ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (UPSC)ದ 2021ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟಸಿದ್ದು, ಒಟ್ಟು 685 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇವರಲ್ಲಿ 244 ಮಂದಿ ಸಾಮಾನ್ಯ ಅಭ್ಯರ್ಥಿಗಳಾಗಿದ್ದರೆ, 73 ಮಂದಿ ಆರ್ಥಿಕವಾಗಿ ದುರ್ಬಲ ವರ್ಗ (ಇಡಬ್ಲ್ಯುಎಸ್) ಅಭ್ಯರ್ಥಿಗಳಾಗಿದ್ದಾರೆ. 203 ಮಂದಿ ಒಬಿಸಿ, 105 ಮಂದಿ ಎಸ್‌ಸಿ, 60 ಮಂದಿ ಎಸ್‌ಟಿ ಅಭ್ಯರ್ಥಿಗಳಾಗಿದ್ದಾರೆ.
ಫಲಿತಾಂಶವನ್ನು ಯುಪಿಎಸ್‌ಸಿಯ ವೆಬ್‌ಸೈಟ್ https://www.upsc.gov.in/ ನಲ್ಲಿ ವೀಕ್ಷಿಸಬಹುದಾಗಿದೆ. ದೆಹಲಿಯ ಶ್ರುತಿ ಶರ್ಮಾ ಟಾಪರ್ ಆಗಿ ಹೊರಹೊಮ್ಮಿದ್ದು, ಇವರು ಜೆಎನ್‌ಯುದ ಹಳೇ ವಿದ್ಯಾರ್ಥಿನಿಯಾಗಿದ್ದಾಳೆ. ಎರಡನೇ ಸ್ಥಾನ ಅಂಕಿತಾ ಅಗರ್‌ವಾಲ್ ಎಂಬುವರು ಪಡೆದುಕೊಂಡಿದ್ದರೆ, ಮೂರನೇ ಸ್ಥಾನ ಗಾಮಿನಿ ಸಿಂಗ್ಲಾ ಪಾಲಾಗಿದೆ. ಹಾಗೇ, ನಾಲ್ಕನೇ ಸ್ಥಾನ ಐಶ್ವರ್ಯಾ ವರ್ಮಾ, 5 ನೇ ಸ್ಥಾನ ಉತ್ಕರ್ಷ್ ದ್ವಿವೇದಿ, 6. ಯಕ್ಷ ಚೌಧರಿ, 7. ಸಮ್ಯಕ್ ಎಸ್. ಜೈನ್, 8. ಇಶಾಂತ್ ರಾಠಿ, 9. ಪ್ರೀತಂ ಕುಮಾರ್ ಮತ್ತು 10ನೇ ಸ್ಥಾನದಲ್ಲಿ ಹರ್ಕೀರತ್ ಸಿಂಗ್ ರಾಂಧವ ಇದ್ದಾರೆ. ಟಾಪ್ 4 ಸ್ಥಾನದಲ್ಲಿ ಹೆಣ್ಣುಮಕ್ಕಳೇ ಇರುವುದು ವಿಶೇಷ ಎನ್ನಿಸಿದೆ.
ಇಂದು ಬಿಡುಗಡೆಯಾದ ಯುಪಿಎಸ್‌ಸಿ ಫಲಿತಾಂಶ ಚೆಕ್ ಮಾಡುವ ವಿಧಾನ ಹೀಗಿದೆ..
- ಕೇಂದ್ರ ಲೋಕಸೇವಾ ಆಯೋಗದ ಅಧಿಕೃತ ವೆಬ್‌ಸೈಟ್ upsc.gov.in ಗೆ ಭೇಟಿ ನೀಡಿ.
- ಹೋಂ ಪೇಜ್‌ನಲ್ಲಿ ಕಾಣಿಸುವ ‘UPSC Civil Service final result 2021’ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಆಗ ಅಭ್ಯರ್ಥಿಗಳ ಫಲಿತಾಂಶದ ವಿವರ ಒಳಗೊಂಡ ಪಿಡಿಎಫ್ ಫೈಲ್ ಸ್ಕ್ರೀನ್ ಮೇಲೆ ತೆರೆದುಕೊಳ್ಳುತ್ತದೆ.
- ಅಲ್ಲಿ ನೀವು ರಿಸಲ್ಟ್ ನೋಡಬಹುದು ಮತ್ತು ಒಂದು ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಅಭಿನಂದನೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ
ಯುಪಿಎಸ್‌ಸಿ ಸಿವಿಲ್ ಸರ್ವೀಸ್ ಅಂತಿಮ ಪರೀಕ್ಷೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ. ಯಾರೆಲ್ಲ ಯುಪಿಎಸ್‌ಸಿ ಸಿವಿಲ್ ಸರ್ವೀಸ್ 2021ನೇ ಸಾಲಿನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದೀರೋ ಅವರಿಗೆ ಅಭಿನಂದನೆಗಳು. ಇವರೆಲ್ಲ ಆಡಳಿತಾತ್ಮಕ ಹುದ್ದೆಗಳಿಗೇರುವ ಮೂಲಕ, ಭಾರತದ ಅಭಿವೃದ್ಧಿ ಯಾನದಲ್ಲಿ ಜೊತೆಯಾಗಲಿದ್ದಾರೆ. ಅದರಲ್ಲೂ ಆಜಾದಿ ಕಾ ಅಮೃತ್ ಮಹೋತ್ಸವದ ಹೊತ್ತಲ್ಲೇ ನಮಗೆ ಮತ್ತಷ್ಟು ಬಲ ಬಂದಿದೆ. ಎಲ್ಲರಿಗೂ ಶುಭ ಹಾರೈಕೆಗಳು ಎಂದಿದ್ದಾರೆ.
ಹಾಗೇ, ಯಾರೆಲ್ಲ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೋ ಅವರನ್ನೂ ಉಲ್ಲೇಖಿಸಿ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ಪರೀಕ್ಷೆಯಲ್ಲಿ ಫೇಲ್ ಆದವರ ಹತಾಶೆ ನನಗೆ ಅರ್ಥವಾಗುತ್ತದೆ. ಆದರೆ ಯಾರೂ ನಿರಾಸೆ ಆಗಬಾರದು. ಅವರೂ ಕೂಡ ಭಾರತ ಹೆಮ್ಮೆ ಪಡುವಂತ ಕೆಲಸ ಮಾಡುತ್ತಾರೆ ಎಂಬ ಭರವಸೆ ನನಗೆ ಇದೆ. ಶುಭ ಹಾರೈಕೆಗಳು ಎಂದು ಹೇಳಿದ್ದಾರೆ.
ಇದನ್ನೂ ಓದಿ: UPSC Calendar 2023-24: ಯಾವ ಪರೀಕ್ಷೆ ಯಾವಾಗ ನಡೆಯುತ್ತದೆ ಚೆಕ್ ಮಾಡಿಕೊಳ್ಳಿ…