ಸುರತ್ಕಲ್: ಈ ಬಾರಿಯ ವಿಧಾನಸಭಾ ಚುನಾವಣಾ (Karnataka Election 2023) ಕಣ ರಂಗೇರಿದೆ. ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದು, ಮತದಾರರ ಮನ ಮುಟ್ಟಲು ಶ್ರಮಿಸುತ್ತಿದ್ದಾರೆ. ಇತ್ತ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಅವರು ಬುಧವಾರ (ಏಪ್ರಿಲ್ 26) ಮುತ್ತೂರು ಗ್ರಾಮ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ್ದು, ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.
ಕಾಂಗ್ರೆಸ್‌ನ ನಾಲ್ಕು ಗ್ಯಾರೆಂಟಿಗಳ ಕುರಿತು ಮಾಹಿತಿ ನೀಡಿದ ಇನಾಯತ್ ಅಲಿ, ಕ್ಷೇತ್ರದ ಪ್ರಗತಿಗಾಗಿ ಕಾಂಗ್ರೆಸ್‌ಗೆ ಬೆಂಬಲ ನೀಡುವಂತೆ ಕೋರಿ ಮತಯಾಚಿಸಿದರು.
ಸಮಗ್ರ ಅಭಿವೃದ್ಧಿಗೆ ಮತ ನೀಡಿ
ಚುನಾವಣಾ ಪ್ರಚಾರದ ಭಾಗವಾಗಿ ಇಂದು ಮುತ್ತೂರು ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ನೌಶಾದ್ ಮುತ್ತೂರು ಅವರ ನಿವಾಸದಲ್ಲಿ ಸಭೆ ನಡೆಸಿ ಮಾತನಾಡಿದ ಇನಾಯತ್ ಅಲಿ, “ಮಂಗಳೂರು ಉತ್ತರ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಮತ ನೀಡುವಂತೆ ಕೋರಿದ್ದೇನೆ. ಈ ವೇಳೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಜನವಿರೋಧಿ ಬಿಜೆಪಿ ಸರ್ಕಾರಕ್ಕೆ ಈ ಬಾರಿಯ ಚುನಾವಣೆಯಲ್ಲಿ ಮತದಾರರು ಬೆಂಬಲ ನೀಡುವುದಿಲ್ಲ. ಕ್ಷೇತ್ರದ ತುಂಬ ಕಾರ್ಯಕರ್ತರು ಹುಮ್ಮಸ್ಸಿನಿಂದ ಪ್ರಚಾರ ನಡೆಸುತ್ತಿದ್ದು, ಗೆಲ್ಲುವ ವಿಶ್ವಾಸ ದುಪ್ಪಟ್ಟಾಗಿದೆ” ಎಂದು ಹೇಳಿದರು.
ಇದನ್ನೂ ಓದಿ: Karnataka Election 2023: 80 ವರ್ಷ ದಾಟಿದವರು ಏ.29ರಿಂದ ಮನೆಯಿಂದಲೇ ಮತದಾನ; ಗೌಪ್ಯತೆಗೇನು ಕ್ರಮ?
ಬಿಜೆಪಿ ಪಕ್ಷ ಇಂದು ಕ್ಷೇತ್ರದಲ್ಲಿ ಸೋಲಿನ ಭಯದಿಂದ ಸುಳ್ಳು ಸುದ್ದಿ ಹರಡುತ್ತಿದೆ. ಅಪಪ್ರಚಾರಗಳ ಮೊರೆ ಹೋಗಿದೆ. ಆದರೆ, ಜನಕ್ಕೆ ಯಾವುದು ಸುಳ್ಳು, ಯಾವುದು ಸತ್ಯ ಎಂಬುದು ಚೆನ್ನಾಗಿ ಗೊತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸುಭಿಕ್ಷ ಸರ್ಕಾರ ಸಿಗಲಿದೆ. ಆ ನಿಟ್ಟಿನಲ್ಲಿ ಮತದಾರರು ನಮ್ಮ ಪರವಾಗಿ ಮತ ಹಾಕಲಿದ್ದಾರೆ ಎಂದು ಹೇಳಿದರು. ಈ ವೇಳೆ ಹಲವು ಮಂದಿ ಇನಾಯತ್ ಅಲಿ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.