳಿದ್ದು, ಭೋಜೇಗೌಡರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ | Brahmin CM: ಪ್ರಲ್ಹಾದ ಜೋಶಿ ಕುರಿತ ಹೇಳಿಕೆಗೆ ಬದ್ಧ; ಸಮಾಜ ಒಡೆಯುತ್ತಿರುವುದು ಬಿಜೆಪಿ: ಎಚ್.ಡಿ. ಕುಮಾರಸ್ವಾಮಿ ಸಮರ್ಥನೆ