ಬೆಂಗಳೂರು: ಕರ್ನಾಟಕದ ಯಾವ ಸಾರಿಗೆ ಬಸ್ ಹತ್ತಿದರೂ ಚಿಲ್ಲರೆ ಸಮಸ್ಯೆ ಎಂಬುದು ಪ್ರಯಾಣಿಕರು ಹಾಗೂ ನಿರ್ವಾಹಕರನ್ನು ಬಾಧಿಸುತ್ತದೆ. ಎಲ್ಲರಿಗೂ ಚಿಲ್ಲರೆ ಕೊಡಲು ಕಂಡಕ್ಟರ್‌ಗೆ ಸಾಧ್ಯವಾಗುವುದಿಲ್ಲ. ತುಂಬ ಪ್ರಯಾಣಿಕರ ಬಳಿ ಚಿಲ್ಲರೆಯೇ ಇರುವುದಿಲ್ಲ. ಇದರಿಂದಾಗಿ ನಿತ್ಯ ಬಸ್‌ಗಳಲ್ಲಿ ಕಂಡಕ್ಟರ್ ಹಾಗೂ ಪ್ರಯಾಣಿಕರ ಮಧ್ಯೆ ‘ಚಿಲ್ಲರೆ’ ಜಗಳ ಇದ್ದೇ ಇರುತ್ತದೆ. ಆದರೆ, ಇದನ್ನು ತಪ್ಪಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಒಳ್ಳೆಯ ಪ್ಲಾನ್ ರೂಪಿಸಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಯುಪಿಐ ಪೇಮೆಂಟ್ (UPI Payment) ವ್ಯವಸ್ಥೆ ಜಾರಿಗೆ ತರಲು ನಿಗಮ ನಿರ್ಧರಿಸಿದೆ.
ಹೌದು, ಚಿಲ್ಲರೆ ಸಮಸ್ಯೆ ನಿವಾರಿಸುವ ದಿಸೆಯಲ್ಲಿ ಏಕೀಕೃತ ಪಾವತಿ ವ್ಯವಸ್ಥೆ (UPI) ಜಾರಿಗೆ ತರಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ. ಹಾಗಾಗಿ, ಪ್ರಯಾಣಿಕರು ಇನ್ನು ಮುಂದೆ ಪೇಟಿಎಂ, ಫೋನ್‌ಪೇ, ಗೂಗಲ್ ಪೇ ಮೂಲಕ ಹಣ ಪಾವತಿಸಿ, ಟಿಕೆಟ್ ಖರೀದಿಸಬಹುದಾಗಿದೆ. ನಗದು ರಹಿತ ಪಾವತಿ ಮೂಲಕ ಗ್ರಾಹಕರು ಹಾಗೂ ಸಾರಿಗೆ ಸಿಬ್ಬಂದಿಗೆ ಅನುಕೂಲ ಕಲ್ಪಿಸುವುದು ಕೆಎಸ್‌ಆರ್‌ಟಿಸಿ ಉದ್ದೇಶವಾಗಿದೆ.
ಪ್ರಾಯೋಗಿಕವಾಗಿ ಜಾರಿ
ಕೆಲ ಆಯ್ದ ಬಸ್‌ಗಳಲ್ಲಿ ಮಾತ್ರ ಪ್ರಾಯೋಗಿಕವಾಗಿ ಯುಪಿಐ ಪೇಮೆಂಟ್ ವ್ಯವಸ್ಥೆ ಜಾರಿಗೆ ಬಂದಿದೆ. ಮುಂದಿನ ದಿನಗಳಲ್ಲಿ ಕೆಎಸ್‌ಆರ್‌ಟಿಸಿಯ ಎಲ್ಲ ಬಸ್‌ಗಳಲ್ಲಿ ಯುಪಿಐ ಮೂಲಕ ಪಾವತಿಸಿ ಟಿಕೆಟ್ ಪಡೆಯುವ ವ್ಯವಸ್ಥೆ ಜಾರಿಗೆ ಬರಲಿದೆ. ಮೊಬೈಲ್ ಮೂಲಕ ನೇರ ಬ್ಯಾಂಕ್ ಖಾತೆಯಿಂದ ಕೆಎಸ್‌ಆರ್‌ಟಿಸಿ ಬ್ಯಾಂಕ್ ಖಾತೆಗೆ ಗ್ರಾಹಕರ ಹಣ ಪಾವತಿ ಆಗಲಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: KSRTC Bus seized : ಕೆಎಸ್‌ಆರ್‌ಟಿಸಿ ಬಸ್ ಜಪ್ತಿ ಮಾಡಿದ ಕೋರ್ಟ್; ರೂಟ್ ಬದಲಿಸಿದರೂ ಬೆನ್ನಟ್ಟಿ ಹಿಡಿದ್ರು!
ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಕ್ಯೂಆರ್ ಕೋಡ್‌ಗಳನ್ನು ಅಳವಡಿಸಲಾಗುತ್ತದೆ. ಆಗ ಗ್ರಾಹಕರು ಫೋನ್‌ಪೇ, ಗೂಗಲ್ ಪೇ, ಪೇಟಿಎಂ ಸೇರಿ ಯಾವುದೇ ಆನ್‌ಲೈನ್ ಅಪ್ಲಿಕೇಶನ್‌ಗಳ ಮೂಲಕ ಹಣವನ್ನು ಪಾವತಿಸಿ, ಟಿಕೆಟ್ ಖರೀದಿಸಬಹುದಾಗಿದೆ. ಕೆಎಸ್‌ಆರ್‌ಟಿಸಿ ನಿರ್ಧಾರವನ್ನು ಕಂಡಕ್ಟರ್‌ಗಳು ಹಾಗೂ ಪ್ರಯಾಣಿಕರು ಸ್ವಾಗತಿಸಿದ್ದಾರೆ ಎಂದು ತಿಳಿದುಬಂದಿದೆ.