Site icon Vistara News

Accident: ಅವೈಜ್ಞಾನಿಕ ಕಾಮಗಾರಿಗೆ ಬೈಕ್ ಸವಾರ ಬಲಿ: ಸೇತುವೆ ಮೇಲಿಂದ ಹಳ್ಳಕ್ಕೆ ಬಿದ್ದು ಸ್ಥಳದಲ್ಲೇ ಮೃತ್ಯು

shivakumar

ತುಮಕೂರು: ಇಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಸೇತುವೆ ಕಾಮಗಾರಿಗೆ ವಾಹನ‌ ಸವಾರರೊಬ್ಬರು ಬಲಿಯಾಗಿದ್ದಾರೆ. ತುಮಕೂರಿನ ಜ್ಯೋತಿಪುರದಲ್ಲಿ ಬೈಕ್‌ ಸವಾರರೊಬ್ಬರು ನಿಯಂತ್ರಣ ತಪ್ಪಿ ಸೇತುವೆ‌ ಮೇಲಿಂದ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತುಮಕೂರಿನ ಆಚಾರ್ಯ ಐಟಿಐ ಕಾಲೇಜಿನಲ್ಲಿ ಗುಮಾಸ್ತನಾಗಿ ಕಾರ್ಯನಿರ್ವಹಿಸುತ್ತಿದ್ದ ಶಿವಕುಮಾರ್ (೩೮) ಎಂಬವರೇ ಮೃತ ದುರ್ದೈವಿ.

ಅವೈಜ್ಞಾನಿಕ ಕಾಮಗಾರಿಯ ನೋಟ.. ಇಲ್ಲಿ ಯಾವ ತಡೆಗಳೂ ಇಲ್ಲ!

ಜ್ಯೋತಿ ನಗರದಲ್ಲಿ ರಸ್ತೆ ಮತ್ತು ಸೇತುವೆ ಕಾಮಗಾರಿ ನಡೆಯುತ್ತಿದ್ದು, ಸೇತುವೆ ಪ್ರವೇಶಿಸುವ ದಾರಿಯಲ್ಲಿ ಯಾವುದೇ ಸೂಚನಾ ಫಲಕಗಳನ್ನು ಅಳವಡಿಸಲಾಗಿಲ್ಲ. ಹೀಗಾಗಿ ಶಿವಕುಮಾರ್‌ ಅವರು ಕಾಮಗಾರಿಯ ಎಡವಟ್ಟುಗಳನ್ನು ಗಮನಿಸದೆ ಧಾವಿಸಿದ್ದರಿಂದ ಸೇತುವೆಯಿಂದ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.

ಮಂಡ್ಯ ಮೂಲದ ಶಿವಕುಮಾರ್‌ ಅವರು ಪ್ರಸಕ್ತ ತುಮಕೂರಿನ ಬೆಳಗುಂಬ ಗ್ರಾಮದಲ್ಲಿ ವಾಸವಾಗಿದ್ದಾರೆ. ಪಲ್ಸರ್ ಬೈಕ್‌ನಲ್ಲಿ ತುಮಕೂರಿನಿಂದ ಬೆಳಗುಂಬ ಕಡೆಗೆ ಹೋಗುತ್ತಿದ್ದಾಗ ಘಟನೆ ನಡೆದಿದೆ.

ರಸ್ತೆ ಹಾಗೂ ಅವೈಜ್ಞಾನಿಕ ಸೇತುವೆ ಕಾಮಗಾರಿ ವಿರುದ್ದ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳಕ್ಕೆ ಕ್ಯಾತ್ಸಂದ್ರ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ. ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಕುಮಾರ್‌ ಅವರ ಪತ್ನಿ ಏಳು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದ್ದು, ಮನೆಗೆ ಆಧಾರ ಸ್ತಂಭವಾದ, ಬದುಕಗೆ ಆಧಾರವಾದ ವ್ಯಕ್ತಿಯ ಸಾವು ಇಡೀ ಕುಟುಂಬವನ್ನು ಕಂಗೆಡಿಸಿದೆ.

ಇದನ್ನೂ ಓದಿ | Accident | ತುಮಕೂರಿನಲ್ಲಿ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದ ಮಹಿಳೆಯರಿದ್ದ ಆಟೊ ಪಲ್ಟಿ, ಐವರಿಗೆ ಗಾಯ

Exit mobile version