ರಾಯಚೂರು: ಕೇಂದ್ರ ಲೋಕಸೇವಾ ಆಯೋಗದ (UPSC Result 2022) ಪರೀಕ್ಷೆಯಲ್ಲಿ ಕರ್ನಾಟಕದ 25ಕ್ಕೂ ಅಧಿಕ ಜನ ಉತ್ತೀರ್ಣರಾಗುವ ಮೂಲಕ ಈ ಬಾರಿ ಉತ್ತಮ ಸಾಧನೆ ಮಾಡಿದ್ದಾರೆ. ಇನ್ನು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸೌರಭ್ ಎ. ನರೇಂದ್ರ ಅವರು ಕರ್ನಾಟಕಕ್ಕೇ ಮೂರನೇ ರ‍್ಯಾಂಕ್ ಪಡೆದಿದ್ದಾರೆ. ಹಾಗೆಯೇ, ರಾಯಚೂರಿನ ಪಿ.ಶ್ರವಣ್ ಕುಮಾರ್ ಅವರು ದೇಶಕ್ಕೆ 222ನೇ ರ‍್ಯಾಂಕ್ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
ಧಾರವಾಡ ನಗರದ ದೇಸಾಯಿ ಕಾಲೋನಿ ಸಿಬಿ ನಗರದ ನಿವಾಸಿಯಾದ ಸೌರಭ್ ಎ. ನರೇಂದ್ರ ಅವರು ದೇಶಕ್ಕೆ 198ನೇ ರ‍್ಯಾಂಕ್ ಪಡೆದಿದ್ದಾರೆ. ಮೈಸೂರಿನಲ್ಲಿ ಬಿಇ ಪದವಿ ಪಡೆದಿರುವ ಸೌರಭ್ ಸಾಧನೆಗೆ ಪೋಷಕರು, ಕುಟುಂಬಸ್ಥರು ಹಾಗೂ ಅವರ ಗೆಳೆಯರು ಸಂತಸ ವ್ಯಕ್ತಪಡಿಸಿದ್ದಾರೆ.
ರಾಯಚೂರು ಜಿಲ್ಲೆ ಸಿರವಾರ ತಾಲೂಕು ಕಲ್ಲೂರು ಗ್ರಾಮದ ಪಿ. ಶ್ರವಣ್ ಕುಮಾರ್ ಅವರು ಐಎಎಸ್‌ಗೆ ಆಯ್ಕೆಯಾಗಿದ್ದಾರೆ. ಹರಿಯಾಣದಲ್ಲಿ ಐಆರ್‌ಎಸ್ ತರಬೇತಿ ಪಡೆಯುತ್ತಿರುವ ಶ್ರವಣ್ ಕುಮಾರ್, ಯುಪಿಎಸ್‌ಸಿಯಲ್ಲೂ ಉತ್ತಮ ರ‍್ಯಾಂಕ್ ಪಡೆದಿದ್ದಾರೆ. 2021ರಲ್ಲಿ ಶ್ರವಣ್ ಕುಮಾರ್ ಅವರು ಐಆರ್‌ಎಸ್‌ಗೆ ಆಯ್ಕೆಯಾದ ಕಾರಣ ತರಬೇತಿ ಪಡೆಯುತ್ತಿದ್ದಾರೆ. ಬಿ ಟೆಕ್ ಪದವಿ ಬಳಿಕ ಶ್ರವಣ್ ಕುಮಾರ್ ಐಎಎಸ್‌ಗೆ ಸಿದ್ಧತೆ ನಡೆಸುತ್ತಿದ್ದರು. ಶ್ರವಣ್ ಕುಮಾರ್ ಅವರ ತಂದೆ ರಾಘವೇಂದ್ರ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕರ್ನಾಟಕದ 25ಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಸಾಗಿದ್ದಾರೆ. ಒಟ್ಟಾರೆ 933 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ 345 ಮಂದಿ ಸಾಮಾನ್ಯ ಅಭ್ಯರ್ಥಿಗಳಾಗಿದ್ದರೆ, 99 ಮಂದಿ ಆರ್ಥಿಕವಾಗಿ ದುರ್ಬಲ ವರ್ಗ ಅಭ್ಯರ್ಥಿಗಳಾಗಿದ್ದಾರೆ. 263 ಮಂದಿ ಒಬಿಸಿ, 154 ಮಂದಿ ಎಸ್‌ಸಿ, 72 ಮಂದಿ ಎಸ್‌ಟಿ ಅಭ್ಯರ್ಥಿಗಳಾಗಿದ್ದಾರೆ.
ಇದನ್ನೂ ಓದಿ: UPSC Result 2022 : ಡ್ರೈವರ್ ಮಗ ಐಎಎಸ್ ಪರೀಕ್ಷೆ ಬರೆದಿದ್ದು ಅಮ್ಮನಿಗೆ ಗೊತ್ತೇ ಇರಲಿಲ್ಲ!
ದೆಹಲಿಯ ಇಷಿತಾ ಕಿಶೋರ್ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಎರಡನೇ ಸ್ಥಾನ ಗರಿಮಾ ಲೋಹಿಯಾ ಎಂಬುವರು ಪಡೆದುಕೊಂಡಿದ್ದರೆ, ಮೂರನೇ ಸ್ಥಾನ ಉಮಾ ಹರತಿ ಎನ್ ಪಾಲಾಗಿದೆ. ಹಾಗೇ, ನಾಲ್ಕನೇ ಸ್ಥಾನ ಸ್ಮೃತಿ ಮಿಶ್ರಾ ಪಾಲಾಗಿದೆ. ಮಯೂರ್ ಹಜಾರಿಯಾ, ಗಹನ್ ನವ್ಯಾ, ವಾಸಿಂ ಅಹ್ದ್ ಭಟ್, ಅನಿರುದ್ಧ ಯಾದವ್, ಕನಿಕಾ ಗೋಯಲ್ ಮತ್ತು ರಾಹುಲ್ ವಾಸ್ತವ್ ಕ್ರಮವಾಗಿ ಐದರಿಂದ ಹತ್ತನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಬಾರಿಯೂ ಮೊದಲ ಮೂರು ಸ್ಥಾನಗಳು ಮಹಿಳಾ ಅಭ್ಯರ್ಥಿಗಳ ಪಾಲಾಗಿದೆ.