ಮಂಗಳೂರು: ರಾಜ್ಯದಲ್ಲಿ ಹಿಜಾಬ್ ದಂಗಲ್ ನಡುವೆ ಗುರುವಾರದಿಂದ(ಜೂನ್ 9) ಪಿಯು ಕಾಲೇಜುಗಳು ಶುರುವಾಗಿವೆ. ಹಿಜಾಬ್ ವಿವಾದದ ಮೂಲಕ ಸುದ್ದಿಯಾಗಿದ್ದ ಉಪ್ಪಿನಂಗಡಿ ಕಾಲೇಜಿನಲ್ಲಿ ಕೊನೆಗೂ ಮುಸ್ಲಿಂ ವಿದ್ಯಾರ್ಥಿನಿಯರು ಪಟ್ಟು ಸಡಿಲಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ತೆಗೆದಿಟ್ಟು 46 ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದಾರೆ.
ವಾರದ ಹಿಂದೆ ಅಮಾನತ್ತಾಗಿದ್ದ 6 ವಿದ್ಯಾರ್ಥಿಗಳೂ ಹಿಜಾಬ್ ಕಳಚಿ ತರಗತಿಗೆ ಹಾಜರಾಗಿದ್ದು, ಸದ್ಯ ಒಂದು ವಾರ ತರಗತಿ ನಿರ್ಬಂಧಕ್ಕೆ ಒಳಗಾಗಿರೋ 24 ವಿದ್ಯಾರ್ಥಿನಿಯರು ನಿರ್ಬಂಧದ ಅವಧಿ ಮುಗಿದ ಬಳಿಕ ಸೋಮವಾರ ತರಗತಿಗೆ ಹಾಜರಾಗುವ ಸಾಧ್ಯತೆ ಇದೆ.
ಇದನ್ನೂ ಓದಿ | ಹಿಜಾಬ್ ಬೇಕೆಂದು ಪಟ್ಟು ಹಿಡಿದ 24 ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶ ನಿರ್ಬಂಧ
ಸದ್ಯ ಹಿಜಾಬ್ ಹಠ ಬಿಟ್ಟು ಶಿಕ್ಷಣದತ್ತ ವಿದ್ಯಾರ್ಥಿನಿಯರು ಮನಸ್ಸು ಮಾಡಿರುವುದರಿಂದ ವಿವಾದ ಅಂತ್ಯವಾಗುವ ಲಕ್ಷಣಗಳು ಗೋಚರಿಸಿವೆ. ಕಾಲೇಜು ಆಡಳಿತದಿಂದ ವಿದ್ಯಾರ್ಥಿಗಳ ಸಸ್ಪೆಂಡ್ ನಿರ್ಣಯದ ಬೆನ್ನಲ್ಲೇ ಎಚ್ಚೆತ್ತ ವಿದ್ಯಾರ್ಥಿನಿಯರು, ಕಾಲೇಜಿನಿಂದ ಟಿಸಿ ಕೊಡುವ ಮುನ್ನ ಪಟ್ಟು ಸಡಿಲಿಸಿದ್ದಾರೆ. ವಿವಾದದ ಸುದ್ದಿ ವರದಿ ಮಾಡಿದ್ದ ಮೂವರು ಪತ್ರಕರ್ತರ ವಿರುದ್ಧ ಈ ವಿದ್ಯಾರ್ಥಿಗಳು ಪೊಲೀಸರಿಗೆ ದೂರು ನೀಡಿದ್ದರು. ಕಾಲೇಜು ಆಡಳಿತದ ಖಡಕ್ ಕ್ರಮದ ಸೂಚನೆ ಬೆನ್ನಲ್ಲೇ ಪರಿಸ್ಥಿತಿ ಶಾಂತಗೊಂಡಿದೆ.
ಪಿಯು ಕಾಲೇಜು ಪ್ರವೇಶಾತಿಗೆ ಮಾರ್ಗಸೂಚಿ ನೀಡಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ, ಸಮವಸ್ತ್ರ ವಿಚಾರದಲ್ಲಿ ಹೈಕೋರ್ಟ್ ತೀರ್ಪು ಪಾಲಿಸುವಂತೆ ಸೂಚಿಸಿದೆ. ಹಿಜಾಬ್ ಧರಿಸಿ ಬಂದರೆ ತರಗತಿಗೆ ಅನುಮತಿ ಇಲ್ಲ, ಕಾಲೇಜು ಅಭಿವೃದ್ಧಿ ಸಮಿತಿ ಸೂಚಿಸುವ ಸಮವಸ್ತ್ರ ಪಾಲನೆ ಕಡ್ಡಾಯ ಎಂದು ತಿಳಿಸಲಾಗಿದೆ.
ಇದನ್ನೂ ಓದಿ | ಹಿಜಾಬ್‌ಗೆ ಹಟ ಹಿಡಿಯುವವರು ಪಾಕ್, ಸೌದಿಗೆ ಹೋಗಿ ನೋಡಲಿ: ಖಾದರ್ ಬುದ್ಧಿಮಾತು